ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ಮತ್ತಷ್ಟು ಕಗ್ಗಂಟು, ನಾಳೆಯಿಂದ ಆರಂಭ ಆಗಬೇಕಿರುವ ಅಧ್ಯಕ್ಷೀಯ ಪ್ರಕ್ರಿಯೆ

ನವದೆಹಲಿ(ಆ.20):  ಕಾಂಗ್ರೆಸ್‌ ಪಕ್ಷದ ನೂತನ ಅಧ್ಯಕ್ಷರ ಆಯ್ಕೆಗೆ ಆ.21ರಿಂದ ಸೆ.20ರ ನಡುವೆ ಚುನಾವಣೆ ನಿಗದಿಯಾಗಿದೆಯಾದರೂ, ಮುಂದಿನ ಅಧ್ಯಕ್ಷರು ಯಾರು ಎಂಬುದು ನಿರ್ಧಾರವಾಗದ ಕಾರಣ ಇಡೀ ವಿಷಯ ಕಗ್ಗಂಟಾಗಿದೆ. ರಾಹುಲ್‌ ಗಾಂಧಿ ಮತ್ತೊಮ್ಮೆ ಪಕ್ಷವನ್ನು ಮುನ್ನಡೆಸಬೇಕು ಎಂದು ಎಲ್ಲ ಸ್ತರದ ಬಹುತೇಕ ನಾಯಕರು ಆಗ್ರಹಿಸುತ್ತಿದ್ದರೂ, ಅವರು ಮನಸ್ಸು ಮಾಡದ ಕಾರಣ ಅಧ್ಯಕ್ಷರ ಆಯ್ಕೆ ಗೋಜಲಾಗಿದೆ.

ಒಂದು ವೇಳೆ, ರಾಹುಲ್‌ ಒಪ್ಪದೇ ಇದ್ದ ಪಕ್ಷದಲ್ಲಿ ಹಾಲಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ಅವರನ್ನೇ ಮುಂದುವರಿಸಿ, ದೈನಂದಿನ ವ್ಯವಹಾರ ನೋಡಿಕೊಳ್ಳಲು ಇಬ್ಬರು ಅಥವಾ ಮೂವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಕುರಿತಂತೆಯೂ ಚರ್ಚೆ ನಡೆದಿದೆ. ಒಂದು ವೇಳೆ ಇದು ಕಾರ್ಯಸಾಧುವಾಗದೇ ಇದ್ದರೆ, ನೆಹರು- ಗಾಂಧಿ ಕುಟುಂಬದ ಹೊರಗಿನವರು ಅಧ್ಯಕ್ಷರಾಗಬಹುದು. ಅಂತಹ ಸನ್ನಿವೇಶಕ್ಕೆ ಅಶೋಕ್‌ ಗೆಹ್ಲೋಟ್‌, ಮಲ್ಲಿಕಾರ್ಜುನ ಖರ್ಗೆ, ಮುಕುಲ್‌ ವಾಸ್ನಿಕ್‌ ಹಾಗೂ ಕುಮಾರಿ ಸೆಲ್ಜಾ ಅವರ ಹೆಸರು ರೇಸ್‌ನಲ್ಲಿವೆ ಎಂದು ಮೂಲಗಳು ತಿಳಿಸಿವೆ.

ಕಿತ್ತಾಟ, ನಾಯಕತ್ವ ವಿಚಾರ ಕೈಬಿಡಿ: ರಾಹುಲ್‌ ಸೂಚನೆ

ಈ ನಡುವೆ, ‘ಅಧ್ಯಕ್ಷರ ಆಯ್ಕೆಗೆ ಎಂದು ಚುನಾವಣೆ ನಡೆಯಬೇಕು ಎಂಬುದು ಸೇರಿದಂತೆ ನಿಖರ ವೇಳಾಪಟ್ಟಿಯನ್ನು ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯಾಗಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ನಿರ್ಧರಿಸಲಿದೆ’ ಎಂದು ಪಕ್ಷದ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ ಮಿಸ್ತ್ರಿ ತಿಳಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆ ಕುರಿತು ಬಹುತೇಕ ಮುಂದಿನ ವಾರದ ವೇಳೆಗೆ ಸ್ಪಷ್ಟಚಿತ್ರಣ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಮಸ್ಯೆ ಏನು?:

ಅಧ್ಯಕ್ಷರಾಗಲು ರಾಹುಲ್‌ ಒಪ್ಪುತ್ತಿಲ್ಲ. ಮುಂದುವರಿಯಲು ಸೋನಿಯಾ ಅವರಿಗೆ ಆರೋಗ್ಯ ಸಮಸ್ಯೆ ಇದೆ. ಬೇರೊಬ್ಬರಿಗೆ ಹೊಣೆ ವಹಿಸೋಣ ಎಂದರೆ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರಂತಹ ನಂಬಿಕಸ್ಥ ಬಂಟರು ನೆಹರು- ಗಾಂಧಿ ಕುಟುಂಬಕ್ಕೆ ಸಿಗುತ್ತಿಲ್ಲ. ಹಾಗೊಂದು ವೇಳೆ, ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ, ಎಲ್ಲರೂ ಒಗ್ಗೂಡಿ ಮುನ್ನಡೆಯುವುದು ಕಷ್ಟಎಂಬ ಪರಿಸ್ಥಿತಿ ಇದೆ.

ರಾಹುಲ್‌ ಏಕೆ ಒಪ್ಪುತ್ತಿಲ್ಲ?:

ದೇಶಾದ್ಯಂತ ವಂಶಪಾರಂಪರ‍್ಯ ರಾಜಕಾರಣಕ್ಕೆ ವಿರುದ್ಧವಾದ ಮನಸ್ಥಿತಿ ಇದೆ. ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನ ಒಪ್ಪಿಕೊಂಡರೆ ತಾವು ದುರ್ಬಲವಾಗಬೇಕಾಗುತ್ತದೆ ಎಂದು ರಾಹುಲ್‌ ವಾದಿಸುತ್ತಿದ್ದಾರೆ ಎನ್ನಲಾಗಿದೆ.