ರಾಮ ಮಂದಿರ ನಿರ್ಮಾಣಕ್ಕೆ 10 ಲಕ್ಷ ನೀಡಿದ್ದೇನೆ, ಆಹ್ವಾನ ನೀಡಿಲ್ಲ: ಶಾಸಕ ಲಕ್ಷ್ಮಣ ಸವದಿ
ರಾಮ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಆಹ್ವಾನಿಸದೇ ಇರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಲಕ್ಷ್ಮಣ ಸವದಿ, ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಣೆ ಮಾಡುವಾಗ ಎಲ್ಲರೂ ನೆನಪಾದರು, ಆದರೆ ಮಂದಿರ ಸಿದ್ದವಾದ ಮೇಲೆ ಯಾರ ನೆನಪು ಇಲ್ಲ.
ಬೆಂಗಳೂರು (ಜ.03): ರಾಮ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಆಹ್ವಾನಿಸದೇ ಇರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಲಕ್ಷ್ಮಣ ಸವದಿ, ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಣೆ ಮಾಡುವಾಗ ಎಲ್ಲರೂ ನೆನಪಾದರು, ಆದರೆ ಮಂದಿರ ಸಿದ್ದವಾದ ಮೇಲೆ ಯಾರ ನೆನಪು ಇಲ್ಲ. ನಾನು ಕೂಡಾ ಮಂದಿರ ನಿರ್ಮಾಣಕ್ಕೆ 10 ಲಕ್ಷ ರು.ಗಳನ್ನು ಕೊಟ್ಟಿದ್ದೇನೆ. ಸ್ಥಳೀಯ ಆರ್‌ಎಸ್‌ಎಸ್ ನಾಯಕರು ಹಣ ತೆಗೆದುಕೊಂಡು ಹೋಗಿದ್ದಾರೆ. ಆದರೆ ಈಗ ಯಾವುದಕ್ಕೂ ಆಹ್ವಾನ ನೀಡಿಲ್ಲ, ರಾಮ ಮಂದಿರ ಆಗಲು ಅಡ್ವಾಣಿ ಕಾರಣ, ಆದರೆ ಅವರಿಗೆ ಬರಬಾರದು ಎಂದು ಹೇಳುವ ಬಿಜೆಪಿಗೆ ನೈತಿಕತೆ ಎಲ್ಲಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ,ಕಾನೂನಿನ ಅಡಿಯಲ್ಲಿ ಎಲ್ಲರೂ ಬರುತ್ತಾರೆ, ಕರಸೇವಕ ರಾಮಭಕ್ತ ಅಲ್ಲಾನ ಭಕ್ತನೂ ಬರುತ್ತಾರೆ. ಬಿಜೆಪಿಯವರು ಧರ್ಮ, ದೇವರು ಬಿಟ್ಟು ಬೇರೇನೂ ಮಾಡುವುದಿಲ್ಲ, ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರಾ, ಧರ್ಮ, ದೇವರು ಯಾರಪ್ಪನ ಮನೆ ಆಸ್ತಿ ಆಗಬಾರದು, ನಂದೇ ಧರ್ಮ, ನಾನೇ ಸ್ಥಾಪನೆ ಮಾಡುತ್ತೇನೆ ಎನ್ನುವ ಅಭಾಸತನದಿಂದ ದೇವ ದಿವಾಳಿ ಆಗುತ್ತಿದೆ ಎಂದರು.
ರಾಮ ಒಬ್ಬರಿಗೆ ಜಾಗೀರ್ ಅಲ್ಲ: ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ ರಾಮ ಯಾರೊಬ್ಬರ ಜಾಗೀರ್ ಅಲ್ಲ, ರಾಮ, ಸೀತೆ ಎಲ್ಲ ಸಮುದಾಯಕ್ಕೆಎಲ್ಲ ಹಿಂದುಗಳಿಗೆ ಸೇರಿದವನು, ಬಿಜೆಪಿಯವರು ಭಾವನಾತ್ಮಕ ವಿಷಯ ಸೇರಿಸಿ ಮಾತನಾಡುತ್ತಿದ್ದಾರೆ. ಹುಸಿ ರಾಷ್ಟ್ರೀಯತೆ ಹೆಚ್ಚಾಗುತ್ತಿದೆ. ಬೋಲೋ ಭಾರತ್ ಮಾತಾ ಕಿ ಜೈ ಅಂದು ಅತ್ಯಾಚಾರ, ಕೊಲೆ ಮಾಡಿದರೆ ಅದನ್ನು ಒಪ್ಪುತ್ತೀರಾ, ಹುಬ್ಬಳ್ಳಿಯಲ್ಲಿ ಇಬ್ಬರ ಬಂಧನ ಆಡಳಿತಾತ್ಮಕ ವಿಚಾರ ಅಷ್ಟೇ ಎಂದರು.
ಕಾಂಗ್ರೆಸ್ ಶ್ರೀರಾಮಮಂದಿರ ರೀವೆಂಜ್ ತೀರಿಸಿಕೊಳ್ಳಲು ಹೊರಟಿದೆ: ಪ್ರಲ್ಹಾದ್ ಜೋಶಿ
ದೇವರು, ಧರ್ಮ ಇಟ್ಟುಕೊಂಡು ಬಿಜೆಪಿ ರಾಜಕಾರಣ: ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಅನಾವಶ್ಯಕವಾಗಿ ಬಿಜೆಪಿ ನಾಯಕರು ಈ ರೀತಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಯಾವುದೇ ಬಂಡವಾಳ ಇಲ್ಲ, ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಆಹ್ವಾನ ನೀಡಿಲ್ಲ ಎಂದರೆ ಇದು ರಾಜಕೀಯವಾಗಿದೆ. ಬಿಜೆಪಿಯವರು ರಾಜಕಾರಣ ನಡೆಸಲು ಒಂದೊಂದು ಚುನಾವಣೆಗೆ ಒಂದೊಂದು ವಿಷಯ ಮುನ್ನೆಲೆಗೆ ತರುತ್ತಿದ್ದಾರೆ. ರಾಮಮಂದಿರ ಎಲ್ಲರಿಗೂ ಸೇರಿದ್ದಾಗಿದೆ. ಶ್ರೀರಾಮನನ್ನು ಬಿಜೆಪಿಯವರು ಎಷ್ಟು ಪೂಜಿಸುತ್ತಾರೋ ಅವರಿಗಿಂತ ಹೆಚ್ಚಾಗಿ ನಾವು ಶ್ರೀರಾಮ, ಕೃಷ್ಣನ ಭಕ್ತರಾಗಿದ್ದೇವೆ. ನಾವು ದೇವರು, ಧರ್ಮ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದಿಲ್ಲ ಎಂದು ಟೀಕಿಸಿದರು.