ಭ್ರೂಣಹತ್ಯೆಗೆ ₹5 ಲಕ್ಷ ದಂಡ, 5 ವರ್ಷ ಜೈಲು?: ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?
ಭ್ರೂಣ ಹತ್ಯೆ ನಡೆಸುವವರಿಗೆ ವಿಧಿಸುವ ಶಿಕ್ಷೆಯ ಪ್ರಮಾಣ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿದ್ದು, ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರು (ಜ.19): ಭ್ರೂಣ ಹತ್ಯೆ ನಡೆಸುವವರಿಗೆ ವಿಧಿಸುವ ಶಿಕ್ಷೆಯ ಪ್ರಮಾಣ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿದ್ದು, ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಯಡಿ ರಚಿಸಲಾದ ಮೇಲ್ವಿಚಾರಣಾ ಸಮಿತಿ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದರು. ಭ್ರೂಣ ಹತ್ಯೆ ವಿಚಾರದಲ್ಲಿ ಜಾಗೃತಿಯ ಜೊತೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭ್ರೂಣ ಹತ್ಯೆ ನಡೆಸುತ್ತಿರುವವರ ಮೇಲೆ ಕಠಿಣ ಕ್ರಮಗಳು ಆಗಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಈಗಿರುವ ಕಾಯ್ದೆಯಲ್ಲಿ 10 ಸಾವಿರ ದಂಡ, 3 ವರ್ಷ ಜೈಲು ಶಿಕ್ಷೆ ಇದೆ. 5 ಲಕ್ಷ ರು.ವರೆಗೆ ದಂಡ ವಿಧಿಸಿ, 5 ವರ್ಷ ಜೈಲು ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಭ್ರೂಣ ಹತ್ಯೆಗಳ ತಡೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ರಾಜ್ಯಮಟ್ಟದಲ್ಲಿ ಆರೋಗ್ಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಅಂತೆಯೇ ಜಿಲ್ಲಾ ಮಟ್ಟದಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆ ರಚಿಸಲು ನಿರ್ಧರಿಸಿದ್ದೇವೆ ಎಂದರು.
ಅಯೋಧ್ಯೆ ರಾಮಮಂದಿರಕ್ಕೆ ತೆರಳಲು ಯಾರ ಅನುಮತಿಯೂ ಬೇಕಾಗಿಲ್ಲ: ದಿನೇಶ್ ಗುಂಡೂರಾವ್
ಕಾರ್ಯಪಡೆಗಳು ಭ್ರೂಣ ಹತ್ಯೆ ಪ್ರಕರಣಗಳ ವಿಚಾರದಲ್ಲಿ ಆರೋಗ್ಯ ಇಲಾಖೆಯ ಸಕ್ಷಮ ಪ್ರಾಧಿಕಾರಕ್ಕೆ ಪ್ರತ್ಯೇಕವಾಗಿ ಎಸಿಪಿ ಮಟ್ಟದ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಸಬ್ ಇನ್ಸ್‌ಪೆಕ್ಟರ್ ನಿಯೋಜಿಸುವಂತೆ ಗೃಹ ಇಲಾಖೆಗೆ ಪತ್ರ ಬರೆಯಲಾಗುವುದು. ಇದರಿಂದ ಭ್ರೂಣ ಹತ್ಯೆ ಪ್ರಕರಣಗಳ ಮೇಲೆ ನಿಗಾವಹಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.