ಲೋಕಾಯುಕ್ತ ಇದ್ದಿದ್ದರೆ ಅಂದೇ ಸಿದ್ದರಾಮಯ್ಯ ಜೈಲಿಗೆ ಹೋಗಿರುತ್ತಿದ್ದರು: ಕಟೀಲ್
ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತು ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತಾರೆಂದಿದ್ದಾರೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಸೆ.26): ಲೋಕಾಯುಕ್ತ ಇದ್ದರೆ ಅಂದೇ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು, ಕಾಂಗ್ರೆಸ್ಸಿಗರು ತಮ್ಮ ಅಧಿಕಾರವಧಿಯಲ್ಲಿ ಭ್ರಷ್ಟಾಚಾರ ಮುಚ್ಚಿಹಾಕಲು ಲೋಕಾಯುಕ್ತವನ್ನೇ ಮುಗಿಸಿದರು ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯನವರು ವಿರುದ್ಧ ಕಿಡಿ ಕಾರಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ಇಲಕಲ್ಲ ಪಟ್ಟಣದಲ್ಲಿ ಕಾರ್ಯಕರ್ತರ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ,ಇವತ್ತು ನಾವು ಲೋಕಾಯುಕ್ತವನ್ನ ಪುನಃ ತೆಗೆದಿದ್ದೇವೆ, ಓಪನ್ ಮಾಡಿದ್ದೇವೆ. 40 ಪರ್ಸೆಂಟ್ ಎನ್ನುವವರು ಪೂರ್ಣ ದಾಖಲೆ ಪಡೆದು ಲೋಕಾಯುಕ್ತಕ್ಕೆ ಹೋಗಿ ಎಂದು ಅಭಿಯಾನದ ವಿರುದ್ಧ ಪರೋಕ್ಷವಾಗಿ ಟಾಂಗ್ ನೀಡಿ, ಸುಳ್ಳು ಹೇಳಿ ಯಾವುದಕ್ಕೂ ದಾಖಲೆ ಕೊಡ್ತಿಲ್ಲ ಎಂದರಲ್ಲದೆ,ಮುಂಬರುವ ಚುನಾವಣೆ ಮುಂಚೆಯೇ ಸಿದ್ದರಾಮಯ್ಯನವರು ಜೈಲಿಗೆ ಹೋಗುತ್ತಾರೆ ಎಂದು ಹೇಳುವ ಮೂಲಕ ರಾಜಕೀಯ ದಾಳ ಉರುಳಿಸಿದರು. ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸುತ್ತಾರೆ ನಳಿನ್ ಕುಮಾರ್ ಕಟೀಲ್ ಹೇಳಿದರು. ನನ್ನ ಕಂಡ್ರೆ ಬಿಜೆಪಿಯವರಿಗೆ ಭಯ ಆಗುತ್ತೆ ಎಂದ ಸಿದ್ದು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಕಂಡ್ರೆ ಭಯ ಡಿಕೆಶಿ, ಖರ್ಗೆ, ಪರಮೇಶ್ವರಗೆ ಆಗಬೇಕು, ನಾವೆಲ್ಲಾ ಇವರನ್ನು ಬಿಡಿ. ಇವರ ಮುತ್ತಾತ ನೆಹರು ಜೊತೆ ಹೋರಾಟ ಮಾಡಿ ಬಂದವರು. ಯಾಕೆ ಭಯ ಬೀಳಬೇಕು, ಇವತ್ತು ಎಲ್ಲಾ ಕಾಂಗ್ರೆಸ್ ಮುಕ್ತ ಭಾರತವಾಗುತ್ತಿದೆ. ಸಿದ್ರಾಮಣ್ಣ ಮುಂದಿನ ಚುನಾವಣೆಯಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸೋ ಪರಿಸ್ಥಿತಿ ಬರುತ್ತೇ, ಅದನ್ನು ನಾವು ಮಾಡಿಸುತ್ತೇವೆ ಎಂದರು.
ಪೇ ಸಿಎಂ ಅಭಿಯಾನದ ಮೂಲಕ ಕಾಂಗ್ರೆಸ್ ಸಿಎಂ ಸ್ಥಾನಕ್ಕಿರುವ ಮೌಲ್ಯವನ್ನ ಅಪವಿತ್ರ ಮಾಡುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪೇ ಸಿಎಂ ಅಭಿಯಾನ ವಿಚಾರವಾಗಿ ಮಾತನಾಡಿ,ಮುಖ್ಯಮಂತ್ರಿಗಳ ಬಗ್ಗೆ ಒಂದು ಉದಾಹರಣೆ ಕೊಡಿ ನೋಡೋಣ, ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಒಂದು ಗೌರವ ಇದೆ. ಯಾಕೆ ಸುಳ್ಳು ಹೇಳ್ತೀರಿ. ಸಿಎಂ ಸ್ಥಾನಕ್ಕಿರುವ ಮೌಲ್ಯವನ್ನ ಕಾಂಗ್ರೆಸ್ ಅಪವಿತ್ರ ಮಾಡುತ್ತಿದೆ. ಸಿದ್ರಾಮಣ್ಣನ ಹಗರಣ ಬಹಳ ಇತ್ತು, ಈಗ ಅದನ್ನ ನಾವು ತೆಗೆಯುತ್ತೇವೆ. ಸಿದ್ದು ಸಿಎಂ ಇದ್ದಾಗ ದಾಖಲೆ ಕದ್ದು ಒಳಗಡೆ ಮುಚ್ಚಿ ಇಟ್ಟಿದ್ದಾರೆ.
ಹೀಗಾಗಿ ದಾಖಲೆ ಹುಡುಕುವುದು ನಮಗೆ ಕಷ್ಟವಾಗಿದೆ.ಅರ್ಕಾವತಿ, ಹಾಸ್ಟೆಲ್ ದಿಂಬು, ಮೊಟ್ಟೆ ಹೀಗೆ ಎಲ್ಲದರಲ್ಲೂ ಹಗರಣ ಮಾಡಿದ್ದಾರೆ ಎಂದು ಕಟೀಲ್ ಟಾಂಗ್ ನೀಡಿದರು. ಇದೇ ಸಮಯದಲ್ಲಿ, ಪಿಎಸ್ಐ ಅಕ್ರಮ ಹಗರಣ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಕಾಲದಲ್ಲೇ ಪಿಎಸ್ಐ ಹಗರಣ ಆಗಿದ್ದು, ತನಿಖೆ ಮಾಡಲು ಇವರಿಗೆ ಧೈರ್ಯ ಇರಲಿಲ್ಲ. ಡಿಐಜಿ ಹಂತದ ಅಧಿಕಾರಿಯನ್ನ ಜೈಲಿಗೆ ಹಾಕಿದ್ದೇವೆ, ನಮ್ಮ ಸರ್ಕಾರ ತನಿಖೆ ಪೂರ್ಣಗೊಳಿಸುತ್ತೇ. ಶಿಕ್ಷಕರ ನೇಮಕಾತಿಯಲ್ಲಿಯೂ ಅಕ್ರಮವಾಗಿದೆ, ಅದು ತನಿಖೆ ನಡಿಯುತ್ತಿದೆ. ಇದನ್ನು ಕಾಂಗ್ರೆಸ್ ಮಾಡಲಿಲ್ಲ, ಲೋಕಾಯುಕ್ತ ಬಂದ್ ಮಾಡಿದರು ಎಂದರು.
ಡ್ರಗ್ ಮತ್ತು ಸ್ಯಾಂಡ್ ಮಾಫಿಯಾದಿಂದಲೇ ಅಧಿಕಾರ ನಡೆಸಿದ್ದ ಸಿದ್ದರಾಮಯ್ಯ:
ಇನ್ನು ಡ್ರಗ್ ಮತ್ತು ಸ್ಯಾಂಡ್ ಮಾಫಿಯಾದಲ್ಲಿ ಕಾಂಗ್ರೆಸ್ಸನವರು ದುಡ್ಡು ಮಾಡಿದ್ದರು. ಡ್ರಗ್ಸ್ & ಸ್ಯಾಂಡ್ ಮಾಫಿಯಾ ಹಣದಿಂದಲೇ ಸಿದ್ದರಾಮಯ್ಯ ಅಧಿಕಾರ ನಡೆಸಿದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಡ್ರಗ್ಸ್ ಬಂದ್ ಮಾಡಿಸಿ, ಯಾರೇ ದೊಡ್ಡವರಿದ್ರೂ ಒಳಗಡೆ ಹಾಕೋ ಕೆಲಸ ಮಾಡಿದ್ದರು.
ಕಾಂಗ್ರೆಸ್ಸನವರು ತಮ್ಮ ಒಳಜಗಳ ಮುಚ್ಚಿ ಹಾಕೋಕೆ 40 ಪರ್ಸೆಂಟ್ ಆರೋಪದ ನಾಟಕವಾಡ್ತಿದ್ದಾರೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಟೀಲ್ ಅವರು, ಕಾಂಗ್ರೆಸ್ ದಿಕ್ಕು ತಪ್ಪಿ, ದಾರಿ ತಪ್ಪಿ ಅವರೊಳಗಿನ ಬೀದಿ ಕಾಳಗ ಮುಚ್ಚಿ ಹಾಕಲು 40% ಭ್ರಷ್ಟಾಚಾರ ಆರೋಪ ಮಾಡ್ತಾ ತಿರುಗುತ್ತಿದ್ದಾರೆ. ಜನ ಇದನ್ನ ತಿರಸ್ಕಾರ ಮಾಡಿದ್ದಾರೆ. ನಿಮ್ಮ ರಾಷ್ಟ್ರೀಯ ಅಧ್ಯಕ್ಷರು ಯಾಕೆ ಬೇಲ್ ಮೇಲೆ ಹೊರಗಿದ್ದಾರೆ? ಉಪಾಧ್ಯಕ್ಷ, ವಾದ್ರಾ ಯಾಕೆ ಬೇಲ್‌ಮೇಲೆ ಇದ್ದಾರೆ? ಎಂದು ಪ್ರಶ್ನೆ ಮಾಡಿ, ಇಡಿ ತನಿಖೆ ಮಾಡಿದ್ರೆ ಯಾಕೆ ಬೊಬ್ಬೆ ಹಾಕ್ತೀರಿ. ಹಾಗಾದ್ರೆ ಈ ದೇಶದ ಕಾನೂನಿನ ಮೇಲೆ ಗೌರವ ಇಲ್ವಾ ನಿಮಗೆ. ನಲಪಾಡ್‌ನ ಮೇಲೆ ಸಾವಿರ ಕೇಸ್ ಗಳಿವೆ. ಇವತ್ತು ನಿಮ್ಮಲ್ಲಿ ರಾಷ್ಟ್ರದಿಂದ ಹಿಡಿದು ಜಿಲ್ಲೆಯವರೆಗೂ ಹಗರಣದಲ್ಲೇ ಇದ್ದಾರೆ.
ಕಾಂಗ್ರೆಸ್ ಹಗರಣ ಬೀದಿಪಲಾಗುತ್ತೆ ಅಂತಾ ತಿಳಿದು. 40% ಎಂಬ ಸುಳ್ಳು ಅಪಾದನೆ ಕೆಲಸ ಮಾಡ್ತಿದೆ. ಒಂದು ಸಮುದಾಯವನ್ನು ಟಾರ್ಗೆಟ್ ಮಾಡ್ತಿದಾರೆ. ಪರೋಕ್ಷವಾಗಿ ಲಿಂಗಾಯತರನ್ನು ಟಾರ್ಗೆಟ್‌ಮಾಡ್ತಿದಾರೆ ಎಂದು, ಯಡಿಯೂರಪ್ಪ ಅವರನ್ನು ಇಳಿಸೋಕೆ ಪ್ರಯತ್ನ ಮಾಡಿದರು,ಕಾಂ ಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದಾಗ ಗಲಭೆ ಸೃಷ್ಟಿ ಮಾಡುತ್ತೆ, ಗೊಂದಲವನ್ನು ಸೃಷ್ಟಿ ಮಾಡುತ್ತೆ, ಎನ್ ಐಎ ತನಿಖೆಗಳು ಆಗ್ತಿವೆ. ಪಿಎಫ್ಐ, ಎಸ್ಡಿಪಿಐ ಭಯೋತ್ಪಾದಕ ನೀತಿಗಳು ಹೊರ ಬರ್ತಿವೆ. ಇದಕ್ಕೆ ಸಂಬಂಧ ಹೊಂದಿರುವವನ್ನು ಕೇಂದ್ರ ಬಂದಿಸುತ್ತೆ. ಇವೆಲ್ಲ ಕರ್ನಾಟಕದಲ್ಲಿ ಯಾಕೆ ಜಾಸ್ತಿ ಇವೆ ಎಂದು ಸಿದ್ದರಾಮಯ್ಯ ಕಾಲಘಟ್ಟದಲ್ಲಿ ಮಾಡಿದ ತಪ್ಪು ನೀತಿ ಎಂದು ಸಿದ್ದರಾಮಯ್ಯನವರು ವಿರುದ್ಧ ಗುಡುಗಿದರು.
ರಾಜ್ಯಕ್ಕೆ ಮೋದಿಯವರು ಬಂದು ಹೋದ ಬಳಿಕ ಕಾಂಗ್ರೆಸ್ ವಿಲವಿಲ ಒದ್ದಾಡುತ್ತಿದೆ:
ಇದೇ ಸಮಯದಲ್ಲಿ ಮಾತನಾಡಿದ ಕಟೀಲ, ರಾಜ್ಯಕ್ಕೆ ಮೋದಿಯವರು ಬಂದು ಹೋದ ಬಳಿಕ ಕಾಂಗ್ರೆಸ್ ವಿಲವಿಲ ಒದ್ದಾಡುತ್ತಿದೆ.ಕಾಂಗ್ರೆಸ್ಸನಲ್ಲಿ ಆಂತರಿಕ ಜಗಳ ಜಾಸ್ತಿಯಾಗಿದೆ. ಮುಂದಿನ ಸಿಎಂ ಯಾರು ಅಂತ ಕಾಂಗ್ರೆಸ್ ಬೀದಿ ಜಗಳ ಶುರುವಾಗಿದೆ ಎಂದು ವ್ಯಂಗ್ಯ ವಾಡಿ,ರಾಹುಲ್ ಭಾರತ ಜೋಡೋ ಜೊತೆ ಕಾಂಗ್ರೆಸ್ ಜೋಡೋ ಮಾಡಿದ್ರೆ ಒಳ್ಳೆಯದಿತ್ತು. ಕಾಶ್ಮೀರದಲ್ಲಿ ಪ್ರಮುಖರೆಲ್ಲಾ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್ ಇಲ್ಲದಂತಾಗಿದೆ. ಕಾಂಗ್ರೆಸ್ ಒಡಕು ಈ ದೇಶದಲ್ಲೇ ಕಾಣಿಸುತ್ತಿದೆ.
ಕಾಂಗ್ರೆಸ್ ಹಗರಣದ ಬಗ್ಗೆ ಸ್ಕ್ಯಾಮ್ ರಾಮಯ್ಯ ಹೆಸರಿನಡಿ ಬಿಜೆಪಿಯಿಂದ ಪುಸ್ತಕ ಬಿಡುಗಡೆ
23 ಜಿಲ್ಲೆಯ ಎಲ್ಲಾ ಪ್ರಮುಖರು ಕಾಂಗ್ರೆಸ್ ಬಿಟ್ಟು ಹೋಗುತ್ತಿದ್ದಾರೆ. ರಾಹುಲ್ ಪೂರ್ವ ತಯಾರಿ ಕಾರ್ಯಕ್ರಮಕ್ಕೆ ಸಿದ್ರಾಮಣ್ಣ ಹೋಗ್ತಿಲ್ಲ. ಇದೊಂದು ಡಿಕೆಶಿಯವರ ಕಾರ್ಯಕ್ರಮ ಅಂತಾಗಿದೆ. ಸಿದ್ದರಾಮೋತ್ಸವದಲ್ಲಿ ಡಿಕೆಶಿ ಭಾಗವಹಿಸಲಿಲ್ಲ. ದಲಿತ ಸಿಎಂ ಚರ್ಚೆ ಹಾಗೆಯೇ ಇದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅಹಿಂದ ಪರವಾಗಿ ಏನು ಮಾಡಲಿಲ್ಲ ಹೀಗಾಗಿ, ಖರ್ಗೆ, ಪರಮೇಶ್ವರನ್ನ ಮುಗಿಸೋ ತಂತ್ರ ಅನುಸರಿಸಿದ್ರು. ಕಾಂಗ್ರೆಸ್ ಗೆ ಕಾರ್ಯಕರ್ತರೇ ಸಿಗದ ಪರಿಸ್ಥಿತಿ ಇದೆ. ಹೀಗಾಗಿ ಕಾಂಗ್ರೆಸ್ 40 ಪರ್ಸೆಂಟ್ ಹೆಸರಿನಲ್ಲಿ ನಾಟಕವಾಡುತ್ತಿದೆ ಎಂದು ಕಟೀಲ್ ಆರೋಪಿಸಿದರು.
ನಳಿನ್ ಕುಮಾರ್ ಕಟೀಲ್ ಗೆ ಲೀಗಲ್ ನೋಟೀಸ್ ನೀಡಲು ಎಂ.ಬಿ.ಪಾಟೀಲ್ ನಿರ್ಧಾರ
ಇದೇ ಸಮಯದಲ್ಲಿ, ಸಿದ್ದರಾಮಯ್ಯ ಜೈಲು ಸೇರ್ತಾರೆ ಎನ್ನುವ ವಿಚಾರವಾಗಿ ಮಾತನಾಡಿ, ಅರ್ಕಾವತಿ ತನಿಖೆ ಪೂರ್ಣ ಮಾಡಿಸುತ್ತೇವೆ. ಆಗ ಯಾರೆಲ್ಲಾ ಒಳಗೆ ಹೋಗ್ತಾರೆ ಅನ್ನೋದು ನಿಮಗೆ ಗೊತ್ತಾಗುತ್ತೆ. ಒಟ್ಟಿನಲ್ಲಿ ಈ ಹಗರಣದಲ್ಲಿ ಇದ್ದವರೆಲ್ಲಾ ಜೈಲಿಗೆ ಹೋಗ್ತಾರೆ. ನೀವು ಸ್ವಲ್ಪ ಕಾದು ನೋಡಿ. ಲೋಕಾಯುಕ್ತಕ್ಕೆ 52 ಕೇಸ್ ಗಳಿವೆ. ಅವೆಲ್ಲಾ ತನಿಖೆ ಆಗುತ್ತೇವೆ. ಅರ್ಕಾವತಿಗೆ ನ್ಯಾಯಾಲಯ ಮೂಲಕವೇ ಹೋಗ್ತೀವಿ ನಾವು, ಎಲ್ಲಾ ತನಿಖೆಯನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.