ನಾನು ರೈತಸಂಘದ ಯಾವೊಬ್ಬ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿಲ್ಲ, ಯಾರಿಗೂ ಕಪಾಳಮೋಕ್ಷ ಮಾಡಿಲ್ಲ. ರೌಡಿಶೀಟರ್‌ವೊಬ್ಬ ಯುವಕನೊಬ್ಬನನ್ನು ಹಿಡಿದು ಥಳಿಸುತ್ತಿದ್ದಾಗ ಹೋಗಿ ತಡೆದೆ. ಅದು ತಪ್ಪಾ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಪ್ರಶ್ನಿಸಿದರು.

ಮಂಡ್ಯ (ಮೇ.12) : ನಾನು ರೈತಸಂಘದ ಯಾವೊಬ್ಬ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿಲ್ಲ, ಯಾರಿಗೂ ಕಪಾಳಮೋಕ್ಷ ಮಾಡಿಲ್ಲ. ರೌಡಿಶೀಟರ್‌ವೊಬ್ಬ ಯುವಕನೊಬ್ಬನನ್ನು ಹಿಡಿದು ಥಳಿಸುತ್ತಿದ್ದಾಗ ಹೋಗಿ ತಡೆದೆ. ಅದು ತಪ್ಪಾ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಪ್ರಶ್ನಿಸಿದರು.

ಮತದಾನದ ದಿನ ಮೇಲುಕೋಟೆ ಕ್ಷೇತ್ರದ ನಾರಾಯಣಪುರ ಗ್ರಾಮದಲ್ಲಿ ರೌಡಿಶೀಟರ್‌ ರಘು ಎಂಬಾತ ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಯೋಗಾ ನರಸಿಂಹೇಗೌಡರ ಮಗನನ್ನು ಹಿಡಿದು ಥಳಿಸುತ್ತಿದ್ದನು. ನಾನು ಅಲ್ಲಿಗೆ ಹೋದಾಗ ಅವರ ತಾಯಿ ಮಗನನ್ನು ಹಿಡಿದು ಥಳಿಸುತ್ತಿರುವುದಾಗಿ ತಿಳಿಸಿದರು. ಆಗ ನಾನು ಮತ್ತು ನನ್ನ ಗನ್‌ಮ್ಯಾನ್‌ ರಮೇಶ್‌ ಅವರು ಮಧ್ಯೆ ಪ್ರವೇಶಿಸಿ ರೌಡಿಶೀಟರ್‌ನನ್ನು ತಳ್ಳಿ, ಹಿಡಿದು ಪೊಲೀಸರಿಗೊಪ್ಪಿಸಿದೆವು. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ರೈತಸಂಘದ ಕಾರ್ಯಕರ್ತರು ಅಪಪ್ರಚಾರ ಮಾಡಿದರು. ಕೆಲವು ಮಾಧ್ಯಮಗಳು ವೀಡಿಯೋ ಮಾಡಿ ತಪ್ಪಾಗಿ ಬಿಂಬಿಸಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯುವಕನಿಗೆ ಶಾಸಕನ ಕಪಾಳಮೋಕ್ಷ: ಚರ್ಚೆಗೆ ಗ್ರಾಸವಾದ ಘಟನೆ ಬಗ್ಗೆ ಎಂ.ಬಿ.ಪಾಟೀಲ್ ಹೇಳಿದ್ದೇನು?

ರೌಡಿಶೀಟರ್‌ ರಘು ಎಂಬಾತನನ್ನು ಚುನಾವಣೆಗೆ ಮುನ್ನವೇ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಪೊಲೀಸ್‌ ಇಲಾಖೆಗೆ ತಿಳಿಸಿದ್ದೆ. ಆದರೂ ಈತನ ವಿರುದ್ಧ ಪೊಲೀಸರು ಯಾವುದೇ ಕ್ರಮ ವಹಿಸಿಲ್ಲ. ಈ ಘಟನೆಗೆ ಪೊಲೀಸರ ನಿಷ್ಕಿ್ರೕಯತೆಯೂ ಒಂದು ಕಾರಣವಾಗಿದೆ ಎಂದು ನುಡಿದರು.

ಚಿನಕುರಳಿಯಲ್ಲೂ ಗಲಾಟೆಗೆ ಯತ್ನ:

ದರ್ಶನ್‌ ಪುಟ್ಟಣ್ಣಯ್ಯ ಚಿನಕುರಳಿ ಗ್ರಾಮಕ್ಕೆ ಬಂದು ಒಂದೂವರೆ ಗಂಟೆ ಇದ್ದಾರೆ. ಈ ಸಮಯದಲ್ಲಿ ದರ್ಶನ್‌ ಅವರನ್ನು ಕೂಡಿ ಹಾಕಿಕೊಂಡಿದ್ದಾರೆ ಎಂದು ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಸುಳ್ಳು ಸುದ್ದಿ ಹಬ್ಬಿಸಿ 500 ಜನರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಚಿನಕುರಳಿ ಗ್ರಾಮಕ್ಕೆ ಆಗಮಿಸಿದ ರೈತಸಂಘದ ನೂರಾರು ಕಾರ್ಯಕರ್ತರು ನಮ್ಮ ವಿರುದ್ಧ ಘೋಷಣೆ ಕೂಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಜೆಡಿಎಸ್‌ ಕಾರ್ಯಕರ್ತರು ಘೋಷಣೆ ಮೊಳಗಿಸಿದ್ದಾರೆ. ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಪೊಲೀಸರು ಎರಡು ಗುಂಪುಗಳ ಮೇಲೆ ಲಾಠಿ ಬೀಸಿ ಚದುರಿಸಿದ್ದಾರೆ. ಸ್ಥಳದಲ್ಲಿಯೇ ಇದ್ದ ನನ್ನ ಅಣ್ಣನ ಮಕ್ಕಳಾದ ಸಿ.ಶಿವಕುಮಾರ್‌, ಸಿ.ಅಶೋಕ್‌ ಅವರು ನಮ್ಮ ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದಾರೆ ಎಂದು ಹೇಳಿದರು.

ಪ್ರಜ್ಞಾವಂತಿಕೆಯಿಂದ ನಡೆದುಕೊಳ್ಳಲಿ:

ನಾನೇನೋ ಎಸ್ಸೆಸ್ಸೆಲ್ಸಿ ಓದಿದವನು. ಆದರೆ, ದರ್ಶನ್‌ ಪುಟ್ಟಣ್ಣಯ್ಯ ವಿದ್ಯಾವಂತರು, ಬುದ್ಧಿವಂತರು. ಅವರು ಗೌರವ ಮತ್ತು ಪ್ರಜ್ಞಾವಂತಿಕೆಯಿಂದ ನಡೆದುಕೊಳ್ಳಬೇಕು. ಸಭ್ಯತೆಯನ್ನು ರೂಢಿಸಿಕೊಳ್ಳಬೇಕು. ನಾನು ಮೂರು ಬಾರಿ ಶಾಸಕ, ಒಮ್ಮೆ ಸಂಸದನಾಗಿ ಕೆಲಸ ಮಾಡಿದ್ದೇನೆ. ಒಂದು ಸಣ್ಣ ಘಟನೆಯೂ ನಡೆಯದಂತೆ ನೋಡಿಕೊಂಡಿದ್ದೇನೆ. ನೀವೂ ಸಹ ಕೆಲವೊಂದು ಸಂಗತಿಗಳನ್ನು ತಿಳಿದುಕೊಳ್ಳಬೇಕು. ದಿಕ್ಕು ತಪ್ಪಿಸುವವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.

ಚುನಾವಣೆಯಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಅಧಿಕಾರ ಯಾರಿಗೂ ಶಾಶ್ವತವಲ್ಲ. ಜನರ ಮಧ್ಯೆ ದ್ವೇಷದ ಬೆಂಕಿ ಹಚ್ಚಬಾರದು. ಆದ್ದರಿಂದ ನೋವು ಅನುಭವಿಸುವವರು ಜನರೇ ಹೊರತು ನಾವಲ್ಲ. ನಾನು ಮತ್ತು ಪುಟ್ಟಣ್ಣಯ್ಯನವರು ಎಷ್ಟೋ ಚುನಾವಣೆಗಳನ್ನು ಎದುರಿಸಿದ್ದೇವೆ. ಎಂದೂ ನನ್ನಿಂದ ಅವರಿಗಾಗಲೀ ಅವರಿಂದ ನನಗಾಗಲೀ ತೊಂದರೆಗಳಾಗಿಲ್ಲ. ಸ್ಫೂರ್ತಿದಾಯಕವಾಗಿ ಚುನಾವಣೆ ಎದುರಿಸಿದ್ದೇವೆ. ದರ್ಶನ್‌ ಪುಟ್ಟಣ್ಣಯ್ಯರಿಂದ ಇಂತಹ ನಡವಳಿಕೆಯನ್ನು ನಿರೀಕ್ಷಿಸಿರಲಿಲ್ಲ ಎಂದರು.

ಕೆಟ್ಟವ್ಯಕ್ತಿಗಳಿಂದ ದೂರರವಿರಿ:

ದರ್ಶನ್‌ ಅವರು ಇಂತಹ ವ್ಯಕ್ತಿಗಳ ಸಹವಾಸ ಏಕೆ ಮಾಡಿದ್ದಾರೋ ಗೊತ್ತಿಲ್ಲ. ವಿದ್ಯಾವಂತರು ಹಾಗೂ ವಿದೇಶದಲ್ಲಿ ಉದ್ಯಮ ಮಾಡುತ್ತಿದ್ದವರಿಗೆ ಇದು ಗೊತ್ತಾಗುವುದಿಲ್ಲವೇ ಎಂದು ಪ್ರಶ್ನಿಸಿದ ಪುಟ್ಟರಾಜು, ಮೇ 10 ರಂದೇ ಜನರು ಫಲಿತಾಂಶ ಬರೆದಾಗಿದೆ. 13ರಂದು ಅದು ಹೊರಬೀಳಲಿದೆ. ಸೋತರೂ-ಗೆದ್ದರೂ ನಾವೆಲ್ಲ ಒಗ್ಗಟ್ಟಾಗಿ ಇರಬೇಕು. ಇದನ್ನರಿತು ದರ್ಶನ್‌ ಪುಟ್ಟಣ್ಣಯ್ಯ ಕೆಟ್ಟವ್ಯಕ್ತಿಗಳನ್ನು ದೂರ ಇಡುವುದು ಸೂಕ್ತ ಎಂದು ಸಲಹೆ ನೀಡಿದರು.

ಬಳಿಕ ದರ್ಶನ್‌ ಪುಟ್ಟಣ್ಣಯ್ಯ ಸ್ಥಳದಿಂದ ತೆರಳಿದ್ದಾರೆ. ಸೋಲಿನ ಭೀತಿಯಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರು ಗ್ರಾಮದಲ್ಲಿ ಗಲಭೆ ಸೃಷ್ಟಿಸಿ ಅಶಾಂತಿ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದಲೇ ರೈತಸಂಘದ ಕಾರ್ಯಕರ್ತರನ್ನು ಚಿನಕುರಳಿಗೆ ಕರೆಯಿಸಿ ಗಲಾಟೆ ನಡೆಸಿರಬಹುದು ಎಂದು ದೂರಿದರು.

ನಮ್ಮದು ತಪ್ಪಿದ್ದರೆ ತಿದ್ದಿಕೊಳ್ಳುತ್ತೇವೆ

ನನ್ನ ಮತ್ತು ನಮ್ಮ ಪಕ್ಷದ ಕಾರ‍್ಯಕರ್ತರ ನಡವಳಿಕೆ ಸರಿಯಿಲ್ಲದಿದ್ದರೆ ದರ್ಶನ್‌ ಪುಟ್ಟಣ್ಣಯ್ಯ ಅವರು ಹೇಳಲಿ, ತಪ್ಪನ್ನು ತಿದ್ದಿಕೊಳ್ಳುತ್ತೇವೆ. ಅದು ಬಿಟ್ಟು ಈ ರೀತಿಯ ವೈಷಮ್ಯ ರಾಜಕಾರಣ ಮಾಡುವುದು ಸರಿಯಲ್ಲ.

ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌ ಹಾಜರಿದ್ದರು.

ಸತ್ತುಹೋಗುತ್ತಿದ್ದ ಪಕ್ಷಕ್ಕೆ ಜೀವ ತುಂಬಿದವರು ರಾಮಚಂದ್ರ

ಮಂಡ್ಯ ಕ್ಷೇತ್ರದಲ್ಲಿ ಸತ್ತುಹೋಗುತ್ತಿದ್ದ ಜೆಡಿಎಸ್‌ಗೆ ಜೀವ ತುಂಬಿದವರು ಬಿ.ಆರ್‌.ರಾಮಚಂದ್ರ(BR Ramachandra) ಎಂದು ಶಾಸಕ ಸಿ.ಎಸ್‌.ಪುಟ್ಟರಾಜು(CS Puttaraju MLA) ಹೇಳಿದರು. ಜೆಡಿಎಸ್‌ ಪಕ್ಷ ಮಂಡ್ಯ ಕ್ಷೇತ್ರದಲ್ಲಿ ಸರ್ವನಾಶವಾಗುವ ಸ್ಥಿತಿಯಲ್ಲಿತ್ತು. ಆಗ ರಾಮಚಂದ್ರ ಬಂದು ಸಂಘಟನೆಗೆ ಒತ್ತಾಸೆಯಾಗಿ ನಿಂತಿದ್ದರಿಂದ ಪಕ್ಷದ ಜೀವ ಉಳಿಯಿತು. ಟಿಕೆಟ್‌ ವಿಚಾರದಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಟಿಕೆಟ್‌ ಕೊಡುವವನು ನಾನಲ್ಲ. ಜೆಡಿಎಸ್‌ ವರಿಷ್ಠರು ನೀಡಿದ್ದಾರೆ. ಅದಕ್ಕೂ ನನಗೂ ಏನು ಸಂಬಂಧ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಹೊಸ ಆಲೋಚನೆಯೊಂದಿಗೆ ಸ್ಪರ್ಧೆ, ಮೇಲುಕೋಟೆ ಮತ್ತಷ್ಟುಅಭಿವೃದ್ಧಿಗೆ ಬದ್ಧ: ಶಾಸಕ ಸಿಎಸ್‌ ಪುಟ್ಟರಾಜು

ನಾನು ವಿಜಯಾನಂದನನ್ನೂ ನೋಡಿದ್ದೇನೆ. ಅವರ ತಾತ, ತಂದೆಯನ್ನೂ ನೋಡಿದ್ದೇನೆ. ಅವರ ಮತ್ತು ನಮ್ಮ ಕುಟುಂಬದ ನಡುವೆ ಒಳ್ಳೆಯ ಬಾಂಧವ್ಯತವಿದೆ. ಸತ್ಯಾಂಶ ತಿಳಿಯದೆ ಏನೇನೋ ಮಾತನಾಡಬಾರದು. ವಿಜಯಾನಂದ ಇನ್ನೂ ಚಿಕ್ಕವನು. ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು. ಶಂಕರಗೌಡರ ಅಭಿಮಾನಿಗಳೆಲ್ಲಾ ಈಗ ನನ್ನ ಅಭಿಮಾನಿಗಳಾಗಿದ್ದಾರೆ ಎಂದು ತಿರುಗೇಟು ನೀಡಿದರು.