ದಕ್ಷಿಣ ಕರ್ನಾಟಕದಲ್ಲಿ ಪಕ್ಷ ಕಟ್ಟುತ್ತೇನೆ: ಮಾಜಿ ಸಚಿವ ಸುಧಾಕರ್‌

ಆಡಳಿತ ವಿಕೇಂದ್ರೀಕರಣದ ಮೂಲಕ ಜನರಿಂದಲೇ ಅಭಿವೃದ್ಧಿ ಮಾಡಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಶೀಘ್ರ ನಡೆಯಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಆಗ್ರಹಿಸಿದರು. 

I will build BJP party in South Karnataka Says Dr K Sudhakar gvd

ಚಿಕ್ಕಬಳ್ಳಾಪುರ (ಆ.03): ಆಡಳಿತ ವಿಕೇಂದ್ರೀಕರಣದ ಮೂಲಕ ಜನರಿಂದಲೇ ಅಭಿವೃದ್ಧಿ ಮಾಡಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಶೀಘ್ರ ನಡೆಯಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಆಗ್ರಹಿಸಿದರು. ನಗರದ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುತ್ತಾರೆ ಎಂದುಕೊಂಡಿದ್ದೆ. ಆದರೆ ಯಾರೂ ಕೂಡ ಬಿಬಿಎಂಪಿ, ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಮಾತಾಡುತ್ತಿಲ್ಲ. ಆದಷ್ಟುಶೀಘ್ರ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಗ್ರಾಪಂಗಳಲ್ಲಿ ಬಿಜೆಪಿ ಪ್ರಾಬಲ್ಯ: ಅಜ್ಜವಾರ ಗ್ರಾಮ ಪಂಚಾಯಿತಿಯಲ್ಲಿ 12 ಸದಸ್ಯರ ಬಲದಿಂದ ನಮ್ಮ ಬೆಂಬಲಿತ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. 13 ಸದಸ್ಯರ ಬಲದಿಂದ ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 12 ಸದಸ್ಯರ ಬಲದಿಂದ ಅಧ್ಯಕ್ಷರು, ಉಪಾಧ್ಯಕ್ಷರು ಚುನಾಯಿತರಾಗಿದ್ದಾರೆ. ಇಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿದ್ದರೂ 7 ಬೆಂಬಲ ಬಂದಿದೆ. ಹಾರೋಬಂಡೆ ಗ್ರಾಮ ಪಂಚಾಯಿತಿಯಲ್ಲಿ ಅವಿರೋಧವಾಗಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿದ್ದು, 17 ರಲ್ಲಿ 16 ನಮ್ಮ ಸದಸ್ಯರಾಗಿದ್ದಾರೆ ಎಂದು ತಿಳಿಸಿದರು.

ಗ್ಯಾರಂಟಿಗಳು ಸಿಂಗಾ​ಪು​ರ​ದಲ್ಲಿ ಕುಳಿ​ತ​ವರ ತಲೆ ಕೆಡಿಸ್ತಿವೆ: ಎಚ್‌ಡಿಕೆಗೆ ಶಾಸಕ ಬಾಲ​ಕೃಷ್ಣ ಟಾಂಗ್‌

ಹಳೇಹಳ್ಳಿ ಪಂಚಾಯಿತಿಯಲ್ಲಿ ಕೂಡ ಅವಿರೋಧವಾಗಿ ನಮ್ಮ ಬೆಂಬಲಿತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ದೊಡ್ಡಮರಳಿ ಪಂಚಾಯಿತಿಯಲ್ಲಿ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರ ಚುನಾವಣೆಯಲ್ಲಿ ಕೂಡ ಗೆಲುವು ದಕ್ಕಿದೆ. 12 ಸದಸ್ಯರ ಬಲ ಇಲ್ಲಿ ಬಂದಿದೆ. ಪೆರೇಸಂದ್ರ ಪಂಚಾಯಿತಿಯಲ್ಲಿ ಒಂದು ಗುಂಪಿಗೆ 11, ಮತ್ತೊಂದು ಗುಂಪಿಗೆ 9 ಮತ ಬಂದಿದೆ. ಚಿಕ್ಕಬಳ್ಳಾಪುರದ 30 ಪಂಚಾಯಿತಿಗಳ ಪೈಕಿ, 29 ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಆಗಸ್ಟ್‌ 10 ರಂದು ಕೊನೆಯ ಚುನಾವಣೆ ನಡೆಯಲಿದೆ ಎಂದರು.

ದಕ್ಷಿಣ ಕರ್ನಾಟಕದಲ್ಲಿ ಪಕ್ಷ ಕಟ್ಟುತ್ತೇವೆ: ಸರ್ಕಾರದ ವಿರುದ್ದ ನಾನು ಯಾವುದೇ ಟೀಕೆ ಮಾಡಲ್ಲ. ಸರ್ಕಾರಕ್ಕೆ 6 ತಿಂಗಳ ಅವಕಾಶ ಕೊಡೋಣ. ಸುಧಾಕರ್‌ ಸುಮ್ನೆ ಇಲ್ಲ. ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೇವಲ ಚಿಕ್ಕಬಳ್ಳಾಪುರದಲ್ಲಿ ಗೆಲ್ಲಬೇಕೆಂಬ ಧ್ಯೇಯದಿಂದ ಬಿಜೆಪಿಗೆ ಬಂದಿಲ್ಲ. ಆದರೆ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಕಟ್ಟಬೇಕೆಂಬ ಗುರಿಯೊಂದಿಗೆ ಬಂದಿದ್ದೇನೆ ಎಂದರು.

ಸರ್ಕಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ರದ್ದುಪಡಿಸಿ ರೈತರಿಗೆ ಅನ್ಯಾಯ ಮಾಡಿದೆ. ಇದರ ವಿರುದ್ಧ ತಾಲೂಕುಗಳ ಮಟ್ಟದಲ್ಲಿ ಸಮಾವೇಶ ಹಾಗೂ ಹೋರಾಟ ಮಾಡಲಿದ್ದೇವೆ. ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ಕೂಡಲೇ ಹೋರಾಟಕ್ಕಿಳಿಯುತ್ತೇವೆ. ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು. ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೈತಿಕತೆ ಇಲ್ಲ. ನನ್ನ ಜಿಲ್ಲೆಗೆ ಅನ್ಯಾಯ ಆಗಿದ್ದರೆ ಅಲ್ಲೇ ರಾಜೀನಾಮೆ ನೀಡುತ್ತಿದ್ದೆ. ಆದರೆ ಈ ಸಚಿವರು ರೈತರಿಗೆ ಅನ್ಯಾಯ ಮಾಡಿದ್ದಾರೆ. ರೈತರು ಕೈ ಹಿಡಿಯದಿದ್ದರೆ ಇವರು ಸಚಿವರಾಗುತ್ತಿರಲಿಲ್ಲ ಎಂದರು.

ಉಪವಾಸ ಸತ್ಯಾಗ್ರಹ: ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದಂತೆ ತನಿಖೆ ಮಾಡಲಿ. ಆದರೆ ಇಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಬಂದಿರುವುದರಿಂದ ಆಸ್ಪತ್ರೆ ಮತ್ತು ಕಾಲೇಜು ಆರಂಭಿಸಲಿ. ಜಿಲ್ಲಾಸ್ಪತ್ರೆಗೆ ಸಚಿವರು ಈವರೆಗೂ ಬಂದಿಲ್ಲ. ಏನಾದರೂ ಅಪಘಾತವಾದರೆ ಅಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆಯೇ ಇಲ್ಲ. ಆದ್ದರಿಂದಲೇ ಮೆಡಿಕಲ್‌ ಕಾಲೇಜು ಮಾಡಿಸಿದೆ. ಈ ಬಗ್ಗೆ ಬದ್ಧತೆ ಇಟ್ಟುಕೊಂಡು ಶೀಘ್ರ ಕಾಲೇಜು ಆರಂಭಿಸಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ ಎಂದರು.

ಒಂದೂವರೆ ಎಕರೆ ಟೊಮೆಟೊ ಬೆಳೆ ನಾಶ ಮಾಡಿದ ಕಿಡಿಗೇಡಿಗಳು: ಅನ್ನದಾತ ಕಣ್ಣೀರು

ವಿರೋಧ ಪಕ್ಷದ ನಾಯಕನ ಆಯ್ಕೆ: ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದೇ ಇರೋ ಬಗ್ಗೆ ನನಗೂ ಬೇಸರ ಇದೆ. ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಿದರೆ ಒಳ್ಳೆಯದು. ನನಗೂ ಎಲ್ಲರೂ ಕೇಳ್ತಾ ಇದಾರೆ ಮುಜುಗರ ಆಗುತ್ತೆ. ಎಲ್‌ಒಪಿ ಇಲ್ಲದೆ ಬಜೆಟ್‌ ಅಧಿವೇಶ ನಡೆದಿರೋದು ದುರಂತ. ಹೈ ಕಮಾಂಡ್‌ ಹಂತದಲ್ಲಿ ಚರ್ಚೆ ಮಾಡಿ ಬೇಗ ತೀರ್ಮಾನ ತೆಗೆದುಕೊಳ್ಳಬೇಕು ಎಂದರು. ಸುದ್ದಿಗೋಷ್ಟಿಯಲ್ಲಿ ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‌, ತಿಪ್ಪೇನಹಳ್ಳಿ ಪಂಚಾಯ್ತಿ ಅಧ್ಯಕ್ಷ ಶ್ರೀನಿವಾಸ್‌, ಅಜ್ಜವಾರ ಗ್ರಾಪಂ ಉಪಾಧ್ಯಕ್ಷ ಧನುಷ್‌ ಗೌಡ ,ಅಂಕಣಗೊಂದಿ ರಂಗಪ್ಪ,ಮಂಚೇನಹಳ್ಳಿ ನಾರಾಯಣಸ್ವಾಮಿ,ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios