‘ಅನ್ನ ಭಾಗ್ಯ’ ಯೋಜನೆಗೆ ಅಕ್ಕಿ ನೀಡದ ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ಕಾಂಗ್ರೆಸ್‌ ಪಕ್ಷ, ಸುರಿವ ಮಳೆಯನ್ನೂ ಲೆಕ್ಕಿಸದೇ ಮಂಗಳವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ. 

ಬೆಂಗಳೂರು (ಜೂ.21): ‘ಅನ್ನ ಭಾಗ್ಯ’ ಯೋಜನೆಗೆ ಅಕ್ಕಿ ನೀಡದ ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ಕಾಂಗ್ರೆಸ್‌ ಪಕ್ಷ, ಸುರಿವ ಮಳೆಯನ್ನೂ ಲೆಕ್ಕಿಸದೇ ಮಂಗಳವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ತಾಲೂಕು ಮಟ್ಟದಲ್ಲೂ ಹೋರಾಟ ನಡೆಸಿ ಹಳ್ಳಿ-ಹಳ್ಳಿಯಲ್ಲೂ ಜಾಗೃತಿ ಮೂಡಿಸಲು ನಿರ್ಧರಿಸಿದೆ. ಬೆಳಗ್ಗಿನಿಂದಲೂ ತುಂತುರು ಮಳೆ ಬರುತ್ತಿದ್ದರೂ ಅದನ್ನು ಲೆಕ್ಕಿಸದೇ ಸ್ವಾತಂತ್ರ್ಯ ಉದ್ಯಾನಕ್ಕೆ ತಂಡೋಪತಂಡವಾಗಿ ಆಗಮಿಸಿದ ಮುಖಂಡರು, ಕಾರ್ಯಕರ್ತರು, ‘ಅಕ್ಕಿ ನೀಡದೇ ಕೇಂದ್ರದ ಬಿಜೆಪಿ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ. ರಾಜ್ಯ ಬಿಜೆಪಿ ನಾಯಕರು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದು ಬಡವರ ವಿರೋಧಿಯಾಗಿದ್ದಾರೆ’ಎಂದು ವಾಗ್ದಾಳಿ ನಡೆಸಿದರು.

ಅಕ್ಕಿ ಬೇಯಿಸಿ ಪ್ರತಿಭಟನೆಗೆ ಚಾಲನೆ: ದೊಡ್ಡ ಪಾತ್ರೆಗೆ ಅಕ್ಕಿ ಸುರಿದು ಬೇಯಿಸುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿಭಟನೆಗೆ ಚಾಲನೆ ನಿಡಿದರು. ಈ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಯಕರ್ತರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಬಿಬಿಎಂಪಿ ಚುನಾವಣೆ ತಡೆಗೆ ‘ವಿಂಗಡಣೆ’ ನೆಪ: ಬಿಜೆಪಿಯ ತಂತ್ರವೇ ಮತ್ತೆ ಬಳಕೆ

ಮಳೆಯಿಂದ ಮೇಕಪ್‌ ಹಾಳು!: ಶಾಮಿಯಾನದಡಿ ಹಾಕಿದ್ದ ವೇದಿಕೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡುತ್ತಿದ್ದಾಗ ಮಳೆ ಬರುತ್ತಿತ್ತು. ‘ಪಾಪ ಮಳೆಯಲ್ಲೂ ಮಹಿಳೆಯರು ಪ್ರತಿಭಟನೆಗೆ ಆಗಮಿಸಿದ್ದಾರೆ. ಅವರ ಮೇಕಪ್‌ ಎಲ್ಲ ಹೋಯಿತು. ಸಲೀಂ ಅಹಮದ್‌ ಮೇಕಪ್‌ ಸಹ ಹೋಯಿತು. ಸಚಿವ ರಾಮಲಿಂಗಾರೆಡ್ಡಿ ಅವರು ಮೇಕಪ್‌ ಹಾಕಿಲ್ಲ’ ಎಂದು ಶಿವಕುಮಾರ್‌ ಹೇಳುತ್ತಿದ್ದಂತೆ ಕಾರ್ಯಕರ್ತರು ನಗೆಗಡಲಲ್ಲಿ ತೇಲಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಸಚಿವೆ ರಾಣಿ ಸತೀಶ್‌, ಮುಖಂಡ ಮನೋಹರ್‌ ಮತ್ತಿತರರು ಹಾಜರಿದ್ದರು.

ಉತ್ಸಾಹಕ್ಕೆ ತಣ್ಣೀರು ಎರಚಿದ ವರುಣ: ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಆಗಮಿಸಬೇಕಿತ್ತಾದರೂ ಬೆಳಗಿನಿಂದಲೇ ಆರಂಭವಾದ ತುಂತುರು ಮಳೆ ಇದಕ್ಕೆ ಅಡ್ಡಿ ಉಂಟು ಮಾಡಿತು. 11 ಗಂಟೆಯಾದರೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾತಂತ್ರ್ಯ ಉದ್ಯಾನವನಕ್ಕೆ ಕಾರ್ಯಕರ್ತರು ಆಗಮಿಸಿರಲಿಲ್ಲ. ಈ ಮಳೆ ಬಿಡುವುದಿಲ್ಲ ಎಂದು ತಿಳಿದು ಕೊನೆಗೆ ತಂಡೋಪತಂಡವಾಗಿ ಆಗಮಿಸಿದರು.

ಎಷ್ಟೇ ಕಷ್ಟ ಬಂದರೂ ಅಕ್ಕಿ ಕೊಡ್ತೀವಿ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೇಂದ್ರದ ಬಿಜೆಪಿ ಸರ್ಕಾರ ಅಕ್ಕಿ ನೀಡದೆ ರಾಜಕೀಯ ಮಾಡುತ್ತಿದೆ. ಮತ್ತೊಂದೆಡೆ ರಾಜ್ಯ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾವು ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಬೇರೆ ರಾಜ್ಯಗಳಿಂದ ಖರೀದಿಸಿಯಾದರೂ ಅಕ್ಕಿ ಕೊಟ್ಟೇ ಕೊಡುತ್ತೇವೆ. ಕೇಂದ್ರ ಸರ್ಕಾರದ ವಿರುದ್ಧ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಅನ್ನ ಭಾಗ್ಯ ಯೋಜನೆಯಲ್ಲಿ ಒಂದು ಕಾಳು ಅಕ್ಕಿ ಕಡಿಮೆ ಆದರೂ ಹೋರಾಟ ನಡೆಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಏಕೆ ಎಲ್ಲರ ಖಾತೆಗೆ .15 ಲಕ್ಷ ಹಾಕಿಸಿಲ್ಲ. ರೈತರ ಆದಾಯ ಏಕೆ ಡಬಲ್‌ ಮಾಡಿಲ್ಲ. ಯುವಕರಿಗೆ ಏಕೆ ಉದ್ಯೋಗ ನೀಡಿಲ್ಲ. ಇದಕ್ಕೆ ಮೊದಲು ಉತ್ತರ ನೀಡಲಿ ಎಂದು ಆಗ್ರಹಿಸಿದರು.

ಘನ ತ್ಯಾಜ್ಯ ಕಂಪನಿ ಹಣ ದುರ್ಬಳಕೆ: ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ

ಅಕ್ಕಿ ಕೊಡಬೇಡಿ ಎಂದಿದ್ದಾರೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಬೇಡಿ ಎಂದು ರಾಜ್ಯ ಬಿಜೆಪಿ ನಾಯಕರೇ ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರೆ. ಬಿಜೆಪಿಯವರು ಬಡವರ ವಿರೋಧಿಗಳಾಗಿದ್ದು, 10 ಕೇಜಿಯಲ್ಲಿ 1 ಗ್ರಾಂ ಕಡಿಮೆಯಾದರೂ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಬಿಜೆಪಿಯವರು ಸೋನಾ ಮಸೂರಿ ಅಕ್ಕಿ ತಿನ್ನುತ್ತಾರೆ. ಬಡವರು ತಿನ್ನುವ ಅಕ್ಕಿಯನ್ನು ಅವರು ತಿನ್ನುವುದಿಲ್ಲ. ಅಕ್ಕಿಗೆ ಬದಲು ಹಣ ನೀಡಿ ಎನ್ನುತ್ತಿದ್ದಾರೆ. ಹಣ ತಿನ್ನಲು ಆಗುತ್ತದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.