ಹಾವೇರಿ[ಫೆ.26]: ನರೇಂದ್ರ ಮೋದಿಯವರಿಗೆ ಸರಿಸಾಟಿಯಾದ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲ. ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡುವ ಸಂಕಲ್ಪದೊಂದಿಗೆ ಲೋಕಸಭೆ ಚುನಾವಣೆ ಮುಗಿಯುವ ತನಕ ಮನೆಗೆ ಹೋಗುವುದಿಲ್ಲ ಎಂಬ ಶಪಥ ತೊಟ್ಟಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಇಲ್ಲಿಯ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಮೋದಿ ವಿಜಯ ಸಂಕಲ್ಪ ಯಾತ್ರೆ ಹಾಗೂ ಹಾವೇರಿ, ಧಾರವಾಡ ಮತ್ತು ಕಾರವಾರ ಲೋಕಸಭಾ ಕ್ಷೇತ್ರಗಳ ಬೂತ್‌ ಪ್ರಮುಖರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮೋದಿಗೆ ಸಮನಾದ ವ್ಯಕ್ತಿ ಯಾರೂ ಇಲ್ಲ ಎಂದು ಕಾಂಗ್ರೆಸ್ಸಿನವರೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ಸಿನವರಿಗೆ ರಾಹುಲ್‌ ಗಾಂಧಿ ಮೇಲೆಯೇ ಭರವಸೆಯಿಲ್ಲ. ಕಾಂಗ್ರೆಸ್ಸಿಗರು ಹಣ, ಹೆಂಡ, ಅಧಿಕಾರದ ಬಲದಿಂದ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಆದರೆ, ದೇಶಾದ್ಯಂತ ಮೋದಿ ಗಾಳಿ ಬೀಸುತ್ತಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ಹೇಳಿದರು.

ವರ್ಗಾವಣೆಗೆ 15ರಿಂದ 20 ಲಕ್ಷ ಲಂಚ:

ಮೈತ್ರಿ ಸರ್ಕಾರದ ಸಚಿವರು ವಿಧಾನಸೌಧ ಹಾಗೂ ಕ್ಷೇತ್ರದಲ್ಲಿ ಕಾಣುತ್ತಿಲ್ಲ. ವರ್ಗಾವಣೆ ದಂಧೆಯ ಮೂಲಕ ಸರ್ಕಾರ ಲೂಟಿ ಮಾಡುತ್ತಿದೆ. ಪ್ರತಿ ವರ್ಗಾವಣೆಗೂ .15ರಿಂದ 20ಲಕ್ಷ ಪಡೆಯುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಕಾಂಗ್ರೆಸ್‌ ಪಕ್ಷ ಈಗ ಒಡೆದ ಮನೆಯಾಗಿದೆ. ಪರಿಶಿಷ್ಟರಿಗೆ ಕಾಂಗ್ರೆಸ್‌ನಲ್ಲಿ ಗೌರವ ಇಲ್ಲ ಎಂಬ ಬಗ್ಗೆ ಉಪಮುಖ್ಯಮಂತ್ರಿ ಪರಮೇಶ್ವರ ಅವರೇ ಅಸಮಾಧಾನ ಹೊರಹಾಕಿದ್ದಾರೆ. ತಮಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ದಲಿತರಿಗೆ ಕಾಂಗ್ರೆಸ್‌ ಮೇಲೆ ನಂಬಿಕೆ ಇಲ್ಲ. ಅಂಬೇಡ್ಕರ್‌ ಅವರನ್ನೇ ಕಾಂಗ್ರೆಸ್‌ ಸರಿಯಾಗಿ ನಡೆಸಿಕೊಂಡಿಲ್ಲ. ಆದರೆ, ಪ್ರಧಾನಿ ಮೋದಿಯವರು ಪೌರಕಾರ್ಮಿಕರ ಪಾದಪೂಜೆ ಮಾಡಿ ಅವರ ಮೇಲಿನ ಕಳಕಳಿ ವ್ಯಕ್ತಪಡಿಸಿದ್ದಾರೆ ಎಂದರು.

ಮೈಲಾರ ಕಾರ್ಣಿಕ ನಿಜವಾಗಲಿ: ಸಮ್ಮಿಶ್ರ ಸರ್ಕಾರ ಹರಿದೋಗಲಿ

ಮೈಲಾರಲಿಂಗ ಕಾರ್ಣಿಕದ ಬಗ್ಗೆ ಮಾತನಾಡಿದ ಯಡಿಯೂರಪ್ಪ ಅವರು, ಗೊರವಜ್ಜನ ಬಾಯಲ್ಲಿ ಬಂದಿರುವ ಮಾತನ್ನು ಸಮ್ಮಿಶ್ರ ಸರ್ಕಾರದ ಪತನಕ್ಕೆ ಹೋಲಿಸಿದ್ದಾರೆ. ಮೈಲಾರ ಕಾರ್ಣಿಕದಲ್ಲಿ ಕಬ್ಬಿಣದ ಸರಪಳಿ ಹರದಿತಲೇ ಪರಾಕ್‌ ಎಂದು ಹೇಳಿರುವುದು ಸಂತಸ ತಂದಿದೆ. ಗೊರವಜ್ಜನವರ ಬಾಯಲ್ಲಿ ಬಂದಿರುವ ಮಾತು ನಿಜವಾಗಲಿ, ಸಮ್ಮಿಶ್ರ ಸರ್ಕಾರ ಆದಷ್ಟುಬೇಗ ಹರಿದು ಹೋಗಿ, ಜನರಿಗೆ ಒಳ್ಳೆಯದಾಗಲಿ ಎಂದಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಲೋಕಸಭೆ ಚುನಾವಣೆವರೆಗಾದರೂ ಇರುತ್ತದೆಯೋ, ಇಲ್ಲವೋ ಎನ್ನುವ ಅನುಮಾನವಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಕಚ್ಚಾಟ ಭುಗಿಲೆದ್ದಿದೆ. ಕಾಂಗ್ರೆಸ್‌ನ 20ಕ್ಕೂ ಹೆಚ್ಚು ಶಾಸಕರು ಕುಮಾರಸ್ವಾಮಿ ಅವರನ್ನು ಸಿಎಂ ಎಂದು ಒಪ್ಪಿಕೊಳ್ಳುತ್ತಿಲ್ಲ ಎಂದರು.

ಮಾ.7ರಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ

ನಾವು ಈಗಾಗಲೇ ಚುನಾವಣೆ ಪ್ರಚಾರವನ್ನು ಪ್ರಾರಂಭಿಸಿದ್ದು ಪ್ರಧಾನಿ ಮೋದಿಯವರು ಮಾ.7ರಂದು ಕಲಬುರಗಿಗೆ ಬರುತ್ತಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು. ರಾಜ್ಯದಲ್ಲಿ ಬಿಜೆಪಿ 22 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತವಾಗಿದ್ದು ರಾಜ್ಯಕ್ಕೆ ರಾಹುಲ್‌, ಸೋನಿಯಾ ಗಾಂಧಿ ಸೇರಿ ಅಳಿದುಳಿದ ಕಾಂಗ್ರೆಸ್‌ ನಾಯಕರು ಯಾರೇ ಬಂದರೂ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.