ಅಂತಿಮವಾಗಿ ನನ್ನ ದೇಹ ಮಣ್ಣಿಗೆ ಹೋಗುವುದು ಇಲ್ಲೇ: ಎಚ್‌ಡಿಕೆ ಭಾವುಕ ಮಾತು
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ತಮ್ಮ ಕರ್ಮಭೂಮಿ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.ಅಲ್ಲದೇ ಭಾವುಕರಾಗಿ ಮತನಾಡಿದ್ದಾರೆ.
ರಾಮನಗರ, (ಜ.21): ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗುವುದು ರಾಮನಗರದಲ್ಲೇ. ರಾಮನಗರ ಜಿಲ್ಲೆಯನ್ನು ಬಿಟ್ಟು ನಾನು ಹೊರಗೆ ಹೋಗಲ್ಲ ಎಂದು ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಭಾವುಕರಾಗಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೆಲವರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ . ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗುವುದು ರಾಮನಗರದಲ್ಲೇ. ನಾನು ಎಂದಿಗೂ ಚನ್ನಪಟ್ಟಣ ಕ್ಷೇತ್ರ ಬಿಡುವುದಿಲ್ಲ. ಕ್ಷೇತ್ರ ಬಿಡುವುದಿದ್ದರೆ ನಾನು ಚನ್ನಪಟ್ಟಣದಲ್ಲಿ ಏಕೆ ಓಡಾಡುತ್ತಿದ್ದೆ. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಯತ್ನ ಪಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ದೇವರಿಗೆ ತಪ್ಪು ಕಾಣಿಕೆ ಸಲ್ಲಿಸಿದ ಕುಮಾರಸ್ವಾಮಿ: ಮಾಜಿ ಸಿಎಂ ಮಾಡಿದ ತಪ್ಪಾದ್ರೂ ಏನು?
ನಾನು ಸಾಯುವುದರೊಳಗೆ ರಾಮನಗರ-ಚನ್ನಪಟ್ಟಣವನ್ನು ಅವಳಿ ನಗರ ಮಾಡುತ್ತೇನೆ. ರಾಮನಗರ-ಚನ್ನಪಟ್ಟಣ ನನ್ನ ಎರಡು ಕಣ್ಣುಗಳಿದಂತೆ. ಕಣ್ಣು ಕಳೆದುಕೊಂಡರೆ ನಾನು ಕುರುಡಾಗುತ್ತೇನೆ ಎಂದರು.
ರಾಮನಗರ, ಚನ್ನಪಟ್ಟಣ ಕ್ಷೇತ್ರಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ಇಲ್ಲದಿದ್ದರೆ ಈ ಎರಡೂ ಕ್ಷೇತ್ರಗಳಲ್ಲಿ ನಿರಂತರ ಪ್ರವಾಸ ಕೈಗೊಳ್ಳುವ ಪ್ರಮೇಯವೇ ಎದುರಾಗುತ್ತಿರಲಿಲ್ಲ. ಇಂತಹ ಪುಕಾರುಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡಬೇಡಿ ಎಂದು ಕ್ಷೇತ್ರದ ಜನತರಲ್ಲಿ ಮನವಿ ಮಾಡಿಕೊಂಡರು.