ಹೈಕಮಾಂಡ್ ಟಿಕೆಟ್ ಕೊಟ್ಟರೆ ತುಮಕೂರಲ್ಲಿ ಸ್ಪರ್ಧೆ ಮಾಡುತ್ತೇನೆ: ಸೋಮಣ್ಣ
ನನಗೂ ತುಮಕೂರಿಗೂ ಅವಿನಾಭಾವ ಸಂಬಂಧ ಇದೆ. ಯಾರನ್ನು ಎಲ್ಲೆಲ್ಲಿ ಕರೆಸಿಕೊಳ್ಳಬೇಕು, ಎಲ್ಲೆಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಅನ್ನೋದು ಭಗವಂತನ ನಿರ್ಣಯ. ಹೈಕಮಾಂಡ್ ಟಿಕೆಟ್ ಕೊಟ್ಟರೆ ತುಮಕೂರಿನಲ್ಲಿ ಸ್ಪರ್ಧೆ ಮಾಡುತ್ತೇನೆ. ತುಮಕೂರು ಬೇಡ ಬೇರೆ ಕಡೆ ಸ್ಪರ್ಧೆ ಮಾಡು ಅಂದರೆ ಮಾಡುತ್ತೇನೆ. ನಾನು ಎಲ್ಲದಕ್ಕೂ ತಯಾರಿದ್ದೀನಿ ಎಂದ ಸೋಮಣ್ಣ
ತುಮಕೂರು(ಫೆ.18): ಟೆಂಪಲ್ ರನ್ ಆಯ್ತು, ವಿವಿಧ ಜಾತಿ ಮುಖಂಡರ ಭೇಟಿಯಾಯ್ತು. ಈಗ ಸೋಮಣ್ಣ ಅವರು ಮಠಗಳಿಗೆ ಎಡತಾಕಿದ್ದಾರೆ. ಸೋಮಣ್ಣ ಅವರು ಶನಿವಾರ ಮೂರು ಮಠಗಳಿಗೆ ಭೇಟಿ ನೀಡುವ ಮೂಲಕ ಮತ್ತೆ ಸಂಚಲನ ಮೂಡಿಸಿದ್ದಾರೆ. ಮೊದಲು ಎಲೆರಾಂಪುರ ಹನುಮಂತನಾಥ್ ಸ್ವಾಮೀಜಿ, ಬಳಿಕ ಸಿದ್ದರಬೆಟ್ಟಕ್ಕೆ ಭೇಟಿ ಬಳಿಕ ಸಿದ್ಧಗಂಗೆಯಲ್ಲಿ ಸೋಮಣ್ಣ ಪ್ರಸಾದ ಸ್ವೀಕರಿಸಿದ್ದಾರೆ.
ಸಿದ್ಧಗಂಗಾ ಮಠದಲ್ಲಿ ಪ್ರಸಾದ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ನಡೆದಾಡುವ ದೇವರು ಇದ್ದರು. ಹಾಗಾಗಿ ತುಮಕೂರಿ ಎಲ್ಲಾ ಮಠಗಳಿಗೆ ಭೇಟಿ ಕೊಡುತ್ತಿದ್ದೇನೆ. ಬಾಲಗಂಗಾಧರನಾಥ್ ಹಾಗೂ ಸಿದ್ದಗಂಗಾ ಶ್ರೀಗಳು ನನಗೆ ಗುರುಗಳು. ಮಠ ಮಾನ್ಯಗಳು ನನಗೇನು ಹೊಸದಲ್ಲ ಎಂದರು.
ಸೋಮಣ್ಣಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿ: ಸಂಸದ ಬಸವರಾಜು
ತುಮಕೂರಿನ ಸಂಸದ ಜಿ.ಎಸ್. ಬಸವರಾಜು ನಮಗೆಲ್ಲಾ ಪೈಲೆಟ್ ಇದ್ದಂಗೆ. ಹೈಕಮಾಂಡ್ ಲೋಕಸಭೆಗೆ ಸ್ಪರ್ಧೆ ಮಾಡಬೇಕು ಅಂದರೆ ಮಾಡುತ್ತೇನೆ ಎಂದರು. ರಾಜ್ಯಸಭೆಗೆ ಸ್ಪರ್ಧೆ ಮಾಡುತ್ತೇನೆಂದು ಹೇಳಿದ್ದು ನಿಜ. ರಾಜ್ಯಸಭೆಯಲ್ಲಿ ಎಲ್ಲವೂ ಕೊನೆ ಹಂತಕ್ಕೆ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಬದಲಾಗಿ, ಒಬ್ಬ ಒಳ್ಳೆ ಕಾರ್ಯಕರ್ತನಿಗೆ ಕೊಟ್ಟಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ. ಲೋಕಸಭೆಗೆ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ. ಇದು ನನ್ನ ಡಿಮಾಂಡ್ ಅಲ್ಲ ರಿಕ್ವೆಸ್ಟ್ ಎಂದರು.
ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಬೇಕೆಂಬ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಮಾಧುಸ್ವಾಮಿ ಅವರು, ನಮ್ಮ ಹಿರಿಯ ನಾಯಕರು, ನನಗಿಂತ ಬುದ್ದಿವಂತರು, ಹೋರಾಟದಿಂದ ಬಂದವರು ಎಂದರು. ಸ್ಥಳೀಯರು ಮತ್ತೊಬ್ಬರು ಅನ್ನೋದಕ್ಕಿಂತ, ದೇಶ ಪ್ರಧಾನಿ ಮೋದಿ ಅವರ ಆಡಳಿತ ಬಯಸಿದೆ. ನರೇಂದ್ರ ಮೋದಿ ಅವರು ಗುಜರಾತ್ ನವರು ಎಲ್ಲಿ ಬಂದು ನಿಂತರು ಎಂದು ಪ್ರಶ್ನಿಸಿದರು. ಮಾಧುಸ್ವಾಮಿ ಅವರು ಹೇಳೋದು ಸಹಜ. ಅದಕ್ಕೆ ನನ್ನ ಭಿನ್ನಾಭಿಪ್ರಾಯ ಏನಿಲ್ಲ. ಹೈಕಮಾಂಡ್ ಟಿಕೆಟ್ ಕೊಟ್ಟರೆ ಸ್ಪರ್ಧಿಸುವುದಾಗಿ ತಿಳಿಸಿದರು.
ಇದು ಬಿಜೆಪಿ ಕ್ಷೇತ್ರ, ಇಲ್ಲಿ ಬಸವರಾಜು ಅವರು ಎಂ.ಪಿಯಾದ್ದಾರೆ. ವಯಸ್ಸಿನ ಕಾರಣದಿಂದ ಅವರು ಸ್ಪರ್ಧಿಸುತ್ತಿಲ್ಲ ಎಂದ ಅವರು ನಾವು ಬಿಜೆಪಿ ಹಕ್ಕನ್ನು ಪ್ರತಿಪಾದಿಸುತ್ತಿದ್ದೇವೆ. ಕ್ಷೇತ್ರ ಯಾರಿಗೆ ಹೋಗಬೇಕು ಎಂಬುದನ್ನು ಹೈಕಮಂಡ್ ತೀರ್ಮಾನ ಮಾಡುತ್ತದೆ ಎಂದರು.
ನನಗೂ ತುಮಕೂರಿಗೂ ಅವಿನಾಭಾವ ಸಂಬಂಧ ಇದೆ. ಯಾರನ್ನು ಎಲ್ಲೆಲ್ಲಿ ಕರೆಸಿಕೊಳ್ಳಬೇಕು, ಎಲ್ಲೆಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಅನ್ನೋದು ಭಗವಂತನ ನಿರ್ಣಯ ಎಂದರು. ಹೈಕಮಾಂಡ್ ಟಿಕೆಟ್ ಕೊಟ್ಟರೆ ತುಮಕೂರಿನಲ್ಲಿ ಸ್ಪರ್ಧೆ ಮಾಡುತ್ತೇನೆ. ತುಮಕೂರು ಬೇಡ ಬೇರೆ ಕಡೆ ಸ್ಪರ್ಧೆ ಮಾಡು ಅಂದರೆ ಮಾಡುತ್ತೇನೆ. ನಾನು ಎಲ್ಲದಕ್ಕೂ ತಯಾರಿದ್ದೀನಿ ಎಂದರು.
ಕಳೆದ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿದ್ದ ದೇವೇಗೌಡರು ಸೋತಿದ್ದಕ್ಕೆ ಪ್ರತಿಕ್ರಿಯಿಸಿದ ಅವರು ಪರಿಸ್ಥಿತಿ ಎಲ್ಲಾ ಒಂದೇ ರೀತಿ ಇರುವುದಿಲ್ಲ. ಒಂದೊಂದು ಸಮಯಕ್ಕೆ ಒಂದೊಂದು ಪರಿಸ್ಥಿತಿ ಬರುತ್ತದೆ ಎಂದರು.
ದೇಶದಲ್ಲಿ ಮೋದಿ ಎಷ್ಟು ಅವಶ್ಯಕತೆ ಅನ್ನುವುದು ಜನರಿಗೆ ಗೊತ್ತಿದೆ. ಕಳೆದ ಬಾರಿ ಬಸವರಾಜ್ ಚುನಾವಣೆಗೆ ಸ್ಪರ್ಧೆ ಮಾಡಿದಾಗ ನಾನೇ ಉಸ್ತುವಾರಿಯಾಗಿದ್ದೆ. ನಾನು ಒಂದು ಸಾವಿರ ಹಳ್ಳಿಗಳ ಹೆಸರು ಹೇಳುತ್ತೇನೆ ಎಂದರು. ನನಗೆ ಜಿಲ್ಲೆಯಲ್ಲಿ ಸಾವಿರಾರು ಜನ ಗೊತ್ತಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ ಮೂರು ಬಾರಿ ಉಸ್ತುವಾರಿಯಾಗಿ ಸಾಕಷ್ಟು ಕೆಲಸ ಮಾಡಿದ್ದಾಗಿ ತಿಳಿಸಿದರು.
ಯಡಿಯೂರಪ್ಪನವರು ನಮ್ಮ ನಾಯಕರು ಎಂದ ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಡಿಸಿಷನ್ ಮಾಡಿದ್ದು ಒಬ್ಬ ಸೋಮಣ್ಣ ಮಾತ್ರ. ಇದು ಎಲ್ಲರ ಕೈಯಲ್ಲಿ ಆಗುವುದಿಲ್ಲ ಎಂದರು. ಗೋವಿಂದರಾಜನಗರ ಅಭಿವೃದ್ಧಿ ತರ ತುಮಕೂರು ಯಾಕೆ ಆಗಬಾರದು ಎಂದ ಅವರು ನಾನೊಬ್ಬ ಕೆಲಸಗಾರ, ನನ್ನನ್ನು ಹಗ್ಗದಲ್ಲಿ ಕಟ್ಟಿಹಾಕಿ ಕೂರಿಸಿದ್ದರೂ ನಾನು ಕೂರುವುದಿಲ್ಲ ಎಂದರು.
ತುಮಕೂರಲ್ಲಿ ಸೋಮಣ್ಣ ಸ್ಫರ್ಧೆಗೆ ವರಿಷ್ಠರು ಸೂಚಿಸಿದ್ರೆ ಅಭ್ಯಂತರವಿಲ್ಲ: ವಿಜಯೇಂದ್ರ
ಈ ದೇಶ ಫೆಡರಲ್ ಟ್ರಚರಲ್‌ನಲ್ಲಿ ನಡಿತಿದೆ ಎಂದ ಅವರು ಒಬ್ಬೊಬ್ಬರು ಒಂದೊಂದು ಮಾದರಿಯಲ್ಲಿ ನಡೆಯುತ್ತಿದ್ದಾರೆ. ಸೋನಿಯಾ ಗಾಂಧಿಗೂ ರಾಜಸ್ಥಾನಕ್ಕೂ ಏನ್ ಸಂಬಂಧ ಇತ್ತು. ಮಕ್ಕನ್ ಅವರನ್ನು ಯಾಕೆ ಬೆಂಗಳೂರಿಗೆ ತಂದು ನಿಲ್ಲಿಸಿದರು ಎಂದರು.
ದೇವೆಗೌಡರ ಜೊತೆ 28 ವರ್ಷ ಇದ್ದೀನಿ. ಅವರ ಹತ್ರನೇ ನಾನು ರಾಜಕೀಯದ ಎಬಿಸಿಡಿ ಕಲಿತಿದ್ದು, ನಾನು ಎಲ್ಲೂ ಅಪಚಾರದ ಮಾತನ್ನು ಆಡಿಲ್ಲ ಎಂದರು. ಇವತ್ತು ಜೆಡಿಎಸ್ ಬಿಜೆಪಿ ಹೊಂದಾಣಿಕೆಯಾಗಿದೆ. ದೇವೆಗೌಡರೇ ಮೋದಿ ಪ್ರಧಾನಿ ಆಗಬೇಕು ಅಂತ ಬಯಸಿದ್ದಾರೆ ಎಂದರು.