ಸೆ.29ಕ್ಕೆ ಮತ್ತೊಂದು ಬಂದ್ ಅಗತ್ಯವಿಲ್ಲ, ಮಳೆಗಾಗಿ ಪ್ರಾರ್ಥನೆ ಮಾಡೋಣ: ಡಿ.ಕೆ.ಶಿವಕುಮಾರ್
ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಬೆಂಗಳೂರು ಬಂದ್ ವೇಳೆ ರಾಜ್ಯದ ಶಾಂತಿಯುತ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸೆ.29ರಂದು ಮತ್ತೊಂದು ಬಂದ್ ಮಾಡುವ ಅಗತ್ಯವಿಲ್ಲ. ನ್ಯಾಯಾಲಯ ಕೂಡ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಸೆ.28): ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಬೆಂಗಳೂರು ಬಂದ್ ವೇಳೆ ರಾಜ್ಯದ ಶಾಂತಿಯುತ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸೆ.29ರಂದು ಮತ್ತೊಂದು ಬಂದ್ ಮಾಡುವ ಅಗತ್ಯವಿಲ್ಲ. ನ್ಯಾಯಾಲಯ ಕೂಡ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಪಕ್ಷಾತೀತವಾಗಿ ಹೋರಾಟ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಎಲ್ಲವೂ ಶಾಂತಿಯುತವಾಗಿ ನಡೆದಿದೆ.
ಈ ಮಧ್ಯೆ, ಕೆಲ ಸಂಘಟನೆಗಳು ಸೆ.29ಕ್ಕೆ ಮತ್ತೆ ರಾಜ್ಯ ಬಂದ್ ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ಅಗತ್ಯವಿಲ್ಲ. ನ್ಯಾಯಾಲಯ ಕೂಡ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾವಿಸಿದ್ದೇನೆ. ಹಾಗಾಗಿ ಮುಂದೆ ರಾಜ್ಯದ ಜನರೆಲ್ಲರೂ ಮಳೆಗಾಗಿ ಪ್ರಾರ್ಥನೆ ಮಾಡೋಣ ಎಂದರು. ಇನ್ನು, ಬಂದ್ ವೇಳೆ ಜಯನಗರದ ಹೋಟೆಲ್ ವೊಂದರ ಮೇಲೆ ಕಲ್ಲು ತೂರಿ ಕೆಲ ಕಿಡಿಗೇಡಿಗಳು ದಾಂಧಲೆ ನಡೆಸಿರುವ ಪ್ರಕರಣ ಸಂಬಂಧ ಅವರು ಯಾರೇ ಆಗಿದ್ದರು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್ ಹೇಳಿದರು.
ಕೋರ್ಟ್ ಹೊರಗೆ ಕಾವೇರಿ ಸಮಸ್ಯೆ ಪರಿಹಾರಕ್ಕೆ ನಾವು ಸಿದ್ಧ: ಸಿಎಂ ಸಿದ್ದರಾಮಯ್ಯ
ಕುಮಾರಸ್ವಾಮಿಗೆ ತಿರುಗೇಟು: ರಾಜ್ಯದಲ್ಲಿ ಕನ್ನಡಿಗರ ಸರ್ಕಾರವಿದೆಯೋ ಸ್ಟಾಲಿನ್‌ಗೆ ಅಡವಿಟ್ಟ ಸರ್ಕಾರವಿದೆಯೋ ಎಂದಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ಟೀಕೆಗೆ ಇದೇ ವೇಳೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ಅವರು ತಮ್ಮ ಅಸ್ತಿತ್ವಕ್ಕೆ ಆರೋಪ ಮಾಡುತ್ತಾರೆ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಆಗುವುದಿಲ್ಲ. ಬೇಸರ ಮಾಡಿಕೊಳ್ಳಲೂ ಹೋಗುವುದಿಲ್ಲ. ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ದೇವೇಗೌಡರು ಏನು ಪತ್ರ ಬರೆದಿದ್ದರು. ಈಗ ಮೋದಿ ಅವರಿಗೆ ಏನು ಪತ್ರ ಬರೆದಿದ್ದಾರೆ ಎಂದು ಕುಮಾರಸ್ವಾಮಿ ಅವರಿಗೆ ಗೊತ್ತಿದೆಯೇ? ನೀರಿನ ವಿಚಾರದಲ್ಲಿ ರಾಜಕಾರಣ ಬಿಟ್ಟು ಕುಮಾರಸ್ವಾಮಿ ಅವರು ರಾಜ್ಯದ ಜನರ ಹಿತ ಕಾಪಾಡುವ ಕೆಲಸ ಮಾಡಲಿ ಎಂದರು.