ಬೆಂಗಳೂರು (ಅ.11):  ‘ನನ್ನನ್ನು ಇತರೆ ಪಕ್ಷಗಳು ಸಂಪರ್ಕಿಸಿವೆ ಎಂಬ ವರದಿಗಳನ್ನು ನೋಡಿದ್ದೇನೆ. ಇದು ಸತ್ಯಕ್ಕೆ ದೂರವಾದದ್ದು’ ಎಂದು ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲ ಹೇಳಿದ್ದಾರೆ.

ಶನಿವಾರ ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ನನ್ನನ್ನು ಇತರೆ ಪಕ್ಷಗಳು ಸಂಪರ್ಕಿಸಿವೆ ಎಂಬ ಕಾಲ್ಪನಿಕ ವರದಿಯನ್ನು ಇತ್ತೀಚೆಗೆ ಮಾಧ್ಯಮದಲ್ಲಿ ನಾನು ಗಮನಿಸಿದ್ದೇನೆ. ಈ ವರದಿ ಸಂಪೂರ್ಣವಾಗಿ ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದದ್ದು’ ಎಂದಿದ್ದಾರೆ. ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕರಾದ ಎಂ.ಬಿ.ಪಾಟೀಲ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಹೈಕಮಾಂಡ್‌ ಮುಂದಾಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಂತರ ರಾಜ್ಯದಲ್ಲಿ ಪ್ರಭಾವಿ ಲಿಂಗಾಯತ ನಾಯಕರ ಕೊರತೆ ಇರುವುದರಿಂದ ಪಾಟೀಲ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಹೈಕಮಾಂಡ್‌ ಆಸಕ್ತಿ ಹೊಂದಿದೆ. ಅದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಪಾಟೀಲ ಅವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವ ಆಮಿಷವನ್ನು ಬಿಜೆಪಿ ಮುಂದಿಟ್ಟಿದೆ’ ಎಂಬ ವರದಿಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.