ನನಗೂ 50 ಶಾಸಕರ ಬೆಂಬಲವಿದೆ: ಪರಮೇಶ್ವರ್
ನಾನು ಪಕ್ಷದ ವರಿಷ್ಠರನ್ನು ನಂಬಿದ್ದೇನೆ. 50 ಶಾಸಕರ ಗುಂಪು ಕಟ್ಟಿಕೊಂಡು ನಾನೂ ದೆಹಲಿಗೆ ಹೋಗಬಹುದು. ಆದರೆ ಹಾಗೆ ಮಾಡುವುದಿಲ್ಲ. ನನಗೆ ಶಿಸ್ತು ಇದೆ. ಲಾಬಿ ಮಾಡಬಾರದು ಎಂದು ಸುಮ್ಮನಿದ್ದೇನೆ. ಸುಮ್ಮನಿದ್ದೇನೆ ಎಂದರೆ ಅಸಮರ್ಥನಲ್ಲ. ನಾನು ಸಮರ್ಥನಾಗಿದ್ದೇನೆ: ಡಾ.ಜಿ.ಪರಮೇಶ್ವರ್
ಬೆಂಗಳೂರು(ಮೇ.17): ‘ಸುಮ್ಮನೇ ಇದ್ದೇನೆ ಎಂದರೆ ನಾನು ಅಸಮರ್ಥ ಎಂದು ಅರ್ಥವಲ್ಲ. ನಾನೂ 50 ಶಾಸಕರ ಗುಂಪು ಕಟ್ಟಿಕೊಂಡು ದೆಹಲಿಗೆ ಹೋಗಬಹುದು. ಶಿಸ್ತು ಮುಖ್ಯ. ಲಾಬಿ ಮಾಡಬಾರದು. ಹೈಕಮಾಂಡ್‌ಗೆ ನನ್ನ ಕೆಲಸದ ಬಗ್ಗೆ ಎಲ್ಲವೂ ತಿಳಿದಿದೆ. ಜವಾಬ್ದಾರಿ ನೀಡಿದರೆ ಒಪ್ಪಿಕೊಳ್ಳುತ್ತೇನೆ’ ಎಂದು ಚುನಾವಣಾ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
‘2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನಿಮಗೆ ಅನ್ಯಾಯವಾಗಿತ್ತು. ಈ ಬಾರಿ ಹೈಕಮಾಂಡ್ ಅದನ್ನು ಸರಿಪಡಿಸಲಿದೆಯೇ?’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ‘ನಾನು ಪಕ್ಷದ ವರಿಷ್ಠರನ್ನು ನಂಬಿದ್ದೇನೆ. 50 ಶಾಸಕರ ಗುಂಪು ಕಟ್ಟಿಕೊಂಡು ನಾನೂ ದೆಹಲಿಗೆ ಹೋಗಬಹುದು. ಆದರೆ ಹಾಗೆ ಮಾಡುವುದಿಲ್ಲ. ನನಗೆ ಶಿಸ್ತು ಇದೆ. ಲಾಬಿ ಮಾಡಬಾರದು ಎಂದು ಸುಮ್ಮನಿದ್ದೇನೆ. ಸುಮ್ಮನಿದ್ದೇನೆ ಎಂದರೆ ಅಸಮರ್ಥನಲ್ಲ. ನಾನು ಸಮರ್ಥನಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.
ಗೆಲುವಿನ ಬೆನ್ನಲ್ಲೇ ಕಾಂಗ್ರೆಸ್ ಯು ಟರ್ನ್, ಉಚಿತ ಗ್ಯಾರೆಂಟಿಗೆ ಕಂಡೀಷನ್ ಅಪ್ಲೈ!
‘ಹೈಕಮಾಂಡ್‌ಗೆ ನನ್ನ ಕೆಲಸದ ಬಗ್ಗೆ ಎಲ್ಲ ತಿಳಿದಿದೆ. ಜವಾಬ್ದಾರಿ ನೀಡಿದರೆ ಒಪ್ಪಿಕೊಳ್ಳುತ್ತೇನೆ. ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ. ಈಗಾಗಲೇ ಶಾಸಕರ ಅಭಿಪ್ರಾಯ ಪಡೆಯಲಾಗಿದೆ. ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
‘ಸಿದ್ದರಾಮಯ್ಯ ಅವರ ಜೊತೆ ಶಾಸಕರೂ ದೆಹಲಿಗೆ ತೆರಳಿರುವುದಕ್ಕೆ ಶಕ್ತಿ ಪ್ರದರ್ಶನ ಎನ್ನಬಾರದು. ಕೆಲವು ಶಾಸಕರು ಅವರ ನಾಯಕರ ಜೊತೆ ತೆರಳಿದ್ದಾರೆ. ನಾವೂ ಶಾಸಕರನ್ನು ಕರೆದುಕೊಂಡು ಹೋಗಬಹುದಿತ್ತು. ಆದರೆ ತೆರಳಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಇದು ಪದ್ಧತಿಯಾಗಿದೆ. ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಚುನಾವಣೆಯನ್ನು ನಾವು ಸಾಮೂಹಿಕ ನಾಯಕತ್ವದಡಿ ಎದುರಿಸಿದ್ದೆವು’ ಎಂದು ವಿವರಿಸಿದರು.