ನಾನೂ ರೈತನ ಮಗ, ಕಷ್ಟ ಏನೆಂದು ನನಗೂ ಗೊತ್ತಿದೆ: ಸಿದ್ದರಾಮಯ್ಯ
ನಾನೂ ರೈತನ ಮಗ. ರೈತರ ಕಷ್ಟ ಏನೆಂದು ನನಗೂ ಗೊತ್ತಿದೆ. ರೈತರಿಗೆ ಬರ ಬಂದರೆ ಏನಾಗುತ್ತೆ ಅಂತಾನೂ ಗೊತ್ತಿದೆ. ರೈತರು ಹೇಗೆ ಸಾಲಗಾರರಾಗುತ್ತಾರೆ ಎಂಬ ಬಗ್ಗೆ ಅರಿವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಡ್ಯ (ನ.01): ಪ್ರಸ್ತುತ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಸರ್ವಪ್ರಯತ್ನಗಳನ್ನೂ ಮಾಡುತ್ತೇನೆ. ನಮ್ಮ ರೈತರ ಹಿತ ಬಲಿ ಕೊಟ್ಟು ಬೇರೆ ರಾಜ್ಯದ ರೈತರ ಹಿತ ಕಾಪಾಡುವ ಬಗ್ಗೆ ನನ್ನಿಂದ ಯೋಚನೆ ಮಾಡಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಹೋರಾಟಗಾರರಿಗೆ ಭರವಸೆ ನೀಡಿದರು. ನಗರದ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದ ಬಳಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ನಿರಂತರ ಧರಣಿ ಸ್ಥಳಕ್ಕೆ ಮಂಗಳವಾರ ಹಸಿರುಶಾಲು ಹಾಕಿಕೊಂಡು ಬಂದ ಸಿಎಂ, ಧರಣಿನಿರತರ ಅಹವಾಲು ಆಲಿಸಿದರು. ಈಗಿರುವ ಬೆಳೆ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಬೇಕಿದೆ.
ಜನರಿಗೆ ಕುಡಿಯುವ ನೀರೂ ಕೊಡಬೇಕಿದೆ. ಪ್ರಾಧಿಕಾರದ ಆದೇಶದಂತೆ ಉಳಿದ ನೀರನ್ನು ತಮಿಳುನಾಡಿಗೂ ಕೊಡಬೇಕು. ಜೊತೆಗೆ, ನಮ್ಮ ಬೆಳೆಗೂ ನೀರು ಕೊಡಬೇಕಿದೆ. ನಮ್ಮ ಅರ್ಜಿಯನ್ನು ಪ್ರಾಧಿಕಾರ ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್ ಕೂಡ ಪ್ರಾಧಿಕಾರದ ಆದೇಶವನ್ನೇ ಎತ್ತಿಹಿಡಿದಿದೆ. ಇಂತಹ ಪರಿಸ್ಥಿತಿಯಲ್ಲಿ ಈಗಿರುವ ಮುಂಗಾರು ಬೆಳೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಕಾವೇರಿ ನೀರು ಹಂಚಿಕೆ ಸೂಕ್ಷ್ಮ ವಿಚಾರ. ಎಲ್ಲವನ್ನೂ ನಿಂತ ಸ್ಥಳದಲ್ಲಿಯೇ ಹೇಳಲು ಸಾಧ್ಯವಿಲ್ಲ. ನೀರನ್ನು ಎಷ್ಟು ಬಿಟ್ಟರೆ ಏನಾಗುತ್ತೆ ಎಂದು ಹೇಳುವುದಕ್ಕೂ ಆಗುವುದಿಲ್ಲ.
ರಾಜ್ಯ ಸರ್ಕಾರ ಪತನ: ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ತಿರುಗೇಟು
ವರ್ಷಕ್ಕೆ ಕುಡಿಯಲು ನಮಗೆ 35 ಟಿಎಂಸಿ ನೀರು ಬೇಕು. ಮಳೆ ಬಾರದಿದ್ದರೆ ಇನ್ನೊಂದು ಬೆಳೆ ಬೆಳೆಯಲು ಸಾಧ್ಯವಿಲ್ಲ. ಹಾಗಾಗಿ, ಉತ್ತಮ ಮಳೆ ಬರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳೋಣ ಎಂದರು. ನಾನೂ ರೈತನ ಮಗ. ರೈತರ ಕಷ್ಟ ಏನೆಂದು ನನಗೂ ಗೊತ್ತಿದೆ. ರೈತರಿಗೆ ಬರ ಬಂದರೆ ಏನಾಗುತ್ತೆ ಅಂತಾನೂ ಗೊತ್ತಿದೆ. ರೈತರು ಹೇಗೆ ಸಾಲಗಾರರಾಗುತ್ತಾರೆ ಎಂಬ ಬಗ್ಗೆ ಅರಿವಿದೆ. ರೈತರ ಹಿತ ಕಾಪಾಡುವ ವಿಚಾರದಲ್ಲಿ ನಾನು ಹಿಂದೆ ಬೀಳುವುದಿಲ್ಲ. ಅಧಿಕಾರಕ್ಕೋಸ್ಕರ ರೈತರನ್ನು ಬಲಿಕೊಡುವುದೂ ಇಲ್ಲ. ಅಧಿಕಾರಕ್ಕೆ ನಾನು ಅಂಟಿಕೊಂಡಿಯೂ ಕುಳಿತಿಲ್ಲ ಎಂದು ಸ್ಪಷ್ಟಪಡಿಸಿದರು.
ಇದು ಕರ್ನಾಟಕದ ಪಾಲಿಗೆ ಸಂಕಷ್ಟದ ವರ್ಷವಾಗಿದೆ. ನೀರು ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್, ಪ್ರಾಧಿಕಾರದ ಮುಂದೆಯೂ ನಾವು ವಾದ ಮಾಡಿದ್ದೇವೆ. ಇದರ ನಡುವೆ ಸೋಮವಾರವೂ 2,600 ಕ್ಯುಸೆಕ್ ನೀರು ಬಿಡುವಂತೆ ಆದೇಶ ಮಾಡಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ಕರೆಯುತ್ತಿದ್ದೇವೆ. ಅಲ್ಲಿ ಕಾವೇರಿ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ತುರ್ತು ಜಂಟಿ ಅಧಿವೇಶನ ಕರೆಯಲು ರೈತರ ಆಗ್ರಹ: ಈ ವೇಳೆ ಸಿದ್ದರಾಮಯ್ಯ ಅವರಿಗೆ ಪ್ರತಿಭಟನಾಕಾರರ ಪರವಾಗಿ ಮನವಿಪತ್ರ ನೀಡಿದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ತುರ್ತಾಗಿ ಜಂಟಿ ಅಧಿವೇಶನ ಕರೆದು, ಕಾವೇರಿ ಸಂಕಷ್ಟದ ಕುರಿತು ಚರ್ಚೆ ನಡೆಸಬೇಕು. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು. ಸುಪ್ರೀಂಗೆ ಸಲ್ಲಿಸಿರುವ ಮೇಲ್ಮನವಿಯನ್ನು ಸಾರ್ವಜನಿಕರ ಮುಂದಿಡಬೇಕು. ಕಾವೇರಿ ನಿಯಂತ್ರಣ ಮಂಡಳಿ, ಪ್ರಾಧಿಕಾರದ ಮುಂದೆ ಸಂಕಷ್ಟದ ಪರಿಸ್ಥಿತಿ ತಿಳಿಸಿ, ಸಮರ್ಥವಾದ ವಾದ ಮಂಡಿಸಬೇಕು. ರೈತರ ಪಂಪ್ ಸೆಟ್ ಗಳಿಗೆ ಹಗಲಲ್ಲಿ ನಿರಂತರ 10 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಬರ ಪ್ರವಾಸದ ಬದಲು ಮೋದಿ ಕಾಲಿಗೆ ಬೀಳಿ: ಬಿಜೆಪಿಗರಿಗೆ ಸಿದ್ದು ಟಾಂಗ್
ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ: ಇದಕ್ಕೂ ಮೊದಲು, ಜಿಲ್ಲೆಯ ಗಡಿಭಾಗ ನಿಡಘಟ್ಟ ಗ್ರಾಮದಲ್ಲಿ ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ ಮುಖ್ಯಮಂತ್ರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಈ ವೇಳೆ, ಸಿಎಂಗೆ ಮಾಲಾರ್ಪಣೆ ಮಾಡಲು ನೂಕು-ನುಗ್ಗಲು ಉಂಟಾಗಿ, ಕಾಂಗ್ರೆಸ್ ಇಂಟರ್ ನ್ಯಾಷನಲ್ ಟ್ರೇಡ್ ಯೂನಿಯನ್ ತಾಲೂಕು ಘಟಕದ ಅಧ್ಯಕ್ಷೆ ಬಿ.ಆರ್.ಮಂಜುಳಾ ಬಿದ್ದು ಗಾಯಗೊಂಡರು. ಬಳಿಕ, ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ ಅವರು ಮುಖ್ಯಮಂತ್ರಿಗೆ ಮದ್ದೂರಿನ ಪ್ರಸಿದ್ಧ ತಿನಿಸು ಮದ್ದೂರು ವಡೆ ನೀಡಿದರು.