Assembly election: ಸಂಸದೆ ಸುಮಲತಾ ಯಾರೆಂಬುದೇ ಗೊತ್ತಿಲ್ಲ: ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ..?
ರಾಜ್ಯದಲ್ಲಿ ಸಂಸದೆ ಸುಮಲತಾ ಎನ್ನುವವರು ಯಾರು ಎಂಬುದೇ ನನಗೆ ಗೊತ್ತಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿತ್ತು ಎಂಬ ಸಂಸದೆ ಸುಮಲತಾ ಹೇಳಿಕೆಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಕಲಬುರಗಿ (ಜ.12): ರಾಜ್ಯದಲ್ಲಿ ಸಂಸದೆ ಸುಮಲತಾ ಎನ್ನುವವರು ಯಾರು ಎಂಬುದೇ ನನಗೆ ಗೊತ್ತಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿತ್ತು ಎಂಬ ಸಂಸದೆ ಸುಮಲತಾ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಸಂಸತ್ ಚುನಾವಣೆಯಲ್ಲಿ ಯಾರು ಒಪ್ಪಂದ ಮಾಡಿಕೊಂಡಿರುವದು ಎಂದು ಎಲ್ಲರಿಗೂ ತಿಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.
ಇಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅವರು ಕಾಂಗ್ರೆಸ್ ಸೇರಲು ಮಾಡಿದ್ದ ಎಲ್ಲ ಪ್ರಯತ್ನಗಳನ್ನು ಬಿಚ್ಚಿಟ್ಟಿದ್ದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಡ್ಡಿಪಡಿಸಿದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಜೊತೆಗೆ ತಾವು ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದ ವೇಲೆ ಜೆಡಿಎಸ್ ಕಾಂಗ್ರೆಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿತ್ತು ಎಂದು ಹೇಳಿದ್ದರು. ಈ ಬಗ್ಗೆ ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲನ್ನು ಇನ್ನೂ ಮರೆತಂತಿಲ್ಲ. ಹೀಗಾಗಿ, ಸಂಸದೆ ಸುಮಲತಾ ಯಾರೆಂಬುದೇ ಗೊತ್ತಿಲ್ಲ. ಯಾರು ಒಳ ಒಪ್ಪಂದ ಮಾಡಿಕೊಂಡಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕಿಡಿಕಾರಿದರು.
ಸರ್ಕಾರಕ್ಕೆ ಮೋದಿ ಕಾರ್ಯಕ್ರಮದಿಂದ ಸಾಲದ ಹೊರೆ: ನಂತರ ಹುಬ್ಬಳ್ಳಿಯಲ್ಲಿ ಮೋದಿ ಕಾರ್ಯಕ್ರಮದ ಕುರಿತು ಮಾತನಾಡಿದ ಕುಮಾರಸ್ವಾಮಿ ಅವರು, ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಸರ್ಕಾರ ಯಾರ ಹಣ ಖರ್ಚು ಮಾಡುತ್ತಿದೆ. ಸ್ವಾಮಿ ವಿವೇಕಾನಂದರ ಜಯಂತಿ ಹೆಸರಲ್ಲಿ ಹಣ ಖರ್ಚು ಮಾಡಲಾಗುತ್ತಿದೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬುವಂತೆ ಸರ್ಕಾರ ಜನರ ಹಣ ಖರ್ಚು ಮಾಡುತ್ತಿದೆ. ಹುಬ್ಬಳ್ಳಿಯ ಕಾರ್ಯಕ್ರಮ ಮಾತ್ರವಲ್ಲದೇ ಇನ್ನು ಜನವರಿ 19 ರಂದು ಕಲಬುರಗಿ-ಯಾದಗಿರಿ ಮೋದಿ ಭೇಟಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮ ಸಹ ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ..
ಮೋದಿ ಕಾರ್ಯಕ್ರಮಕ್ಕೆ ಜನರನ್ನು ಕರೆತರುವ ಟಾರ್ಗೆಟ್ ನೀಡಲಾಗಿದೆ: ಯಾದಗಿರಿ ಮತ್ತು ಕಲಬುರಗಿಯಲ್ಲಿ ತೊಗರಿ ನೆಟೆ ರೋಗ ಬಂದು ಹಾಳಾಗಿದ್ದು, ಜನರು ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೋದಿಯ ಕಾರ್ಯಕ್ರಮಕ್ಕೆ ಒತ್ತಾಯ ಪೂರ್ವಕವಾಗಿ ಜನರನ್ನು ಕರೆತರಲು ಟಾರ್ಗೆಟ್ ನೀಡಲಾಗಿದೆ. ಜನರಿಗೆ ಹಕ್ಕು ಪತ್ರ ಕೊಡುವದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಬರಬೇಕಾ? ನೂರಾರು ಕೋಟಿ ಜನರ ಹಣ ಖರ್ಚು ಮಾಡುತ್ತಿರುವದು ಯಾಕೆ? ಸರ್ಕಾರದ ಹಣದಲ್ಲಿ ಬಿಜೆಪಿ ಜಾತ್ರೆ ಮಾಡುತ್ತಿದೆ. ಸಈ ಅನಗತ್ಯ ಕಾರ್ಯಕ್ರಮದ ಮೂಲಕ ರಾಜ್ಯ ಸರ್ಕಾರ ಮತ್ತಷ್ಟು ಸಾಲದ ಹೊರೆಯನ್ನು ಹೊರಬೇಕಾಗುತ್ತದೆ. ಇಂತಹ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸೂಕ್ತ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದರು.
ಸ್ಯಾಂಟ್ರೋ ರವಿ ಪ್ರಕರಣ: ಕುಮಾರಸ್ವಾಮಿ ಹತಾಶೆ ಸ್ಥಿತಿಗೆ ತಲುಪಿದ್ದಾರೆ: ಆರಗ
ಕಾಂಗ್ರೆಸ್ ಪಕ್ಷ ಕಾಪಿ ಮಾಡುತ್ತಿದೆ: ಡಿ.ಕೆ.ಶಿವಕುಮಾರ್ ಅವರು 200 ಯೂನಿಟ್‌ಗೆ ಏಷ್ಟು ರಿಯಾಯಿತಿ ನೀಡುತ್ತಿದೆ? ಇದು ಬೇರೆ ಪಕ್ಷದ ಕಾರ್ಯಕ್ರಮ ಕಾಂಗ್ರೆಸ್ ಕಾಪಿ ಮಾಡಿದೆ. 200 ಯೂನಿಟ್ ಫ್ರೀ ಅಂದ್ರೆ ಪ್ರತಿ ಕುಟುಂಬಕ್ಕೆ 800 ರೂ. ಹಣ ಕೊಟ್ಟಂತೆ ಆಗಲಿದೆ. ಇದೇನು ದೊಡ್ಡ ಯೋಜನೆಯಾ? ಪಂಜಾಬ್ ನಲ್ಲಿ ಜನ ಎಎಪಿಗೆ ಮತ ನೀಡಿದ್ದಾರೆ ಅಂತಾ ಕಾಂಗ್ರೆಸ್ ಕಾಪಿಮಾಡಿದೆ. ಕಾಂಗ್ರೆಸ್‌ಗೆ ಸ್ವಂತಿಕೆ ಎಂಬುದೆ ಇಲ್ಲ. ಕಾಂಗ್ರೆಸ್ ಈ ರಾಜ್ಯದಲ್ಲಿ ಭ್ರಷ್ಟಾಚಾರ ನಿಲಿಸ್ತಿರಾ.? ಎಂದು ಕಿಡಿ ಕಾರಿದರು.