ರಾಜ್ಯ ಸರ್ಕಾರ ಮಹಾರಾಷ್ಟ್ರ ರೀತಿಯಲ್ಲಿ ತಾನೇ ಪತನವಾಗಲಿದೆ. ಸದ್ಯದಲ್ಲೇ ಡಿ.ಕೆ.ಶಿವಕುಮಾರ್‌ ಮಾಜಿ ಡಿಸಿಎಂ ಆಗಲಿದ್ದಾರೆ ಎಂಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕಾಂಗ್ರೆಸ್‌ ಪಾಳಯ ಸ್ಪಷ್ಟ ತಿರುಗೇಟು ನೀಡಿದೆ.

ಬೆಂಗಳೂರು (ನ.01): ರಾಜ್ಯ ಸರ್ಕಾರ ಮಹಾರಾಷ್ಟ್ರ ರೀತಿಯಲ್ಲಿ ತಾನೇ ಪತನವಾಗಲಿದೆ. ಸದ್ಯದಲ್ಲೇ ಡಿ.ಕೆ.ಶಿವಕುಮಾರ್‌ ಮಾಜಿ ಡಿಸಿಎಂ ಆಗಲಿದ್ದಾರೆ ಎಂಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕಾಂಗ್ರೆಸ್‌ ಪಾಳಯ ಸ್ಪಷ್ಟ ತಿರುಗೇಟು ನೀಡಿದೆ. ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್‌ ಅಹಮದ್‌, ಎಸ್‌.ಎಸ್‌.ಮಲ್ಲಿಕಾರ್ಜುನ, ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ರಾಜು ಕಾಗೆ ಹಾಗೂ ಶಿವಗಂಗಾ ಬಸವರಾಜ್ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ.

ದಾವಣಗೆರೆಯಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವದ್ವಯರಾದ ಜಮೀರ್‌ ಅಹಮದ್‌ ಹಾಗೂ ಎಸ್‌.ಎಸ್‌.ಮಲ್ಲಿಕಾರ್ಜುನ ಜಾರಕಿಹೊಳಿ ಹೇಳಿಕೆ ಯನ್ನು ತಳ್ಳಿಹಾಕಿದ್ದಾರೆ. ಆಪರೇಷನ್ ಕಮಲ ಮಾಡುವುದು ಅಸಾಧ್ಯ, ಅದರೂ ಸರ್ಕಾರವನ್ನು ಬೀಳಿಸುವ ಹಗಲುಗನಸನ್ನು ರಮೇಶ್‌ ಕಾಣುತ್ತಿದ್ದಾರೆ ಏಂದು ವ್ಯಂಗ್ಯ ವಾಡಿದರೆ, ಸರ್ಕಾರ ಬೀಳಿಸುವುದು ಬಿಜೆಪಿಗೆ ತಿರುಕನ ಕನಸು ಎಂದು ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಲೇವಡಿ ಮಾಡಿದರು. 

ಕನ್ನಡದ ಕನಸು ಮುಗಿಲಗಲಕ್ಕೂ ಹಬ್ಬಿಸೋಣ: ರಾಜ್ಯೋತ್ಸವಕ್ಕೆ ಸಿದ್ದರಾಮಯ್ಯ ವಿಶೇಷ ಲೇಖನ

ವಿಜಯಪುರದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಮೊದಲು ಒಬ್ಬ ವಿಪಕ್ಷ ನಾಯಕನ್ನು ಆಯ್ಕೆಮಾಡಿಕೊಳ್ಳಲಿ, ಸೋತು ಸುಣ್ಣವಾಗಿರುವ ಬಿಜೆಪಿಗರು ಪಾಪ ಈ ಕುರಿತು ಕನಸು ಕಾಣುತ್ತಿದ್ದಾರೆ ಎಂದು ಗೇಲಿ ಮಾಡಿದರು. ಇನ್ನು, ಶಾಸಕ ಶಿವಲಿಂಗೇಗೌಡ ಅರಸೀಕೆರೆಯಲ್ಲಿ ಮಾತನಾಡಿ, ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರದಲ್ಲಿ ಇಂಥದೇ ಪಾತ್ರವಹಿಸಿ ಸಕ್ಸಸ್ ಆದೇ ಅಂಥ ಈ ಸರ್ಕಾರ ಕ್ಕೆ ಕೈ ಹಾಕಿದ್ರೆ ಅವರಿಗೆ ಭ್ರಮನಿರಸನ ಗ್ಯಾರಂಟಿ ಎಂದು ಎಚ್ಚರಿಸಿದರೆ, ಕಾಗವಾಡ ಶಾಸಕ ರಾಜು ಕಾಗೆ, ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಸರ್ಕಾರಕ್ಕೆ ಏನೂ ಮಾಡಲಾಗಲ್ಲ ಎಂದು ಗುಡುಗಿದ್ದಾರೆ.

ಡಿಕೆಶಿ ಸಿಎಂ ಆಗ್ತಾರೆ: ರಮೇಶ್‌ ಜಾರಕಿಹೊಳಿ ಡಿ.ಕೆ.ಶಿವಕುಮಾರ್‌ ಸದ್ಯದಲ್ಲೇ ಮಾಜಿ ಸಚಿವರಾಗಲಿದ್ದಾರೆ ಎಂಬ ಹೇಳಿಕೆಗೆ ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ಡಿ.ಕೆ.ಶಿ ಮಾಜಿ ಮಂತ್ರಿ ಆಗುವುದಿಲ್ಲ, ಬದಲಿಗೆ ಮುಖ್ಯಮಂತ್ರಿಯೇ ಆಗುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯೋತ್ಸವಕ್ಕೆ ಒಪ್ಪಿಗೆ ನೀಡಿ: ಹೈಕೋರ್ಟ್‌

ಸಿಎಂ ಬದಲಾವಣೆ ಇಲ್ಲ: ಇನ್ನು, ಎರಡುವರೆ ವರ್ಷದ ಬಳಿಕ ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕರು ಸದ್ಯಕ್ಕೆ ಸಿಎಂ ಸ್ಥಾನ ಸುಭದ್ರ ಎಂದು ಪ್ರತಿಪಾದಿಸಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ‘ಇದೆಲ್ಲಾ ಮಾಧ್ಯಮ ಸೃಷ್ಠಿ, ಸದ್ಯಕ್ಕೆ ಆ ಪ್ರಶ್ನೆಯೇ ಇಲ್ಲಾ’ ಎಂದರೆ, ಸಚಿವ ಜಮೀರ್‌ ಅಹಮದ್‌, ಮುಖ್ಯಮಂತ್ರಿ ಸೀಟು ಖಾಲಿ ಇಲ್ಲ. ಇನ್ನೂ ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸಿದ್ದು ಪರ ಬ್ಯಾಟ್‌ ಬೀಸಿದ್ದಾರೆ. ಅಂತೆಯೇ ಮತ್ತೊಬ್ಬ ಸಚಿವ ಎಸ್‌.ಎಸ್‌. ಮಲ್ಲಿ ಕಾರ್ಜುನ್‌, ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಹೈಕಮಾಂಡ್‌ ನಿಲುವು ಏನೇ ಆದರೂ ಅದಕ್ಕೆ ಬದ್ಧ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.