ಬೆಂಗಳೂರು[ಫೆ.25]: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಮಾನಸಿಕ ಅಸ್ವಸ್ಥರು ಹತಾಶೆಗೊಳಗಾಗಿ ಅನಾಮಧೇಯ ಪತ್ರ ಬರೆದಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅನಾಮಧೇಯ ಪತ್ರ ಬರೆದವರು ಯಾರು ಎಂಬ ಮಾಹಿತಿ ಸಿಕ್ಕಿದೆ. ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ಬಹಿರಂಗಪಡಿಸುತ್ತೇನೆ. ಬಿಜೆಪಿಯ ಶಾಸಕರಾರ‍ಯರೂ ಪತ್ರ ಬರೆದಿಲ್ಲ. ಹತಾಶ ಮನೋಭಾವಕ್ಕೊಳಗಾಗಿ ಕೆಲವರು ಮಾನಸಿಕ ಅಸ್ವಸ್ಥರಾಗಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವನ್ನು ಯಾವುದೇ ಕಾರಣಕ್ಕೂ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಜತೆ 117 ಶಾಸಕರೂ ಇದ್ದೇವೆ. ಮುಂದಿನ ಮೂರೂವರೆ ವರ್ಷ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ. ಬಿಜೆಪಿ ಸರ್ಕಾರ ಅಸ್ಥಿರಗೊಳ್ಳಲಿದೆ ಎಂದು ಕೆಲವರು ಬಾಯಿ ಚಟಕ್ಕೆ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಪಕ್ಷದಲ್ಲಿ ಮೂಲ-ವಲಸಿಗರೆಂಬ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದರು.