ಕೇಂದ್ರದಿಂದ ಹೈದರಾಬಾದ್ ಮುಕ್ತಿ ದಿನಾಚರಣೆ: ಅಮಿತ್ ಶಾ
ಹೈದರಾಬಾದ್ ಮುಕ್ತಿ ದಿನದಂದು ಕೇಂದ್ರ ಸರ್ಕಾರದಿಂದ ಅದ್ಧೂರಿ ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ಪ್ರಧಾನಿ ಮೋದಿ ಅವರ ಜೊತೆ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಬೀದರ್ (ಮಾ.27): ಹೈದರಾಬಾದ್ ಮುಕ್ತಿ ದಿನದಂದು ಕೇಂದ್ರ ಸರ್ಕಾರದಿಂದ ಅದ್ಧೂರಿ ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ಪ್ರಧಾನಿ ಮೋದಿ ಅವರ ಜೊತೆ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು. ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದಲ್ಲಿ ಹುತಾತ್ಮರ ಸ್ಮಾರಕ, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಹಾಗೂ ಧ್ವಜಸ್ತಂಭ ಅನಾವರಣಗೊಳಿಸಿ ಮಾತನಾಡಿ, ತೆಲಂಗಾಣ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗಾಗಿ ಮುಕ್ತಿ ದಿನ ಆಚರಿಸಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಎರಡೂವರೆ ಅಡಿ ತಿರಂಗಾ ಹಾರಿಸಿದ್ದ ನೂರಾರು ವೀರ ಸೇನಾನಿಗಳನ್ನು ಗೋರ್ಟಾ (ಬಿ) ಗ್ರಾಮದಲ್ಲಿ ಕ್ರೂರ ರಜಾಕಾರರು ಹತ್ಯೆಗೈದಿದ್ದರು. ಆದರೆ, ಇಂದು ಯಾರೂ ಮುಚ್ಚಿಡಲಾಗದಷ್ಟುದೊಡ್ಡದಾದ 103 ಅಡಿ ಎತ್ತರದ ರಾಷ್ಟ್ರಧ್ವಜ ಇಲ್ಲಿ ಹಾರಿಸಲಾಗಿದ್ದು, ಇದು ಮೈ ರೋಮಾಂಚನಗೊಳಿಸುತ್ತದೆ ಎಂದರು. ಮತ ಬ್ಯಾಂಕ್ ಆಸೆಗಾಗಿ ಹೈದರಾಬಾದ್ ಮುಕ್ತಿ ಮೋರ್ಚಾದಲ್ಲಿ ಹುತಾತ್ಮರಾದವರ ಸ್ಮರಣೆಯನ್ನೂ ಮಾಡದಂಥ ಮನೋಭಾವ ಕಾಂಗ್ರೆಸ್‌ನದ್ದು. ಅಷ್ಟೇ ಅಲ್ಲ, ಕಾಶ್ಮೀರದ ಜನತೆಗೆ ಸರ್ವ ಸ್ವಾತಂತ್ರ್ಯ ನೀಡಲೂ ಕಾಂಗ್ರೆಸ್ ಮನಸ್ಸು ಮಾಡಿರಲಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣಕ್ಕೂ ಆ ಪಕ್ಷ ಅಡ್ಡಿಯಾಗಿತ್ತು.
ಸಿ.ಟಿ.ರವಿ ವಿರುದ್ಧ ಮಾನನಷ್ಟ ಕೇಸ್ ಹಾಕುವೆ: ಡಿ.ಕೆ.ಶಿವಕುಮಾರ್
ಆದರೆ, ಬಿಜೆಪಿ ತುಷ್ಟೀಕರಣ ರಾಜನೀತಿ ಮಾಡಲ್ಲ ಎಂದು ಹೇಳಿದರು. ಹುತಾತ್ಮರ ಸ್ಮಾರಕದ ಮೂಲಕ ಅವರ ಸ್ಮರಣೆಯಲ್ಲದೆ ಹೈದರಾಬಾದ್ ಭಾಗದ ಸ್ವಾತಂತ್ರ್ಯಕ್ಕೆ ಕಾರಣವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಇಲ್ಲಿ ನಿರ್ಮಾಣವಾಗಿದ್ದು, ಅತ್ಯಂತ ಸಂತಸ ತಂದಿದೆ. ಈ ಗ್ರಾಮ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂಥ ಪ್ರವಾಸೋದ್ಯಮ ಕೇಂದ್ರವಾಗುವ ರೀತಿಯಲ್ಲಿ ನಾವೆಲ್ಲ ಭರವಸೆ ನೀಡುತ್ತೇವೆ ಎಂದು ತಿಳಿಸಿದರು.
50 ಕೋಟಿ ವೆಚ್ಚದಲ್ಲಿ ಗ್ರಾಮಾಭಿವೃದ್ಧಿ: ನೂರಾರು ವರ್ಷಗಳ ಕಾಲ ಗೋರ್ಟಾ ಗ್ರಾಮದ ವೀರಸೇನಾನಿಗಳನ್ನು ಸ್ಮರಿಸುವ ಕಾರ್ಯವಾಗಬೇಕು. ಅದಕ್ಕಾಗಿ ಬಿಜೆಪಿ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತಂದಿದ್ದೇ ಆದಲ್ಲಿ 50ಕೋಟಿ ವೆಚ್ಚದಲ್ಲಿ ಗೋರ್ಟಾ ಗ್ರಾಮದಲ್ಲಿ ರಾಷ್ಟ್ರೀಯ ಸ್ಮಾರಕ ಮತ್ತು ಧ್ವನಿ ಬೆಳಕು ವ್ಯವಸ್ಥೆ ಮಾಡಿಸಿ ಪ್ರವಾಸೋದ್ಯಮ ಕೇಂದ್ರವಾಗಿಸುತ್ತೇವೆ ಎಂದು ಭರವಸೆ ನೀಡಿದರು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದೂವರೆ ವರ್ಷದೊಳಗಾಗಿ ಈ ಯೋಜನೆಗಳನ್ನು ಕಾರ್ಯಗತಗೊಳಿಸಿ ಇಲ್ಲೇ ಹೈದರಾಬಾದ್ ಮುಕ್ತಿ ದಿನದ ಕಾರ್ಯಕ್ರಮ ಆಯೋಜಿಸುತ್ತೇವೆ. ಅದನ್ನೂ ನಾನೇ ಬಂದು ಉದ್ಘಾಟಿಸುತ್ತೇನೆ ಎಂದು ಶಾ ಹೇಳಿದರು.
ಚಿತ್ರದುರ್ಗ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ: ಸಚಿವ ಶ್ರೀರಾಮುಲು ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ
ಗೋರ್ಟಾ (ಬಿ) ಗ್ರಾಮದಲ್ಲಿ ಹೈದರಾಬಾದ್ ವಿಮೋಚನಾ ಹೋರಾಟದ ಧ್ಯೋತಕವಾಗಿ ನಿರ್ಮಾಣವಾಗಿರುವ ಹುತಾತ್ಮರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಈ ಹಿಂದೆ ಅಮಿತ್ ಶಾ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಈ ಸ್ಮಾರಕವನ್ನು ಅವರೇ ಲೋಕಾರ್ಪಣೆಗೊಳಿಸಿದ್ದಾರೆ.