ಬಿಜೆಪಿಯಲ್ಲಿ ನಾನೂ ಮುಖ್ಯಮಂತ್ರಿ ಅಭ್ಯರ್ಥಿ. ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದೇನೆ. ನಾನು ಬೇರೆಯವರಂತೆ ಲೂಟಿ ಮಾಡಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ದಾವಣಗೆರೆ (ಫೆ.10): ಬಿಜೆಪಿಯಲ್ಲಿ ನಾನೂ ಮುಖ್ಯಮಂತ್ರಿ ಅಭ್ಯರ್ಥಿ. ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದೇನೆ. ನಾನು ಬೇರೆಯವರಂತೆ ಲೂಟಿ ಮಾಡಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಭ್ರಷ್ಟಾಚಾರದ ವಿರುದ್ಧ ಹಾಗೂ ಕುಟುಂಬ ರಾಜಕಾರಣ ವಿರುದ್ಧದ ಹೋರಾಟ ಎಂದರು.
ದಾವಣಗೆರೆ, ತುಮಕೂರು, ಬೀದರ್‌ನಲ್ಲಿ ಒಳಒಪ್ಪಂದ ಮಾಡಿಕೊಂಡವರಿಗೆ ತಕ್ಕ ಶಾಸ್ತಿಯಾಗಬೇಕು. ಹಾದಿಬೀದಿಯಲ್ಲಿ ಹಂದಿಗಳು ಹೇಳುತ್ತವೆಂದರೆ ಅಂತಹವರಿಗೆ ನಾನೇಕೆ ಉತ್ತರ ನೀಡಲಿ? 

ದಾವಣಗೆರೆಯಲ್ಲಿ ಎರಡು ಹಂದಿಗಳಿದ್ದು, ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಿ ವಿಜಯೇಂದ್ರ ಮನೆ ಮುಂದೆ ನೀವು ನಿಲ್ಲಿ. ಅಲ್ಲಿ ವಿಜಯೇಂದ್ರ ಗುಣಗಾನ ಮಾಡಿ ಎಂದು ಮಾಧ್ಯಮಗಳ ಮೇಲೆ ಯತ್ನಾಳ್‌ ಆಕ್ರೋಶಗೊಂಡರು. ಕೇಂದ್ರ ಸಚಿವ ವಿ.ಸೋಮಣ್ಣ ಗೃಹಪ್ರವೇಶವಿದ್ದು, ನಾವೆಲ್ಲಾ ದೆಹಲಿಗೆ ಹೋಗುತ್ತಿದ್ದೇವೆ. ದೆಹಲಿಯಲ್ಲಿ ರಾಷ್ಟ್ರೀಯ ನಾಯಕರು ಸಿಗುತ್ತಾರೋ, ಇಲ್ಲವೋ ಎಂಬುದನ್ನು ನಾನು ನಿಮಗೆ (ಮಾಧ್ಯಮ) ಏಕೆ ಹೇಳಲಿ? ನಾವು ದೆಹಲಿಗೆ ಹೋಗುತ್ತೇವೆ. ನಮ್ಮ ಪ್ರಯತ್ನ ಮಾಡುತ್ತೇವೆ. ಎಷ್ಟು ಅಪಮಾನವಾಗಿದೆಯೆಂದರೆ ಬೇರೆಯವರಾಗಿದ್ದರೆ ಉರುಲು ಹಾಕಿಕೊಳ್ಳುತ್ತಿದ್ದರು, ನಾವು ಹಾಕಿಕೊಂಡಿಲ್ಲ ಅಷ್ಟೇ ಎಂದು ಯತ್ನಾಳ್‌ ಕಿಡಿಕಾರಿದರು.

ನನ್ನ, ಜನಾರ್ದನ ರೆಡ್ಡಿ ಸಂಬಂಧ ಅಂತ್ಯ, ಅದು ಎಂದೂ ಸರಿಹೋಗಲ್ಲ: ಶ್ರೀರಾಮುಲು

ವಿಜಯೇಂದ್ರ ಪರವಾಗಿಯೇ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ನಮ್ಮ ವಿರುದ್ಧದ ವರದಿಗಳು ಬರುತ್ತಿವೆ. ದೆಹಲಿಯಲ್ಲಿ ಯತ್ನಾಳ್‌ಗೆ ಅಪಮಾನ ಖಚಿತ, ರಾಷ್ಟ್ರೀಯ ನಾಯಕರು ಭೇಟಿಯಾಗಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಮಾಡುತ್ತಾರೆ. ನಾವು ದೆಹಲಿಗೆ ಹೋಗುವುದು ನಿಶ್ಚಿತ. ದಾವಣಗೆರೆ ಜಿಎಂಐಟಿ ಗೆಸ್ಟ್‌ ಹೌಸ್‌ನಲ್ಲಿ ಯಾವುದೇ ಸಭೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಹೀನಾಯವಾಗಿ ಸೋಲಲು ಆಪ್ ಪಕ್ಷ ಮಾಡಿದ ಭ್ರಷ್ಚಾಚಾರವೇ ಕಾರಣ. ಅದಕ್ಕಾಗಿ ನಮ್ಮ ರಾಜ್ಯದಲ್ಲೂ ಭ್ರಷ್ಟಾಚಾರರಹಿತ ರಾಜ್ಯವನ್ನಾಗಿಸಲು ನಾವು ನಿರ್ಧಾರ ಮಾಡಿದ್ದೇವೆ ಎಂದು ಶಾಸಕ ಯತ್ನಾಳ್‌ ದೆಹಲಿ ಫಲಿತಾಂಶಕ್ಕೆ ಪ್ರತಿಕ್ರಿಯಿಸಿದರು.

ವಿಪಕ್ಷ ನಾಯಕ ಆರ್.ಅಶೋಕ ಬಗ್ಗೆ ಯತ್ನಾಳ್ ಮೆಚ್ಚುಗೆ: ವಿಪಕ್ಷ ನಾಯಕನಾಗಿ ಆರ್‌.ಅಶೋಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಜಾತಾಂತ್ರಿಕವಾಗಿ ಎಲ್ಲರ ವಿಶ್ವಾಸ ಪಡೆದು, ಆರ್.ಅಶೋಕ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿ, ಬೆಂಗಳೂರು ಅಧಿವೇಶನ, ರಾಜ್ಯದ ಸೂಕ್ಷ್ಮ ವಿಚಾರಗಳ ವೇಳೆ ನಮ್ಮೆಲ್ಲರನ್ನೂ ಅಶೋಕ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದರು. ಕೆಲವು ಶಾಸಕರಿಗೆ ಒಂದಿಷ್ಟು ಅಸಮಾಧಾನ ಇರಬಹುದು. ಆದರೆ, ನಮಗಂತೂ ಆರ್.ಅಶೋಕ ಬಗ್ಗೆ ಯಾವುದೇ ಅಸಮಾಧಾನವೂ ಇಲ್ಲ. 

ರಾಜ್ಯಗಳು ಹೆಚ್ಚಿನ ತೆರಿಗೆ ಪಾಲು ಕೇಳೋದು ಸಣ್ಣತನ: ಕೇಂದ್ರ ಸಚಿವ ಪಿಯೂಷ್‌ ಗೋಯಲ್‌

ಈ ಹಿಂದೆ ಅಧಿಕಾರ ಇದ್ದಾಗ ಬೆಡ್ ಶೀಟ್‌ ಹೊತ್ತುಕೊಂಡು ಹೋದವರು ಬದಲಾಗಬೇಕೆಂಬುದು ನಮ್ಮ ಹೋರಾಟ. ಕುಟುಂಬ ರಾಜಾಕರಣದ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು. ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ.ಸಿದ್ದೇಶ್ವರ ಕುಟುಂಬದ ಒಡೆತನದ ದಾವಣಗೆರೆ ಜಿಎಂಐಟಿ ಅತಿಥಿ ಗೃಹದಲ್ಲೇ ಶನಿವಾರ ರಾತ್ರಿಯೇ ಬಂದು ವಾಸ್ತವ್ಯ ಮಾಡಿದ್ದ ಬಸವನಗೌಡ ಪಾಟೀಲ್ ಯತ್ನಾಳ, ರಮೇಶ ಜಾರಕಿಹೊಳಿ ಸೇರಿದಂತೆ ರೆಬಲ್ ನಾಯಕರು ಕಳೆದ ರಾತ್ರಿ, ಭಾನುವಾರ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಹರಿಹರ ತಾಲೂಕಿನಲ್ಲಿ ವಾಲ್ಮೀಕಿ ಜಾತ್ರೆ ಕಾರ್ಯಕ್ರಮ ಮುಗಿಸಿಕೊಂಡು, ದೆಹಲಿಗೆ ತೆರಳುವ ಸಾಧ್ಯತೆ ಇದೆ. ಆದರೆ, ಬಸವನಗೌಡ ಪಾಟೀಲ್ ಯತ್ನಾಳ್ ಮಾತ್ರ, ದಾವಗೆರೆಯಲ್ಲಿ ಯಾವುದೇ ಸಭೆ ಇಲ್ಲ ಎಂದು ಹೇಳಿದ್ದಾರೆ.