ಬಿಜೆಪಿ ವರಿಷ್ಠರ ಎದುರು ಇಲ್ಲಿನ ಅಡ್ಜಸ್ಟ್‌ಮೆಂಟ್ ಎಲ್ಲ ಹೇಳಿದ್ದೇನೆ: ಶಾಸಕ ಬಸನಗೌಡ ಯತ್ನಾಳ
ನವದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಫಲಪ್ರದವಾಗಿದ್ದು, ಇಲ್ಲಿನ ಅಡ್ಜೆಸ್ಟ್‌ಮೆಂಟ್ ರಾಜಕಾರಣದ ಬಗ್ಗೆ ಸುದೀರ್ಘವಾಗಿ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ (ಜ.08): ನವದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಫಲಪ್ರದವಾಗಿದ್ದು, ಇಲ್ಲಿನ ಅಡ್ಜೆಸ್ಟ್‌ಮೆಂಟ್ ರಾಜಕಾರಣದ ಬಗ್ಗೆ ಸುದೀರ್ಘವಾಗಿ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ನನ್ನನ್ನು ತರಾಟೆಗೆ ತೆಗೆದುಕೊಂಡಿದೆ ಎಂಬುದು ಶುದ್ಧ ಸುಳ್ಳು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಇಲ್ಲಿನ ವಿದ್ಯಮಾನ ವಿವರಿಸಿದ್ದೇನೆ. ಸುದೀರ್ಘ 25 ನಿಮಿಷಗಳ ಕಾಲ ಬಿಜೆಪಿಯ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮುಂತಾದ ಪ್ರಹಸನಗಳನ್ನು ವಿವರಿಸಿದ್ದೇನೆ ಎಂದು ವಿವರಿಸಿದರು.
ನಾನು ಬಿಜೆಪಿಗೆ ಘರ್ ವಾಪಸ್ ಆಗಲು ಬಿ.ಎಸ್. ಯಡಿಯೂರಪ್ಪ ಕಾರಣವಲ್ಲ. ವಿಜಯೇಂದ್ರನ ಬೆಂಬಲಿಸುವ ಸಾಮಾಜಿಕ ಜಾಲತಾಣದಲ್ಲಿ ನಾನು ಉಪಕಾರ ಮರೆಯಬಾರದು ಎಂದು ಪ್ರಚಾರ ಮಾಡುತ್ತಿದ್ದಾರೆ. ವಾಸ್ತವವಾಗಿ ಬಿ.ಎಸ್.ಯಡಿಯೂರಪ್ಪ ಅವರು ನಾನು ಬಿಜೆಪಿ ಸೇರ್ಪಡೆಯಾಗುವುದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಅಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ನನಗೆ ಖುದ್ದು ಪಕ್ಷಕ್ಕೆ ಬರುವಂತೆ ಹೇಳಿದಾಗ ಪಕ್ಷೇತರ ವಿಧಾನ ಪರಿಷತ್ ಸದಸ್ಯನಾಗಿದ್ದ ನಾನು ರಾಜೀನಾಮೆ ನೀಡಿ ಬಿಜೆಪಿ ಸೇರಿದೆ ಎಂದರು.
ರಾಜ್ಯದಲ್ಲಿ ಕೋವಿಡ್-19 ಕಾಲಘಟ್ಟದಲ್ಲಿ ದೊಡ್ಡ ಹಗರಣ ನಡೆದಿದೆ. ಇದರ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ಕೂಡಲೇ ಸಿಬಿಐಗೆ ವಹಿಸಬೇಕು. ಕೋವಿಡ್ ಕಿಟ್ ಹಿಮಾಚಲ ಪ್ರದೇಶ ಸರ್ಕಾರ ಖರೀದಿಸಿರುವ ಮೊತ್ತಕ್ಕೂ ರಾಜ್ಯ ಸರ್ಕಾರ ಖರೀದಿಸಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ಎಲ್ಲವೂ ಬಯಲಿಗೆಳೆಯುವೆ ಎಂದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್‌ಡಿಕೆ ಭೇಟಿ ಮಾಡುತ್ತಿರುವ ಬಿಜೆಪಿ ಪ್ರಮುಖರು: ಯಾಕೆ?
ಲಕ್ಷ ದಿಪೋತ್ಸವ: ಜ.22 ರಂದು ರಾಮಮಂದಿರ ನಿರ್ಮಾಣಗೊಂಡಿರುವುದು ಸಮಸ್ತ ಹಿಂದೂಗಳ ಸ್ವಾಭಿಮಾನದ ಸಂಕೇತವಾಗಿದೆ. ರಾಮಮಂದಿರ ನಿರ್ಮಾಣ ಗಳಿಗೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಸಿದ್ಧತೆ ನಡೆದಿದೆ. ಅಂದು ಇಡೀ ನಗರವೇ ದೀಪಗಳಿಂದ ಕಂಗೊಳಿಸಲಿದೆ. ಒಂದು ರೀತಿ ದೀಪಾವಳಿ ಹಬ್ಬದ ಸಂಭ್ರಮ ಸೃಷ್ಟಿಯಾಗಲಿದೆ ಎಂದು ಯತ್ನಾಳ ತಿಳಿಸಿದರು. ಎಲ್ಲ ದೇವಾಲಯಗಳ ಆಡಳಿತ ಮಂಡಳಿ ಸಭೆ ಕರೆದು ಅಂದು ಭಜನೆ, ಹೋಮ-ಹವನ ಕೈಗೊಳ್ಳುವಂತೆ ಕೋರಲಾಗುವುದು, ನಗರದಲ್ಲಿ ಲಕ್ಷ ದೀಪೋತ್ಸವ ಆಯೋಜನೆ ಮಾಡಲಾಗುವುದು, ಅಂದು ಕೇವಲ ನಗರದಲ್ಲಿ ಜೈ ಶ್ರೀರಾಮ ಜೈ ಶ್ರೀರಾಮ ಎಂಬ ಘೋಷಣೆಯೊಂದೇ ಕೇಳಿ ಬರಬೇಕು, ಆ ನಿಟ್ಟಿನಲ್ಲಿ ನಮ್ಮ ಸಿದ್ಧತೆ ನಡೆಯಲಿದೆ ಎಂದರು.