ಪಕ್ಷಕ್ಕಾಗಿ ಮೊದಲಿನಿಂದಲೂ ಹಲವಾರು ಬಾರಿ ತ್ಯಾಗ ಮಾಡಿದ್ದೇನೆ. ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿಯೂ ಉಸಿರು ಬಿಗಿ ಹಿಡಿದುಕೊಂಡು ತ್ಯಾಗ ಮಾಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಬೆಳಗಾವಿ(ಜ.21): ಡಿನ್ನರ್ ಪಾಲಿಟಿಕ್ಸ್, ಸಿಎಂ ಹುದ್ದೆ ಒಪ್ಪಂದ, ದಲಿತ ಸಿಎಂ ಕೂಗು ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆ ಜಟಾಪಟಿ ಬಗ್ಗೆ ಬಹಿರಂಗ ಹೇಳಿಕೆಯ ಪೈಪೋಟಿಗಿಳಿದಿದ್ದ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖಡಕ್ ಎಚ್ಚರಿಕೆ ನೀಡಿ ಬಾಯಿ ಬಂದ್ ಮಾಡಿಸಿದ ಬೆನ್ನಲ್ಲೇ ಸೋಮವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತ್ಯಾಗದ ಮಾತನಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ಮೊದಲಿನಿಂದಲೂ ಹಲವಾರು ಬಾರಿ ತ್ಯಾಗ ಮಾಡಿದ್ದೇನೆ. ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿಯೂ ಉಸಿರು ಬಿಗಿ ಹಿಡಿದುಕೊಂಡು ತ್ಯಾಗ ಮಾಡಿದ್ದೇನೆ ಎಂದು ಹೇಳಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಮಹಾತ್ಮ ಗಾಂಧೀಜಿ ತತ್ವಗಳಿಗೆ ನೂರರ ಸತ್ವ: ಡಿ.ಕೆ.ಶಿವಕುಮಾರ್
ನನಗೆ ಪಕ್ಷ ಮುಖ್ಯ. ವಿದ್ಯಾರ್ಥಿ ನಾಯಕನಾಗಿದ್ದ ನನ್ನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿತು ಮಾಧ್ಯಮದವರು ಯಾರ ಮಾತನ್ನೂ ಕೇಳಬೇಡಿ. ನಾನು ತ್ಯಾಗ ಮಾಡಿಕೊಂಡೇ ಬರುತ್ತಿದ್ದೇನೆ. ನನಗೆ ಫಲದ ಅವಶ್ಯಕತೆಯೇ ಇಲ್ಲ. ಜನಕ್ಕೆ ಒಳ್ಳೆಯದಾಗುತ್ತಿದೆಯಲ್ಲ, ಅಷ್ಟು ಸಾಕು. ಪಕ್ಷವನ್ನು ಉಳಿಸುವುದು, ಸರ್ಕಾರವನ್ನು ಭದ್ರವಾಗಿ ಡುವುದೇ ನನ್ನ ಕರ್ತವ್ಯ. ಇದರ ಹೊರತಾಗಿ ಬೇರೆ ಯಾವುದೇ ಕರ್ತವ್ಯ ಗಳಿಲ್ಲ. ಬೇರೆ ಯಾವುದಕ್ಕೂ ನನ್ನ ಹೆಸರನ್ನು ಉಪಯೋಗಿಸಿಕೊಳ್ಳಬೇಡಿ. ನನಗೆ ಯಾವುದೇ ಹುದ್ದೆಯ ಅವಶ್ಯಕತೆಯಿಲ್ಲ ಎಂದುಡಿ.ಕೆ.ಶಿವಕುಮಾರ್ ತಿಳಿಸಿದರು.
ನಾನು ಎಲ್ಲರನ್ನೂ ಸಮನಾಗಿ ಕಾಣುತ್ತೇನೆ, ಪಕ್ಷದಲ್ಲಿ ಬಂಡಾಯವಿದೆ ಎನ್ನೋದೆಲ್ಲ ಸುಳ್ಳು:
ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿನ ಬಂಡಾಯ, ಬೇಗುದಿಯ ಆರೋಪಗಳಿಗೆ ತೆರೆ ಎಳೆದಿರುವ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ. ಕಾರ್ಯಕರ್ತರ ರಕ್ಷಣೆ ಮಾಡುವುದು ನನ್ನ ಮೊದಲ ಕರ್ತವ್ಯ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಮಾವೇಶದ ಹಿನ್ನೆಲೆಯಲ್ಲಿ ಸೋಮವಾರ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯವೇ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ನಾನು, ಪಕ್ಷ, ಹೈಕಮಾಂಡ್ ಉಂಟು. ಮಾಧ್ಯಮದವರು ಯಾರೋ ಹೇಳಿದ ಸುಳ್ಳನ್ನು ನಂಬಬೇಡಿ. ಶಿವಕುಮಾರ್ ಅವರಿವರನ್ನು ಭೇಟಿ ಮಾಡಿದರು, ಪಕ್ಷದಲ್ಲಿ ಬಂಡಾಯವಿದೆ ಎಂದೆಲ್ಲಾ ಹೇಳಬೇಡಿ ಎಂದು ಕಿಡಿಯಾದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವ ಬಂಡಾಯವೂ ಇಲ್ಲ. ಯಾರ ಜೊತೆಯೂ ನನಗೆ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ. ನಾನು ಎಲ್ಲರನ್ನು ಸಮಾನವಾಗಿ ಕಾಣುವ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ: ಡಿ.ಕೆ. ಶಿವಕುಮಾರ ಹೇಳಿದ್ದಿಷ್ಟು
ಸುಳ್ಳನ್ನು ನಂಬಬೇಡಿ:
ರಣದೀಪ್ ಸುರ್ಜೇವಾಲಾ ಅವರನ್ನೇ ಬದಲಾವಣೆ ಮಾಡಬೇಕೆಂದು ಕೆಲವು ಸಚಿವರು ರಾಹುಲ್ ಗಾಂಧಿಗೆ ದೂರು ನೀಡುತ್ತಿದ್ದಾರೆಂಬ ಬಗ್ಗೆ ಪ್ರತಿಕ್ರಿಯಿಸಿ, ಯಾರೋ ಸುಳ್ಳು ಮಾಹಿತಿ ನೀಡಿ ಮಾಧ್ಯಮಗಳ ಘನತೆ ಹಾಳು ಮಾಡುತ್ತಿದ್ದಾರೆ. ನಾನು ಭಾನುವಾರ ಹಿರಿಯ ಶಾಸಕ ಫಿರೋಜ್ ಸೇಠ್ ಮನೆಗೆ ಭೇಟಿ ನೀಡಿದ್ದೆ. ಬೆಳಗಾವಿಯಲ್ಲಿ ಸಮಾವೇಶದ ರಾಜ್ಯ ಸಮಿತಿ ಸದಸ್ಯರನ್ನಾಗಿ ಅವರನ್ನು ನೇಮಕ ಮಾಡಲಾಗಿದೆ. ಸಂಘಟನೆ ದೃಷ್ಟಿಯಿಂದ ಜಿಲ್ಲಾ ಅಧ್ಯಕ್ಷರ ಜತೆ ಹೋಗಿ ಭೇಟಿ ಮಾಡಿದ್ದೆ. ಆದರೆ, ಮಾಧ್ಯಮಗಳು ಏನೇನೋ ವರದಿ ಬಿತ್ತರ ಮಾಡಿದವು. ಯಾರೋ ಸ್ಟೋರಿ ಪ್ಲಾಂಟ್ ಮಾಡಿದ್ದನ್ನು ನಂಬಿ ಮಾಧ್ಯಮಗಳು ತಮ್ಮ ಘನತೆಯನ್ನು ಹಾಳು ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಡರ್ಟಿ ಪಾಲಿಟಿಕ್ಸ್ ಬಗ್ಗೆ ಕೇಳಿದ್ರೆ ಹೇಗೆ?:
ಕಾಂಗ್ರೆಸ್‌ನ 60 ಜನ ಶಾಸಕರು ಬಿಜೆಪಿಗೆ ಬರುತ್ತಾರೆ ಎನ್ನುವ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹ ನೀಚ (ಡರ್ಟಿ ಪೊಲಿಟಿಕ್ಸ್) ರಾಜಕಾರಣದ ಬಗ್ಗೆ ನೀವು ಪ್ರಶ್ನೆ ಮಾಡಿದರೆ ಹೇಗೆ? ಇಂತಹ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದರು. 2023ರ ಚುನಾವಣೆಯಲ್ಲಿ ಫಿರೋಜ್ ಸೇಟ್‌ಗೆ ಟಿಕೆಟ್ ಸಿಗದಿದ್ದಕ್ಕೆ ಸತೀಶ್ ಜಾರಕಿಹೊಳಿ ಕಾರಣವೇ ಎಂಬ ಪ್ರಶ್ನೆಗೆ, ನನಗೆ ಈ ವಿಚಾರದ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದರು.
