ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖಡಕ್ ಎಚ್ಚರಿಕೆ ನೀಡಿ ಬಾಯಿ ಬಂದ್ ಮಾಡಿಸಿದ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತ್ಯಾಗದ ಮಾತನಾಡಿದ್ದಾರೆ.
ಬೆಳಗಾವಿ (ಜ.22): ಡಿನ್ನರ್ ಪಾಲಿಟಿಕ್ಸ್, ಸಿಎಂ ಹುದ್ದೆ ಒಪ್ಪಂದ, ದಲಿತ ಸಿಎಂ ಕೂಗು ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆ ಜಟಾಪಟಿ ಬಗ್ಗೆ ಬಹಿರಂಗ ಹೇಳಿಕೆಯ ಪೈಪೋಟಿಗಿಳಿದಿದ್ದ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖಡಕ್ ಎಚ್ಚರಿಕೆ ನೀಡಿ ಬಾಯಿ ಬಂದ್ ಮಾಡಿಸಿದ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತ್ಯಾಗದ ಮಾತನಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ಮೊದಲಿನಿಂದಲೂ ಹಲವಾರು ಬಾರಿ ತ್ಯಾಗ ಮಾಡಿದ್ದೇನೆ. ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿಯೂ ಉಸಿರು ಬಿಗಿ ಹಿಡಿದುಕೊಂಡು ತ್ಯಾಗ ಮಾಡಿದ್ದೇನೆ ಎಂದು ಹೇಳಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ನನಗೆ ಪಕ್ಷ ಮುಖ್ಯ. ವಿದ್ಯಾರ್ಥಿ ನಾಯಕನಾಗಿದ್ದ ನನ್ನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿತು. ಮಾಧ್ಯಮದವರು ಯಾರ ಮಾತನ್ನೂ ಕೇಳಬೇಡಿ. ನಾನು ತ್ಯಾಗ ಮಾಡಿಕೊಂಡೇ ಬರುತ್ತಿದ್ದೇನೆ. ನನಗೆ ಫಲದ ಅವಶ್ಯಕತೆಯೇ ಇಲ್ಲ. ಜನಕ್ಕೆ ಒಳ್ಳೆಯದಾಗುತ್ತಿದೆಯಲ್ಲ, ಅಷ್ಟು ಸಾಕು. ಪಕ್ಷವನ್ನು ಉಳಿಸುವುದು, ಸರ್ಕಾರವನ್ನು ಭದ್ರವಾಗಿಡುವುದೇ ನನ್ನ ಕರ್ತವ್ಯ. ಇದರ ಹೊರತಾಗಿ ಬೇರೆ ಯಾವುದೇ ಕರ್ತವ್ಯಗಳಿಲ್ಲ. ಬೇರೆ ಯಾವುದಕ್ಕೂ ನನ್ನ ಹೆಸರನ್ನು ಉಪಯೋಗಿಸಿಕೊಳ್ಳಬೇಡಿ. ನನಗೆ ಯಾವುದೇ ಹುದ್ದೆಯ ಅವಶ್ಯಕತೆಯಿಲ್ಲ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಗ್ರಾಮೀಣ ವಿವಿಗೆ ಮಹಾತ್ಮ ಗಾಂಧೀಜಿ ನಾಮಕರಣ: ಗದಗಿನ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಮಹಾತ್ಮ ಗಾಂಧೀಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡುವುದರ ಜತೆಗೆ ನೂತನ ಲಾಂಛನವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಗಾಂಧೀ ಭಾರತ ವಿಶೇಷ ಅಂಚೆ ಲಕೋಟೆಯನ್ನು ಕೂಡ ಬಿಡುಗಡೆಗೊಳಿಸಲಾಯಿತು.
ಮಹಾತ್ಮ ಗಾಂಧೀಜಿ ತತ್ವಗಳಿಗೆ ನೂರರ ಸತ್ವ: ಡಿ.ಕೆ.ಶಿವಕುಮಾರ್
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಹೊರತರಲಾದ ಗಾಂಧಿ ಭಾರತ-ಮರುನಿರ್ಮಾಣ ಹಾಗೂ ಉದಯ ಕಾಲ ಸಮೂಹದ ಗಾಂಧಿ ಬಿತ್ತಿದ ಬೆಳಕು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಏಕೀಕರಣ ಚಳವಳಿಗೆ ಪ್ರೇರಣೆಯಾಗಿದ್ದ ಹುಯಿಲಗೋಳ ನಾರಾಯಣರಾವ್ ಅವರು ರಚಿಸಿದ ಉದಯವಾಗಲಿ ನಮ್ಮ ಚೆಲುವು ಕನ್ನಡ ನಾಡು ಗೀತೆಯನ್ನು ಸಾದ್ವಿನಿ ಕೊಪ್ಪ ಅವರು ಪ್ರಸ್ತುತಪಡಿಸಿದರು. ಚರಕವನ್ನು ತಿರುಗಿಸುವ ಮೂಲಕ ಮಹಾತ್ಮಾಗಾಂಧೀಜಿಯವರ ಪ್ರತಿಮೆ ಅನಾವರಣಗೊಳಿಸಿದ ಕೂಡಲೇ ಬಾನಂಗಳಕ್ಕೆ ಚಿಮ್ಮಿದ ಬಣ್ಣದ ಚಿತ್ತಾರ ಮೂಡಿಸಿ, ಚಿತ್ತಾಕರ್ಷಕ ಕಾಮನಬಿಲ್ಲಿನ ವರ್ಣಗಳನ್ನು ಅರಳಿಸಿ, ಪಟಾಕಿ ಹಾರಿಸಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
