ನವದೆಹಲಿ/ಬೆಂಗಳೂರು, (ಆ.17): ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನಾಲ್ಕು ದಿನಗಳ  ದೆಹಲಿ ಪ್ರವಾಸ ಕೈಗೊಂಡಿದ್ದಾರೆ.

ಸೋಮವಾರ ಬೆಳಗ್ಗೆ ದೆಹಲಿಗೆ ಡಿ.ಕೆ ಶಿವಕುಮಾರ್ ಪ್ರಯಾಣ ಬೆಳೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡ ಬೆನ್ನಲ್ಲೇ ಕೋವಿಡ್‌ 19 ಸೋಂಕು ಲಾಕ್‌ಡೌನ್ ಜಾರಿಗೊಂಡ ಹಿನ್ನೆಲೆಯಲ್ಲಿ ಹೈಕಮಾಂಡ್‌ ಜೊತೆಗೆ ಮುಖಾಮುಖಿ ಮಾತುಕತೆ ಸಾಧ್ಯವಾಗಿರಲಿಲ್ಲ.

ಇತ್ತೀಚೆಗೆ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗುಂಪು ಗಲಭೆಯ ಮಾಹಿತಿಯನ್ನು ಹೈಕಮಾಂಡ್‍ಗೆ ನೀಡಲಿದ್ದಾರೆ. ಅಲ್ಲದೇ ಸದ್ಯದ ರಾಜ್ಯದ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಲು ಡಿಕೆಶಿ ದೆಹಲಿಗೆ ಹಾರಿದ್ದಾರೆ. ಆದ್ರೆ, ದೆಹಲಿ ತಲುಪುತ್ತಿದ್ದಂತೆಯೇ ಡಿಕೆಶಿಯ ಪ್ಲಾನ್‌ ಉಲ್ಟಾ ಆಗಿದೆ.

ಡಿಜೆ ಹಳ್ಳಿ ಗಲಭೆ ಪಾಲಿಟಿಕ್ಸ್: ಕಾಂಗ್ರೆಸ್‌ಗೆ ರೀ ಎಂಟ್ರಿ ಕೊಡಲು ರೆಡಿ, ವೇದಿಕೆ ಸಿದ್ಧಗೊಳಿಸುತ್ತಿರುವ ಡಿಕೆಶಿ

ಹೌದು... ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನ ಮುಖಾಮುಖಿಯಾಗಿ ರಾಜ್ಯದ ಪರಿಸ್ಥಿತಿ ವಿವರಿಸಲು ಶಿವಕುಮಾರ್ ಪ್ಲಾನ್ ಮಾಡಿಕೊಂಡು ಹೋಗಿದ್ದರು. ಆದ್ರೆ, ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮುಖಾಮುಳಿ ಭೇಟಿಗೆ ಅವಕಾಶ ಸಿಕ್ಕಿಲ್ಲ. ಬದಲಾಗಿ ಝೂಮ್ ಮೀಟಿಂಗ್ ಮುಖಾಂತರ ಭೇಟಿ ಮಾಡಲಿದ್ದಾರೆ. ಈ ಬಗ್ಗೆ ಅವರೇ ಹೇಳಿದ್ದಾರೆ.

ಡಿಕೆಶಿ ಸ್ಪಷ್ಟನೆ
ಹೈಕಮಾಂಡಿಗೆ ನಾಲ್ಕೈದು ತಿಂಗಳ ವರದಿ ಸಲ್ಲಿಸಲು ಎಐಸಿಸಿ ನಾಯಕರ ಭೇಟಿಗಾಗಿ ದೆಹಲಿಗೆ ಬಂದಿದ್ದು,  ಝೂಮ್ ಮೀಟಿಂಗ್ ಮುಖಾಂತರ ಭೇಟಿ ಮಾಡುತ್ತೇನೆ ಎಂದರು.

ರಾಹುಲ್ ಗಾಂಧಿ ಕೂಡ ಸೋನಿಯಾ ಗಾಂಧಿ ಮನೆಯಲ್ಲೇ ಇದ್ದಾರೆ. ಮೀಟ್ ಮಾಡೋಣ ಎಂದು ಕರೆಸಿದ್ದಾರೆ. ನಾನು ಎಲ್ಲಾ ಕಡೆ ತಿರುಗುತ್ತಿರುತ್ತಿದ್ದರಿಂದ ಅವರಿಗೆ ತೊಂದರೆ ಆಗಬಾರದು ಎಂದು  ಝೂಮ್ ಮೂಲಕ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.