ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಕೆಳಗಿಳಿಸಿದರೆ ಸಾಯುತ್ತೇನೆ ಎಂಬ ಯಡಿಯೂರಪ್ಪ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಸಾವು ರಾಜ್ಯಕ್ಕೆ ಒಳ್ಳೆಯದಾದರೆ ಸಾಯಲಿ, ಬಿಜೆಪಿ ಸಾರಥ್ಯ ನಮ್ಮ ಕೈಗೆ ಕೊಡಿ ಎಂದು ಸವಾಲು ಹಾಕಿದ್ದಾರೆ.
ವಿಜಯಪುರ (ಜೂ.24): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರನನ್ನು (ಮಗನನ್ನು) ಕೆಳಗಿಳಿಸಿದರೆ ಒಂದು ವಾರದಲ್ಲಿ ಸಾಯುತ್ತೀನಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅವರ ಸಾವಿನಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ಸಾಯಲಿ. ನಮ್ಮ ಕೈಗೆ ಬಿಜೆಪಿ ಸಾರಥ್ಯವನ್ನು ಕೊಡಿ. ಬಿಜೆಪಿಯನ್ನು ನಮ್ಮ ಕೈಯಲ್ಲಿ ಕೊಟ್ಟರೆ 150 ಸೀಟು ತರ್ತೀವಿ ಎಂದು ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷಿಯ ಶಾಸಕರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಲೂಟಿ ನಡೆಯುತ್ತಿದೆ. ಸಚಿವರು, ಅವರ ಮಕ್ಕಳು, ಸಿಎಂ ಮಗ ಲೂಟಿಯಲ್ಲಿದ್ದಾರೆ. ಸಿಎಂ ಡಿಲೀಂಗ್ ಅವರ ಮಗ ಮಾಡ್ತಿದ್ದಾನೆ. ಬಾದಾಮಿ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲದೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ವತಃ ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ. ನೀವು ಉಚಿತ ಗ್ಯಾರಂಟಿ ಹಂಚ್ತಾ, ಲೂಟಿ ಮಾಡ್ತಾ ಹೋಗಿ. ಮೋದಿ ರೋಡ್, ಏರ್ ಪೋರ್ಟ್ ಮಾಡ್ತಾ ಹೋಗಲಿ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರದಿಂದ ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಮಾಡಬಹುದು. ಸಿಎಂ ಸಿದ್ದರಾಮಯ್ಯಗೆ ವಿಜನ್ ಇಲ್ಲ, ಟೆನ್ಷನ್ ಬಹಳ ಆಗಿದೆ. ರಾಜ್ಯ ಸರ್ಕಾರದ ವಿರುದ್ಧ ಶಾಸಕರು ಗರಂ ಆಗಿದ್ದಾರೆ. ನಮ್ಮ ಜಮೀನು ಸಾಬ್ರಿಗೆ ಕೊಟ್ಟರೆ ನಮ್ಮ ಗತಿ ಏನು ಕಾಂಗ್ರೆಸ್ ಶಾಸಕರೆ ಪ್ರಶ್ನಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರಲ್ಲೆ ಜಾಗೃತಿ ಬರುತ್ತಿದೆ. ವಿಧಾನ ಸಭೆ ವಿಸರ್ಜನೆ ಮಾಡಲಿ, ಡಿ.ಕೆ.ಶಿವಕುಮಾರ್ ಕೈಗೆ ಸರ್ಕಾರ ಕೊಡಬೇಡಿ. ಸಿದ್ದರಾಮಯ್ಯ ಸ್ವಲ್ಪ ಲೂಟಿ ಮಾಡಿದ್ದಾರೆ, ಡಿ.ಕೆ.ಶಿ ರಾಜ್ಯ ಮಾರಾಟ ಮಾಡ್ತಾನೆ. ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟವಾಗಿದೆ. ಸರ್ಕಾರವನ್ನ ವಿಸರ್ಜನೆ ಮಾಡಲಿ, ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿಯಲ್ಲಿ ಅಧ್ಯಕ್ಷತೆ ವೈಫಲ್ಯವಾಗಿದೆ, ಬಿ.ಎಸ್. ಯಡಿಯೂರಪ್ಪ ಬಿಜೆಪಿ ಆಫೀಸಿನಲ್ಲಿ ಬಂದು ಕೂರುತ್ತಿದ್ದಾರೆ. ಇದೀಗ ರಾಜ್ಯಾದ್ಯಂತ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಈಗ ಬಿಜೆಪಿಯಲ್ಲಿ ಇಬ್ಬರು ರಾಜ್ಯಾಧ್ಯಕ್ಷರು ಇದ್ದಾರೆ. ಅಪ್ಪ ಸೂಪರ್ ಅಧ್ಯಕ್ಷ, ಮಗ ನಾಮಕಾವಸ್ಥೆ ಅಧ್ಯಕ್ಷ. ಬಿಜೆಪಿ ಉದ್ದಾರಕ್ಕೆ ಯಡಿಯೂರಪ್ಪ ಪ್ರವಾಸ ಮಾಡ್ತಿಲ್ಲ. ಮಗ ವಿಜಯೇಂದ್ರ ಮುಖ್ಯಮಂತ್ರಿ ಆಗಲಿ ಎಂದು ಪ್ರವಾಸ ಮಾಡುತ್ತಿದ್ದಾರೆ. ಸಿಎಂ ಆಗಿ ಲೂಟಿ ಮಾಡಲು ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ಬಿ.ಎಸ್. ಯಡಿಯೂರಪ್ಪ ಮೊದಲು ಮಗನ ರಾಜೀನಾಮೆ ಕೊಡಿಸಲಿ. ಕರ್ನಾಟಕದಲ್ಲಿ ಬಿಜೆಪಿ ಪುನರುಜ್ಜೀವನ ಆಗಬೇಕಾದರೆ ಯಡಿಯೂರಪ್ಪ ಮಗನನ್ನ ಮನೆಯಲ್ಲಿ ಇಟ್ಟುಕೊಳ್ಳಲಿ. ವಿಜಯೇಂದ್ರ ಬಳಿ ಕ್ರಿಮಿನಲ್ ಬುದ್ಧಿ ಇದೆ. ನಕಲಿ ಸಹಿ, ಸಿಡಿ ಮಾಡೋದು ವಿಜಯೇಂದ್ರನ ಕೆಟ್ಟ ಚಟ. ಇಂಥವರು ರಾಜ್ಯಾಧ್ಯಕ್ಷ ಅಥವಾ ಸಿಎಂ ಆದರೆ ರಾಜ್ಯ ಉದ್ದಾರ ಆಗಲ್ಲ. ಬಿಜೆಪಿ ರಾಜ್ಯಾಧ್ಯಕ್ಷನೇ ಪಕ್ಷಕ್ಕೆ ಒಂದು ದೊಡ್ಡ ಕ್ಯಾನ್ಸರ್. ಯಡಿಯೂರಪ್ಪ ಮಗನಿಂದ ಬಿಜೆಪಿ ಹಾಳಾಗುತ್ತಿದೆ. ಕ್ಯಾನ್ಸರ್ ಗಡ್ಡೆಯನ್ನ ಕತ್ತರಿಸಿ ತೆಗೆಯಬೇಕಿದೆ. ಒಂದು ವೇಳೆ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದರೆ ಯಡಿಯೂರಪ್ಪ ಪ್ರವಾಸ ಮಾಡ್ತಾರಾ ನೋಡಿ ಎಂದು ಸವಾಲು ಹಾಕಿದರು.
ಇನ್ನು ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಿದರೆ ಒಂದು ವಾರದಲ್ಲಿ ಸಾಯುತ್ತೀನಿ ಎಂದಿದ್ದಾರೆ. ಯಡಿಯೂರಪ್ಪ ಸಾಯೋದ್ರಿಂದ, ಹುಟ್ಟೊದ್ರಿಂದ ಕರ್ನಾಟಕದ ಭವಿಷ್ಯ ನಿಲ್ಲಬಾರದು. ಪ್ರಾಮಾಣಿಕ ಸರ್ಕಾರ ಬೇಕಿದೆ. ಮಗನನ್ನ ಉಳಿಸಲು ಬಿ.ಎಸ್. ಯಡಿಯೂರಪ್ಪ ಸಾಯ್ತಿನಿ ಎನ್ನುತ್ತಿದ್ದಾರೆ. ಯಡಿಯೂರಪ್ಪ ಸಾಯೋದ್ರಿಂದ ಕರ್ನಾಟಕಕ್ಕೆ ಒಳ್ಳೆಯದು ಆಗತ್ತೆ ಎನ್ನುವುದಾದರೆ ಆಗಲಿ. ಬಿಜೆಪಿ ಸಾರಥ್ಯ ನಮ್ಮ ಕೈಗೆ ಕೊಡಲಿ. ಬಿಜೆಪಿ ನಮ್ಮ ಕೈಕಯ್ಯಲ್ಲಿ ಕೊಟ್ಟರೆ 150 ಸೀಟ್ ತರುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
