ಕಾಟಾಚಾರದ ಉಸ್ತುವಾರಿ ಸಚಿವ ನಾನಲ್ಲ: ಭೈರತಿ ಸುರೇಶ್
ಹಿಂದಿನ ಸರ್ಕಾರದಲ್ಲಿನ ಮಂತ್ರಿಯಾಗಿದ್ದವರ ರೀತಿ ಕಾಟಾಚಾರಕ್ಕೆ ಭೇಟಿ ನೀಡುವ ಮಂತ್ರಿ ನಾನಲ್ಲ. ಉಸ್ತುವಾರಿ ಸಚಿವನಾಗಿ ಒಂದುವರೆ ತಿಂಗಳಲ್ಲಿ ಮೂರು ಸಲ್ಲ ಜಿಲ್ಲೆಗೆ ಭೇಟಿ ನೀಡಿದ್ದು, ನಿಮ್ಮ ಕಷ್ಟಸುಖಗಳಿಗೆ ಪಾಲುದಾರನಾಗುವ ವ್ಯಕ್ತಿತ್ವ ನನ್ನದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಹೇಳಿದರು.
ಮಾಲೂರು (ಜು.16): ಹಿಂದಿನ ಸರ್ಕಾರದಲ್ಲಿನ ಮಂತ್ರಿಯಾಗಿದ್ದವರ ರೀತಿ ಕಾಟಾಚಾರಕ್ಕೆ ಭೇಟಿ ನೀಡುವ ಮಂತ್ರಿ ನಾನಲ್ಲ. ಉಸ್ತುವಾರಿ ಸಚಿವನಾಗಿ ಒಂದುವರೆ ತಿಂಗಳಲ್ಲಿ ಮೂರು ಸಲ್ಲ ಜಿಲ್ಲೆಗೆ ಭೇಟಿ ನೀಡಿದ್ದು, ನಿಮ್ಮ ಕಷ್ಟ ಸುಖಗಳಿಗೆ ಪಾಲುದಾರನಾಗುವ ವ್ಯಕ್ತಿತ್ವ ನನ್ನದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಹೇಳಿದರು. ಅವರು ಪಟ್ಟಣದಲ್ಲಿ ನಡೆದ ಅನ್ನ ಭಾಗ್ಯ ಪಲಾನುಭವಿಗಳ ಸಮಾವೇಶದಲ್ಲಿ ಮಾತನಾಡುತ್ತ, ನಾನು ಯಾರನ್ನು ತಿರಸ್ಕಾರ ಮಾಡಲು ಬಂದಿಲ್ಲ. ಅಥವಾ ಒಂದು ಪಕ್ಷದ ರಾಜಕಾರಣ ಮಾಡಲು ಬಂದಿಲ್ಲ.
ಸರ್ಕಾರದ ಪ್ರತಿನಿಧಿಯಾಗಿ ಕರ್ತವ್ಯ ಏನಿದೆ ಎಂಬುದನ್ನು ಜನರಿಗೆ ತಿಳಿಸಲು ಬಂದಿದ್ದೇನೆ ಎಂದರು. ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಉಡಾಫೆಯಿಂದ ಕೆಲಸ ಮಾಡುವವರು ಬೇರೆ ಜಿಲ್ಲೆಗಳನ್ನು ನೋಡಿಕೊಳ್ಳಬೇಕು. ಈ ಬಗ್ಗೆ ಈಗಾಗಲೇ ಕೆ.ಡಿ.ಪಿ.ಸಭೆಯಲ್ಲಿ ಹೇಳಿದ್ದೇನೆ. ಜಿಲ್ಲೆಯಲ್ಲಿ ಆರು ಶಾಸಕರಿದ್ದು, ಐದು ಜನ ಎಂ.ಎಲ್.ಸ್ಸಿಗಳಿದ್ದಾರೆ. ಎಲ್ಲರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.
ವಚನದ ಕಟ್ಟುಗಳಿದ್ದ ಪಲ್ಲಕ್ಕಿ ಹೊತ್ತ ಮಹಿಳೆಯರು: ಮೆರವಣಿಗೆಗೆ ಶ್ರೀಗಳಿಂದ ಚಾಲನೆ
ನಮ್ಮ ಸರ್ಕಾರವು ನೀಡಿರುವ ಐದು ಗ್ಯಾರಂಟಿ ಖಂಡಿತವಾಗಿ ಪೂರೈಸುತ್ತೀವೆ. ಆದರೆ ವಿರೋಧ ಪಕ್ಷದವರು ಈ ಗ್ಯಾರಂಟಿಗಳ ಜಾರಿಗೆ ಹಣ ಎಲ್ಲಿಂದ ತರುತ್ತೀರಿ ಎನ್ನುತ್ತಿದ್ದಾರೆ. ಕೊಟ್ಟಿರುವ ಐದು ಗ್ಯಾರಂಟಿ ಈಡೇರಿಸಲು ವರ್ಷಕ್ಕೆ 60 ಸಾವಿರ ಕೋಟಿ ಹಣ ಬೇಕು. ನಾವು ಹಣ ಪ್ರಿಂಟ್ ಮಾಡೋಲ್ಲ. ದುಡ್ಡು ಆಕಾಶದಿಂದ ಉದರೋದಿಲ್ಲ. ಜನರು ಕಟ್ಟುವ ತೆರಿಗೆ ಹಣವನ್ನೇ ಜನರಿಗೆ ವಾಪಾಸ್ಸು ಕೊಡುತ್ತಿದ್ದೇವೆ. ಯಾರು ಅಧಿಕಾರದಲ್ಲಿರುತ್ತಾರೂ ಅವರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಇಂತಹ ಕಾರ‍್ಯಕ್ರಮ ನೀಡಲು ಸಾಧ್ಯವಾಗುತ್ತದೆ ಎಂದರು.
ಜನಪ್ರತಿನಿಧಿಗಳಾಗುವುದು ಅಧಿಕಾರವನ್ನು ಮಜಾ ಮಾಡಲು ಅಲ್ಲ. ಅವರಿಗೆ ಮಾತೃ ಹೃದಯ ಇರಬೇಕು. ಕಾಂಗ್ರೆಸ್ ಪಕ್ಷದ ಆಶ್ವಾಸನೆ ನಂಬಿ ರಾಜ್ಯದ ಜನತೆ 136 ಸೀಟುಗಳನ್ನು ಕೊಟ್ಟಿದ್ದಾರೆ. ಅವರಿಗೆ ತೊಂದರೆ ಯಾಗದಂತೆ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸಬೇಕು ಎಂದರು. ಸಂಸದ ಎಸ್.ಮುನಿಸ್ವಾಮಿ ಅವರು ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದವರೇ. ಕಾಡಗೋಡಿಯಲ್ಲಿ ಬಿಬಿಎಂಪಿ ಸದಸ್ಯರಾಗಿದ್ದವರು. ನಂತರ ನೀವುಗಳು ಅವರನ್ನು ಕೋಲಾರಕ್ಕೆ ಕರೆತಂದು ಸಂಸದರನ್ನಾಗಿ ಮಾಡಿದ್ದೀರಿ. ಅವರ ಸಲಹೆಗಳನ್ನು ತೆಗೆದುಕೊಂಡು ಜಿಲ್ಲೆಯನ್ನು ಹಸಿವು ಮುಕ್ತ ಜಿಲ್ಲೆ,ಅಭಿವೃದ್ಧಿ ಜಿಲ್ಲೆಯನ್ನಾಗಿ ಮಾಡೋಣ ಎಂದರು.
ಜನವರಿಗೆ ಕಾಂಗ್ರೆಸ್ ಸರ್ಕಾರ ಬೀಳುವುದು ಖಚಿತ: ಸಂಸದ ಮುನಿಸ್ವಾಮಿ ಭವಿಷ್ಯ
ಕಾರ‍್ಯಕ್ರಮದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್: ಇಲ್ಲಿನ ಸರ್ಕಾರಿ ಬಾಲಕಿಯರ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಅನ್ನಭಾಗ್ಯ ಯೋಜನೆ ಕಾರ‍್ಯಕ್ರಮದಲ್ಲಿ ಫ್ಲೆಕ್ಸ್ ನಲ್ಲಿ ದೋಷಗಳಿಗಾಗಿ ಮೂರು ಬಾರಿ ಫ್ಲೆಕ್ಸ್ ಗಳನ್ನು ಬದಲಾಯಿಸಲಾಯಿತು. ಮೊದಲು ಇಲಾಖೆಯಿಂದ ಹಾಕಲಾಗಿದ್ದ ಫ್ಲೆಕ್ಸ್ ಗೆ ತಕರಾರು ಬಂದ ಹಿನ್ನೆಲೆಯಲ್ಲಿ ತೆಗೆದುಹಾಕಲಾಗಿತ್ತು.ಆದರೆ ನಂತರ ಆಳವಡಿಸಿದ ಫ್ಲೆಕ್ಸ್ ನಲ್ಲಿ ಶಾಸಕ ನಂಜೇಗೌಡರ ಫೋಟೋ ಚಿಕ್ಕದಾಗಿದೆ ಎಂದು ಮತ್ತೇ ಬದಲಾಯಿಸಲಾಯಿತು. ನಂತರ ಫ್ಲೇಕ್ಸ್ ನಲ್ಲಿ ಸಂಸದ ಮುನಿಸ್ವಾಮಿ ಫೋಟೋ ಇಲ್ಲ ಎಂದು ಬದಲಾಯಿಸಲಾಯಿತು.