ಬೆಳಗಾವಿ[ಜ.30]: ನನಗೆ ಯಾವುದೇ ಖಾತೆ ಕೊಟ್ಟರೂ ಸರಿ, ಅದನ್ನು ನಿರ್ವಹಿಸುತ್ತೇನೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನನ್ನನ್ನು ಸಚಿವ ಸ್ಥಾನಕ್ಕಾಗಿ ಪರಿಗಣಿಸಿದ್ದು ಸಂತಸ ತಂದಿದೆ ಎಂದು ಶಾಸಕ ಉಮೇಶ್‌ ಕತ್ತಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದು ಸಂತಸ ತಂದಿದೆ. ನನಗೆ ಯಾವುದೇ ಖಾತೆ ನೀಡಿದರೂ ಅದನ್ನು ನಿಭಾಯಿಸುತ್ತೇನೆ. ನನಗೆ ಇಂಥದ್ದೇ ಖಾತೆ ನೀಡಿ ಎಂದು ಬೇಡಿಕೆ ಇಟ್ಟಿಲ್ಲ. ಬಜೆಟ್‌ ಅಧಿವೇಶನ ಮುಗಿದ ಮೇಲೆ ಮತ್ತೆ ಸಂಪುಟ ವಿಸ್ತರಣೆ ಆಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಸೋತವರಿಗೆ ಇಲ್ಲಛ ಶಾಸಕರಾಗಿ ಆಯ್ಕೆಯಾದಮೇಲೆ ಅವರನ್ನು ಮಂತ್ರಿ ಮಾಡುವುದೇ ಪರಿಪಾಟಲು. ಹೀಗಿರುವಾಗ ಗೆದ್ದವರಿಗೂ ಕೊಡಿ ಮನೆಯಲ್ಲಿದ್ದವರಿಗೂ ಕೊಡಿ ಎಂದರೆ ಹೇಗೆ?. ಸೋತವರಿಗೆ ಸಚಿವ ಸ್ಥಾನ ನೀಡಲು ಆಗಲ್ಲ ಎಂದು ಇದೇ ವೇಳೆ ಕತ್ತಿ ಪ್ರತಿಕ್ರಿಯಿಸಿದರು.