‘ಪ್ರತಿ ದಿನ ಕಲಾಪಕ್ಕೆ ನಾವು ಬೇಗ ಬಂದು ನಿಮಗಾಗಿ ಒಂದೊಂದು ತಾಸು ಕಾಯುವ ಪರಿಸ್ಥಿತಿ ಬಂದಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ವಿಧಾನಸಭೆ (ಮಾ.15): ‘ಪ್ರತಿ ದಿನ ಕಲಾಪಕ್ಕೆ ನಾವು ಬೇಗ ಬಂದು ನಿಮಗಾಗಿ ಒಂದೊಂದು ತಾಸು ಕಾಯುವ ಪರಿಸ್ಥಿತಿ ಬಂದಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ಕಲಾಪ ಬೆಳಗ್ಗೆ 10.15ಕ್ಕೆ ನಿಗದಿಯಾಗಿದ್ದರೂ 10.55 ಗಂಟೆ ಆದರೂ ಶುರುವಾಗಲಿಲ್ಲ. ಬಳಿಕ ಕಲಾಪಕ್ಕೆ ಆಗಮಿಸಿದ ಸ್ಪೀಕರ್ ಯು.ಟಿ.ಖಾದರ್, ಆಡಳಿತ ಪಕ್ಷದ ಕಡೆ ನೋಡಿ ‘ಇವತ್ತಾದರೂ ಬೇಗ ಬಂದಿದ್ದೀರಲ್ಲ ಖುಷಿ’ ಎಂದರು. ಇದಕ್ಕೆ ತಿರುಗೇಟು ನೀಡಿದ ಸಚಿವ ಕೃಷ್ಣಬೈರೇಗೌಡ, ‘ಅಯ್ಯೋ ಯಾರು? ನಾವು ಬೇಗ ಬಂದು ನಿಮಗಾಗಿ ಒಂದೊಂದು ತಾಸು ಕಾಯುವ ಪರಿಸ್ಥಿತಿ ಬಂದಿದೆ’ ಎಂದರು.
ಜನ್ಮದಿನದ ಶುಭಾಶಯಕ್ಕೆ ವಿಶೇಷ ಅಧಿವೇಶನ: ಬಳಿಕ ಸ್ಪೀಕರ್ ಯು.ಟಿ.ಖಾದರ್ ಅವರು ಹೊಸ ಸಂಪ್ರದಾಯದಂತೆ ಗುರುವಾರ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವ ಸದಸ್ಯರಿಗೆ ಶುಭಾಶಯ ತಿಳಿಸಲು ಪಟ್ಟಿ ಪರಿಶೀಲನೆ ನಡೆಸಿದರು. ಈ ವೇಳೆ ಗುರುವಾರ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವ ಸದಸ್ಯರು ಯಾರೂ ಇರಲಿಲ್ಲ. ಮಾ.15ರಂದು ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಅವರ ಹುಟ್ಟುಹಬ್ಬ ಇತ್ತು. ಹೀಗಾಗಿ, ‘ಮಾ.15ರಂದು ಕಲಾಪ ಇರುವುದಿಲ್ಲ. ಹೀಗಾಗಿ ಶುಭಾಶಯ ತಿಳಿಸಲು ವಿಶೇಷ ಅಧಿವೇಶನ ಕರೆಯಿರಿ’ ಎಂದು ಬಿಜೆಪಿ ಸದಸ್ಯರು ಸ್ಪೀಕರ್ ಅವರ ಕಾಲೆಳೆದರು. ಇದಕ್ಕೆ ಸ್ಪೀಕರ್, ‘ವಿಶೇಷ ಅಧಿವೇಶನ ಕರೆಯಬೇಕಾ? ಅಥವಾ ಸದಸ್ಯರ ಹುಟ್ಟುಹಬ್ಬದ ದಿನಾಂಕವನ್ನೇ ತಿದ್ದುಪಡಿ ಮಾಡಬೇಕಾ? ಎಂಬುದನ್ನು ಪ್ರತ್ಯೇಕವಾಗಿ ಪರಿಶೀಲಿಸಿ ನಿರ್ಧಾರ ಮಾಡೋಣ’ ಎಂದು ಚಟಾಕಿ ಹಾರಿಸಿದರು.
4000 ಲ್ಯಾಪ್‌ಟಾಪ್: ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಒದಗಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ನಾಲ್ಕು ಸಾವಿರ ಲ್ಯಾಪ್‌ಟಾಪ್ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಬಿಜೆಪಿಯ ಎಸ್. ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ‘ಡಿಜಿ-ಕಂದಾಯ’ ಯೋಜನೆಯಡಿ ಲ್ಯಾಪ್ ಟಾಪ್ ನೀಡಲಾಗುವುದು ಎಂದರು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಒದಗಿಸುವ ಚಾವಡಿಗಳು ಕಂದಾಯ ಇಲಾಖೆಯ ಸುಪರ್ದಿಗೆ ಸೇರಿರುತ್ತದೆ. ಇವುಗಳ ಪುನರ್ ನಿರ್ಮಾಣ ಮಾಡಲು ಪರಿಶೀಲಿಸಲಾಗುವುದು, ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ದಾಖಲೆ ಇಟ್ಟುಕೊಳ್ಳಲು ಕಪಾಟುಗಳು ಹಾಗೂ ಲೇಖನ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಜೊತೆಗೆ ಪ್ರಯಾಣ ಭತ್ಯೆಗಳನ್ನು ಒದಗಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ನದಿ ಹರಿವಾಗ ಕಸ, ಕಡ್ಡಿ ಅಡ್ಡ ಬರುತ್ತದೆ: ಬಿ.ವೈ.ವಿಜಯೇಂದ್ರ ಮಾರ್ಮಿಕ ಹೇಳಿಕೆ
ವಂಶವೃಕ್ಷ ವಿತರಣೆ ಸರಳೀಕರಣಕ್ಕೆ ಕ್ರಮ: ವಂಶವೃಕ್ಷ ಪ್ರಮಾಣ ಪತ್ರ ಪಡೆಯಲು ಈಗಿರುವ ಮಾನದಂಡವನ್ನು ಸರಳೀಕರಣ ಮಾಡಲಾಗುವುದು, ಈಗಾಗಲೇ ಈ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಬಿಜೆಪಿಯ ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಂಶವೃಕ್ಷ ಪಡೆಯಲು ಇಡೀ ರಾಜ್ಯದಲ್ಲಿ ಒಂದೇ ಮಾದರಿಯ ಮಾನದಂಡವಿದೆ. ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಹಾಗೂ ಅರ್ಜಿ ನಮೂನೆಯಲ್ಲಿ ಸ್ವಯಂ ಘೋಷಿತ ಪತ್ರ ಸಲ್ಲಿಸಬೇಕು. ಗ್ರಾಮ ಲೆಕ್ಕಿಗರು ಈ ದಾಖಲೆಗಳೊಂದಿಗೆ ಕ್ಷೇತ್ರ ಪರಿಶೀಲಿಸಿ ನೀಡಿದ ವರದಿ ಆಧಾರದ ಮೇಲೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.
