ರಾಜ್ಯಕ್ಕೆ ಕಾವೇರಿ ನೀರು ಕೊಡಿಸಲು ಹೋರಾಡುತ್ತೇನೆ: ಎಚ್.ಡಿ.ದೇವೇಗೌಡ
ರಾಜ್ಯದಲ್ಲಿ ಬರಗಾಲವಿದ್ದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿತು. ಕಾವೇರಿ ನೀರು ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಚನ್ನರಾಯಪಟ್ಟಣ (ಜ.27): ರಾಜ್ಯದಲ್ಲಿ ಬರಗಾಲವಿದ್ದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿತು. ಕಾವೇರಿ ನೀರು ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು. ಪಟ್ಟಣದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಜೆಡಿಎಸ್ ದೇವೇಗೌಡರ ಆಸ್ತಿಯೇ ಎಂದು ಕೆಲವರು ಪ್ರಶ್ನಿಸುತ್ತಾರೆ. ಪಕ್ಷ ದೇವೇಗೌಡರ ಕುಟುಂಬದ ಆಸ್ತಿಯಲ್ಲ ಈ ರಾಜ್ಯ ಮತ್ತು ಎಲ್ಲಾ ಸಮಾಜಕ್ಕೆ ನ್ಯಾಯ ಕೊಡಿಸಲು ಹೋರಾಟ ನಡೆಸುತ್ತಿದ್ದೇನೆ. ನಾನು ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದೇನೆ ಆದರೆ ಕಾಂಗ್ರೆಸ್ ಗೆ ಮಾಡುವ ಯೋಗ್ಯತೆ ಇಲ್ಲ, ಮಾಡಿದ್ದನ್ನು ಸಹಿಸಿಕೊಳ್ಳುವ ಯೋಗ್ಯತೆಯೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಾಂಗ್ರೆಸ್ ನನ್ನ ಒಂದು ಸಣ್ಣ ತಪ್ಪು ಕಂಡುಹಿಡಿಯಲು ಆಗದಿದ್ದರೂ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದರು, ಕಳೆದ ಚುನಾವಣೆಯಲ್ಲಿ ತುಮಕೂರಿನಲ್ಲಿ ನನ್ನನ್ನ ಏಕೆ ಸೋಲಿಸಿದ್ದಾರೆಂದು ಹೇಳಲು ಯೋಗ್ಯತೆ ಇದೆಯೇ’ ಎಂದು ಪ್ರಶ್ನಿಸಿದರು. ‘ಕಾಂಗ್ರೆಸ್‌ನವರು ಎಚ್.ಡಿ. ಕುಮಾರಸ್ವಾಮಿ ಅವರನ್ನ ತೆಗೆದರು, ದೇಶದಲ್ಲಿ ಕಾಂಗ್ರೆಸ್ ಈ ಸ್ಥಿತಿಗೆ ಬರಬೇಕಾದರೆ ಆ ಪಕ್ಷದ ನಾಯಕರೇ ಕಾರಣ. ಕುಮಾರಸ್ವಾಮಿ ಅವರ ಸರ್ಕಾರವನ್ನು ತೆಗೆಯಲು ೧೮ ಶಾಸಕರನ್ನ ಬಾಂಬೆಗೆ ಯಾರು ಕಳುಹಿಸಿದವರು ಎಂದು ಹೇಳಲಿ’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಕೆಡಿಪಿ ಸಭೆ: ಸಚಿವ ಜಮೀರ್ ಅಹ್ಮದ್
ಮುಸ್ಲಿಮರನ್ನು ಕೈ ಬಿಡುವುದಿಲ್ಲ: ಮಾಜಿ ಸಚಿವ ಎಚ್. ಡಿ. ರೇವಣ್ಣ ಮಾತನಾಡಿ, ‘ನಾವು ಬದುಕಿರುವವರೆಗೂ ನಾನಾಗಲಿ ದೇವೇಗೌಡರೇ ಆಗಲಿ, ಯಾರೇ ಆಗಲಿ ಮುಸಲ್ಮಾನರನ್ನು ಕೈಬಿಟ್ಟಿಲ್ಲ. ನಮ್ಮ ಕಷ್ಟ ಕಾಲದಲ್ಲಿ ಅವರು ಕೈ ಹಿಡಿದಿದ್ದಾರೆ. ಪ್ರಧಾನಿ ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡಬೇಕೆಂದು ದೇವೇಗೌಡರು ಹೇಳಿದ್ದಾರೆ. ಈ ದೇಶ ಉಳಿಯಬೇಕೆಂದರೆ ಮೋದಿ ಪ್ರಧಾನಿಯಾಗಬೇಕು. ನಾನು ಹಲವು ಪ್ರಧಾನ ಮಂತ್ರಿಗಳನ್ನು ನೋಡಿದ್ದೇನೆ. ದೇವೇಗೌಡರಿಗೆ ಅತಿ ಹೆಚ್ಚು ಗೌರವ ಕೊಡುವ ಪ್ರಧಾನ ಮಂತ್ರಿ ಮೋದಿ. ಲೋಕಸಭಾ ಚುನಾವಣೆಗೆ ಹಾಸನದಿಂದ ಯಾರು ಸ್ಪರ್ದಿಸಿದರು ಅವರನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು.
ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿ, ಹಾಸನದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರನ್ನು ದೇವೇಗೌಡರು ಘೋಷಿಸಿದ್ದಾರೆ. ಅವರು ಸೂಚಿಸುವ ವ್ಯಕ್ತಿಯನ್ನು ಲೋಕಸಭೆಗೆ ಕಳುಹಿಸಬೇಕಿದೆ. ಇದರಿಂದ ಜಿಲ್ಲೆಯ ಸವಾಂಗೀಣ ಪ್ರಗತಿಯಾಗುತ್ತದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಕ್ಷೇತ್ರದ ಜನರು ನಿಂತಿದ್ದಾರೆ, ಮುಂದೆ ಬರುವ ಚುನಾವಣೆಯಲ್ಲಿಯೂ ಮತದಾರರು ಜೆಡಿಎಸ್ ಪರ ನಿಲ್ಲಬೇಕು ಎಂದು ಮನವಿ ಮಾಡಿದರು.
ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಸಂಕಲ್ಪಿಸಿ: ಎಚ್.ಡಿ.ದೇವೇಗೌಡ ಮನವಿ
ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ಹಾಗೂ ಜಿಲ್ಲಾಧ್ಯಕ್ಷ ಕೆ. ಎಂ. ಲಿಂಗೇಶ್, ಜೆಡಿಎಸ್ ಮುಖಂಡರಾದ ದೇವರಾಜೇಗೌಡ, ಸಿ. ಕೆ. ಕುಸುಮ ರಾಣಿ, ಮಮತಾ ರಮೇಶ್, ಅಂಬಿಕಾ ರಾಮಣ್ಣ, ನವಿಲು ಹೊಸೂರು ಚಂದ್ರಪ್ಪ ಹಾಜರಿದ್ದರು. ಚನ್ನರಾಯಪಟ್ಟಣದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿದರು. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಇದ್ದರು.