ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರಿಗೆ ನಿರಂತರ ವಿದ್ಯುತ್: ಕುಮಾರಸ್ವಾಮಿ
ಇದೀಗ ಮತ್ತೊಮ್ಮೆ ಪೂರ್ಣಾವದಿ ಅಧಿಕಾರಕ್ಕೆ ಬರಲು ಮತದಾರರು ಆಶೀರ್ವದಿಸಿದ್ದಲ್ಲಿ ರಾಜ್ಯದ ರೈತರ ಸಾಲ ಮನ್ನಾ, ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣ, ಜಿಲ್ಲೆಯ ರೈತರ ನಾಡಿಯಾದ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಗೆ ಸೂಕ್ತ ಅನುದಾನ ನೀಡಿ ಪುನಃ ಆರಂಭ ಮಾಡಿಸುವ ಭರವಸೆ ನೀಡಿದ ಎಚ್‌ಡಿಕೆ
ಹುಮನಾಬಾದ್(ಜ.08): ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಹೊಲಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು. ಹುಮನಾಬಾದ ಕ್ಷೇತ್ರದ ಚಿಟಗುಪ್ಪ, ನಂದಗಾಂವ, ಹಳ್ಳಿಖೇಡ(ಬಿ), ದುಬಲಗುಂಡಿ, ಘಾಟಬೋರಳ ಸೇರಿದಂತೆ ವಿವಿಧಡೆ ಶನಿವಾರ ಆಗಮಿಸಿದ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಅವಧಿಯಲ್ಲಿ ರೈತರ ಸಾಲಮನ್ನಾ ಮೂಲಕ ರೈತ ಕುಟುಂಬಕ್ಕೆ ನೆರವಾಗುವ ಕೆಲಸ, ಸೇರಿದಂತೆ ವಿವಿಧ ಯೋಜನೆ ಜಾರಿಗೆ ತಂದಿದ್ದೆವು. ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪೂರ್ಣ ಅವದಿ ಅಧಿಕಾರದಲ್ಲಿರಲು ಸಾಧ್ಯವಾಗಲಿಲ್ಲ. ಇದೀಗ ಮತ್ತೊಮ್ಮೆ ಪೂರ್ಣಾವದಿ ಅಧಿಕಾರಕ್ಕೆ ಬರಲು ಮತದಾರರು ಆಶೀರ್ವದಿಸಿದ್ದಲ್ಲಿ ರಾಜ್ಯದ ರೈತರ ಸಾಲ ಮನ್ನಾ, ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣ, ಜಿಲ್ಲೆಯ ರೈತರ ನಾಡಿಯಾದ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಗೆ ಸೂಕ್ತ ಅನುದಾನ ನೀಡಿ ಪುನಃ ಆರಂಭ ಮಾಡಿಸುವ ಭರವಸೆ ನೀಡಿದರು.
ಸ್ವ-ಸಹಾಯ ಗುಂಪುಗಳ ಸಾಲ ಮನ್ನಾ :
ಬೀದರ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶಂಪುರ್‌ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕರೆ, ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ 24 ಗಂಟೆಗಳಲ್ಲಿ ವಿವಿಧ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಾಲಪಡೆದ ರಾಜ್ಯದ ಎಲ್ಲಾ ಮಹಿಳಾ ಸ್ವ-ಸಹಾಯ ಸಂಘಗಳ ಸಾಲ ಮನ್ನಾ ಮಾಡಲಾಗುವುದು ಎಂದರು.
ನಾಯಿ, ನರಿ ಅನ್ನೋರಿಗೆ ಜನರ ಚಿಂತೆಯಿಲ್ಲ: ಎಚ್.ಡಿ.ಕುಮಾರಸ್ವಾಮಿ
ಇದೇ ಸಂದರ್ಭದಲ್ಲಿ ನಂದಗಾಂವ ಗ್ರಾಮದಲ್ಲಿ ರೈತ ಸಂಘದ ಮುಖಂಡ ಕರಬಸಪ್ಪ ಹುಡಗಿ ಮಾತನಾಡಿ, ಬಿಎಸ್‌ಎಸ್‌ಕೆ ಕಾರ್ಖಾನೆಗೆ ಸೂಕ್ತ ಅನುದಾನ ಕಲ್ಪಿಸಿ ಕಾರ್ಖಾನೆ ಆರಂಭಿಸಬೇಕು. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಸಲ್ಲಿಸಿದರು.
ಅಭ್ಯರ್ಥಿ ಸಿಎಂ ಫಯಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೂಲಪೂರ, ಸತೀಶ್ ರಾಂಪೂರೆ, ಸುರೇಶ ಸೀಗಿ, ತಾಲೂಕು ಅಧ್ಯಕ್ಷ ಗೌತಮ ಸಾಗರ, ಮಹೇಶ ಅಗಡಿ, ಅಬ್ದುಲ್ ಗೋರೆಮಿಯ್ಯಾ, ಚೇತನ ಗೋಖಲೆ, ಶಿವಪುತ್ರ ಮಾಳಗೆ ಸೇರಿದಂತೆ ಅನೇಕರಿದ್ದರು.