Asianet Suvarna News Asianet Suvarna News

ನಾನು ಯಾರನ್ನೂ ಹೆದರಿಸುವ ನಿರ್ಧಾರ ಮಾಡಲ್ಲ: ಪ್ರಧಾನಿ ಮೋದಿ

ಕಪ್ಪುಹಣ ನಿಗ್ರಹಕ್ಕೆ ಬಾಂಡ್‌ ಸ್ಥಾಪಿಸಲಾಗಿತ್ತು. ಅದು ಪರಿಪೂರ್ಣ ಆಗಿಲ್ಲದಿದ್ದರೆ ಸುಧಾರಿಸಬಹುದಿತ್ತು. ಆದರೆ ಅದು ಈಗ ರದ್ದಾಗಿದೆ. ಹೀಗೆ ರದ್ದಾಗಿದೆ ಎಂದು ಸಂಭ್ರಮಿಸುವವರು ಪಶ್ಚಾತ್ತಾಪ ಪಡಲಿದ್ದಾರೆ ಎಂದ ಪ್ರಧಾನಿ ನರೇಂದ್ರ ಮೋದಿ 

I have not Decided to Scare Anyone says PM Narendra Modi grg
Author
First Published Apr 16, 2024, 7:00 AM IST

ನವದೆಹಲಿ(ಏ.16):  ‘2047ಕ್ಕೆ ಭಾರತ ವಿಕಸಿತ ದೇಶ ಆಗಲು ಹಲವು ಕ್ರಮ ಜರುಗಿಸುವೆ. ಹಲವು ದೊಡ್ಡ ನಿರ್ಧಾರಗಳನ್ನೂ ಕೈಗೊಳ್ಳುವೆ. ಆದರೆ ನನ್ನ ದೊಡ್ಡ ಯೋಜನೆಗಳ ಬಗ್ಗೆ ಭಯ ಬೇಡ. ನಾನು ಯಾರನ್ನೂ ಹೆದರಿಸುವ ತೀರ್ಮಾನ ಕೈಗೊಳ್ಳಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಎಎನ್‌ಐ ಸುದ್ದಿಸಂಸ್ಥೆಗೆ ಸೋಮವಾರ ಸಂದರ್ಶನ ನೀಡಿದ ಅವರು, ‘2047ರಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶ ಮಾಡಲು ಪಣ ತೊಡಲಾಗಿದೆ. ಆದರೆ ಇದಕ್ಕಾಗಿ ದೊಡ್ಡ ಯೋಜನೆಗಳನ್ನು ನಾನು ಹಮ್ಮಿಕೊಳ್ಳಲಿದ್ದೇನೆ ಎಂದು ಹೇಳಿದಾಗ ಹಲವರು ಭಯ ಪಟ್ಟಿದ್ದಾರೆ. ಯಾರೂ ಭಯಪಡಬಾರದು, ನಾನು ಯಾರನ್ನೂ ಹೆದರಿಸುವ ಅಥವಾ ಓಡಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ಯಾರಿಗೂ ಹೆದರಿಸುವ ಅವಶ್ಯಕತೆ ನನಗಿಲ್ಲ. ನಾನು ರಾಷ್ಟ್ರದ ಸಮಗ್ರ ಅಭಿವೃದ್ಧಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ಆಗಲಿವೆ. ಇದಕ್ಕಾಗಿ ಒಂದು ರೋಡ್ ಮ್ಯಾಪ್ ಸಿದ್ಧಗೊಳಿಸಲಾಗಿದೆ’ ಎಂದರು.

ಲೋಕಸಭೆ ಚುನಾವಣೆ 2024: ಕಾಂಗ್ರೆಸ್‌ನ ಲೋಕಲ್‌ ಗ್ಯಾರಂಟಿ, ಮೋದಿ ಗ್ಯಾರಂಟಿ ನಡುವೆ ಪೈಪೋಟಿ..!

ಬಾಂಡ್‌ ರದ್ದಾಗಿದ್ದಕ್ಕೆ ಪಶ್ಚಾತ್ತಾಪ ಪಡ್ತಾರೆ

ಚುನಾವಣಾ ಬಾಂಡ್ ಪಾರದರ್ಶಕವಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್‌ ರದ್ದು ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ 2ನೇ ಸಲ ಪ್ರತಿಕ್ರಿಯಿಸಿದ್ದಾರೆ. ‘ಕಪ್ಪುಹಣ ನಿಗ್ರಹಕ್ಕೆ ಬಾಂಡ್‌ ಸ್ಥಾಪಿಸಲಾಗಿತ್ತು. ಅದು ಪರಿಪೂರ್ಣ ಆಗಿಲ್ಲದಿದ್ದರೆ ಸುಧಾರಿಸಬಹುದಿತ್ತು. ಆದರೆ ಅದು ಈಗ ರದ್ದಾಗಿದೆ. ಹೀಗೆ ರದ್ದಾಗಿದೆ ಎಂದು ಸಂಭ್ರಮಿಸುವವರು ಪಶ್ಚಾತ್ತಾಪ ಪಡಲಿದ್ದಾರೆ’ ಎಂದಿದ್ದಾರೆ.

‘ಚುನಾವಣೆ ಎಂದರೆ ಖರ್ಚು ಸಾಮಾನ್ಯ. ನಾವು ಸೇರಿ ಎಲ್ಲ ಪಕ್ಷಗಳೂ ಖರ್ಚು ಮಾಡುತ್ತೇವೆ. ಅದಲ್ಲಿ ಕಪ್ಪುಹಣ ಹರಿದಾಡುತ್ತಿತ್ತು. ಆದರೆ ಹಣ ಸಕ್ರಮವಾಗಿರಬೇಕು ಎಂಬ ಕಾರಣಕ್ಕೆ ಚುನಾವಣಾ ಬಾಂಡ್‌ ಎಂಬ ಹೊಸ ಐಡಿಯಾ ಹೊಳೆದು ಜಾರಿಗೆ ತರಲಾಗಿತ್ತು. ಆದು ಪರಿಪೂರ್ಣ ಎಂದು ನಾನೆಲ್ಲೂ ಹೇಳಿರಲಿಲ್ಲ. ಅದರಲ್ಲಿ ಲೋಪ ಇದ್ದರೆ ಸರಿಪಡಿಸಬಹುದಾಗಿತ್ತು. ಆದರೆ ಈಗ ಅದು ರದ್ದಾಗಿದೆ. ಇದಕ್ಕೆ ಸಂಭ್ರಮಿಸುವವರು ಮುಂದೆ ಪಶ್ಚಾತ್ತಾಪ ಪಡುತ್ತಾರೆ’ ಎಂದರು

ಇ.ಡಿ., ಐಟಿ, ಸಿಬಿಐ ಕಾನೂನು ಮಾಡಿದ್ದು ನಾವಲ್ಲ

ಇಡಿ, ಸಿಬಿಐ, ಚುನಾವಣಾ ಆಯೋಗ ಮತ್ತು ಐಟಿ ಇಲಾಖೆಗಳನ್ನು ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ವಿ ವಿಪಕ್ಷಗಳ ಟೀಕೆಯ ಬಗ್ಗೆ ಮೋದಿ ಪ್ರತಿಕ್ರಿಯಿಸಿ, ‘ಇವುಗಳಲ್ಲಿ ಒಂದೇ ಒಂದು ಕಾನೂನನ್ನು ನಮ್ಮ ಸರ್ಕಾರ ತಂದಿಲ್ಲ. ಅದಕ್ಕೆ ವಿರುದ್ಧವಾಗಿ ಚುನಾವಣಾ ಆಯೋಗದ ಸುಧಾರಣೆಯನ್ನು ನಮ್ಮ ಸರ್ಕಾರ ತಂದಿದೆ. ಈ ಹಿಂದೆ ಕುಟುಂಬಕ್ಕೆ ಹತ್ತಿರವಾದವರನ್ನು ಚುನಾವಣಾ ಆಯುಕ್ತರನ್ನಾಗಿ ಮಾಡಲಾಗಿತ್ತು. ನಂತರ ಅವರಿಗೆ ರಾಜ್ಯಸಭಾ ಸ್ಥಾನಗಳು ಮತ್ತು ಸಚಿವಸ್ಥಾನ ನೀಡಲಾಗಿತ್ತು. ನಾವು ಆ ಮಟ್ಟದಲ್ಲಿ ಅವರಂತೆ ದುರ್ಬಳಕೆ ಮಾಡಲು ಸಾಧ್ಯವಿಲ್ಲ’ ಎಂದು ತಿರುಗೇಟು ನೀಡಿದರು.ಅಲ್ಲದೆ, ಇ.ಡಿ., ಐಟಿ ಕೇಸುಗಳು ರಾಜಕಾರಣಿಗಳ ಮೇಲೆ ಇರುವುದು ಕೇವಲ ಶೇ.3ರಷ್ಟು ಮಾತ್ರ. ಇನ್ನು ಶೇ.97 ಕೇಸು ರಾಜಕೀಯೇತರ ಜನರ ಮೇಲಿವೆ. ಹೀಗಿದ್ದಾಗ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ವಿಪಕ್ಷಗಳ ಮೇಲೆ ಇ.ಡಿ., ಐಟಿ ಮೂಲಕ ದಾಳಿ ಮಾಡಲಾಗುತ್ತಿದೆ ಎಂಬುದು ಸರಿಯೇ ಎಂದು ಪ್ರಶ್ನಿಸಿದರು.

ಒಂದು ರಾಷ್ಟ್ರ ಒಂದು ಚುನಾವಣೆ ಅದು ನಮ್ಮ ಬದ್ಧತೆ

ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಮೋದಿ ಮಾತನಾಡಿ, ‘ಅದು ನಮ್ಮ ಬದ್ಧತೆ. ದೇಶದಲ್ಲಿ ಅನೇಕ ಜನರು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಈ ಕುರಿತು ನಾವು ರಚಿಸಲಾಗಿದ್ದ ಸಮಿತಿಗೆ ನೀಡಿದ್ದಾರೆ. ನಾವು ಸಮಿತಿಯ ವರದಿಯನ್ನು ಕಾರ್ಯಗತಗೊಳಿಸಲು ಸಮರ್ಥರಾದರೆ ದೇಶಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ’ ಎಂದರು.\

70 ವರ್ಷ ದಾಟಿದವರಿಗೂ ಆಯುಷ್ಮಾನ್ ಯೋಜನೆ, ಬುಲೆಟ್ ಟ್ರೈನ್ ವಿಸ್ತರಣೆ: ಇಲ್ಲಿದೆ ಬಿಜೆಪಿ ಪ್ರಣಾಳಿಕೆಯ ಹೈಲೈಟ್ಸ್‌

ರಾಮಮಂದಿರ ರಾಜಕೀಯ ಬೇಡ

ರಾಮಮಂದಿರ ವಿಚಾರವನ್ನು ರಾಜಕೀಯಕರಣ ಮಾಡಬಾರದು. ರಾಮ ಪ್ರತಿಷ್ಠಾಪನೆಯನ್ನು ನಾನು ಬಹಳ ಗಂಭೀರವಾಗಿ ತೆಗೆದುಕೊಂಡೆ. ಹಲವರನ್ನು ಸಂಪರ್ಕಿಸಿದೆ. 11 ದಿನಗಳ ಕಾಲ ನಿಷ್ಠೆ ಯಿಂದ ವ್ರತ ಪಾಲಿಸಿದೆ ಎಂದು ಸ್ಪಷ್ಟಪಡಿಸಿದರು.

ಭಾರತ ಇಬ್ಭಾಗ: ಡಿಕೆಸು ವಿರುದ್ಧ ಕಿಡಿ

ಇನ್ನು ದಕ್ಷಿಣ ಭಾರತ ಪ್ರತ್ಯೇಕ ದೇಶದ ಬಗ್ಗೆ ಮಾತನಾಡಿದ್ದ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಬಗ್ಗೆ ಅವರು ಪ್ರತಿಕ್ರಿಯಿಸಿ, ‘ಭಾರತವನ್ನು ಇಬ್ಬಾಗಿಸಿ ನೋಡುವುದು ಬುದ್ಧಿಹೀನತೆಯಾಗಿದೆ. ಪ್ರತಿಪಕ್ಷಗಳ ಉತ್ತರ-ದಕ್ಷಿಣ ವಿಭಜನೆ ಸರಿಯಲ್ಲ ಭಾರತದ ಯಾವ ಭಾಗವು ಭಗವಾನ್ ರಾಮನ ಹೆಸರಿನೊಂದಿಗೆ ಹೆಚ್ಚು ಸಂಖ್ಯೆಯ ಹಳ್ಳಿಗಳನ್ನು ಹೊಂದಿದೆ? ವೈವಿಧ್ಯತೆ ನಮ್ಮ ಶಕ್ತಿ, ಅದನ್ನು ನಾವು ಆಚರಿಸಬೇಕು’ ಎಂದು ತಮಿಳುನಾಡು ಉಲ್ಲೇಖಿಸಿ ಹೇಳಿದರು.

Follow Us:
Download App:
  • android
  • ios