ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ ಇಲ್ಲದಿದ್ದರೆ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ: ಕೊಪ್ಪಳ ಸಂಸದ ಸಂಗಣ್ಣ ಕರಡಿ
ಈ ಬಾರಿಯೂ ನಾನು ಸ್ಪರ್ಧೆ ಮಾಡುವ ಬಯಕೆ ಹೊಂದಿದ್ದರೂ ಪಕ್ಷ ಟಿಕೆಟ್ ಕೊಟ್ಟರೆ ಮಾತ್ರ ಸ್ಪರ್ಧೆ ಮಾಡುತ್ತೇನೆ, ಇಲ್ಲದಿದ್ದರೆ ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕೊಪ್ಪಳ (ಜ.19): ಈ ಬಾರಿಯೂ ನಾನು ಸ್ಪರ್ಧೆ ಮಾಡುವ ಬಯಕೆ ಹೊಂದಿದ್ದರೂ ಪಕ್ಷ ಟಿಕೆಟ್ ಕೊಟ್ಟರೆ ಮಾತ್ರ ಸ್ಪರ್ಧೆ ಮಾಡುತ್ತೇನೆ, ಇಲ್ಲದಿದ್ದರೆ ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇಲ್ಲಿನ ಭಾಗ್ಯನಗರದಲ್ಲಿ ಕೇಂದ್ರದ ವಿಕಸಿತ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಜವಾಬ್ದಾರಿ ಮರೆತಿದ್ದೇವೆ. ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸುತ್ತಿಲ್ಲ ಎನ್ನುತ್ತಲೇ ಟಿಕೆಟ್ ವಿಷಯ ಪ್ರಸ್ತಾಪಿಸಿದ ಅವರು, ಪಕ್ಷ ತೀರ್ಮಾನಿಸಿದರೆ ಮಾತ್ರ ಮತ್ತೆ ಸ್ಪರ್ಧೆ ಮಾಡುತ್ತೇನೆ ಎಂದರು.
ಇದಕ್ಕೆ ವೇದಿಕೆಯ ಮುಂಭಾಗದಲ್ಲಿ ಇದ್ದವರು ಮತ್ತೊಮ್ಮೆ ನೀವೇ ಸ್ಪರ್ಧೆ ಮಾಡಬೇಕು ಎನ್ನುವ ಆಗ್ರಹ ಪ್ರತಿಧ್ವನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ನಾನು ಸಹ ಸ್ಪರ್ಧೆ ಮಾಡಬೇಕು ಅಂದುಕೊಂಡಿದ್ದೇನೆ. ಸರ್ಕಾರಿ ನೌಕರರ ನಿವೃತ್ತಿಯ ವಯಸ್ಸು ಎಷ್ಟು ಎಂದು ಕೇಳಿದರು. 60 ಎಂದಾಗ, ನಾವು ಸಹ ಒಂದಿಲ್ಲೊದು ದಿನ ನಿವೃತ್ತಿಯಾಗಲೇಬೇಕು ಎಂದರು. ಆಗ ಪುನಃ ಅಲ್ಲಿದ್ದವರು ಈ ಬಾರಿಯೂ ನೀವೇ ಸ್ಪರ್ಧೆ ಮಾಡಿ ಎನ್ನುವ ಮನವಿ ಮಾಡಿಕೊಂಡರು.
ಭ್ರೂಣಹತ್ಯೆಗೆ ₹5 ಲಕ್ಷ ದಂಡ, 5 ವರ್ಷ ಜೈಲು?: ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?
ನಾನು ಸ್ಪರ್ಧೆ ಮಾಡುವುದು, ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುವೆ. ಆದರೆ, ಪಕ್ಷ ಅವಕಾಶ ನೀಡದಿದ್ದರೆ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇನೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎನ್ನುವುದಷ್ಟೇ ನನ್ನ ಉದ್ದೇಶ ಎಂದರು. ಪ್ರತಿ ಬಾರಿಯಂತೆ ನಾನು ಈ ಬಾರಿ ಮಾಡುವುದಿಲ್ಲ, ನನ್ನ ಭಾವನೆಯಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದೇನೆ. ಪಕ್ಷ ಗೆಲ್ಲಬೇಕು, ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರನ್ನು ಮಾಡಬೇಕಾಗಿದೆ. ಇದು ಕೇವಲ ಯಾರೊಬ್ಬರ ಕೆಲಸವೂ ಅಲ್ಲ, ಪ್ರತಿಯೊಬ್ಬರು ಸಹ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದಕ್ಕಾಗಿ ಶ್ರಮಿಸೋಣ ಎಂದರು.