ಕಾಂಗ್ರೆಸ್ ಟಿಕೆಟ್‌ಗೆ ನಾಯಕರಲ್ಲೇ ಮುಸುಕಿನ ಗುದ್ದಾಟ..!
ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆ; ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ವಿಧಿತ
ಈಶ್ವರ ಶೆಟ್ಟರ
ಬಾಗಲಕೋಟೆ(ನ.24): ಬರಲಿರುವ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಟಿಕೆಟ್ ಪಡೆಯಲು ಅತಿಯಾದ ಉತ್ಸಾಹ ತೋರಿಸುತ್ತಿದ್ದು, ರಾಜ್ಯಮಟ್ಟದಲ್ಲಿರುವ ತಮ್ಮ ಮೆಚ್ಚಿನ ನಾಯಕರ ಕೃಪಾಕಟಾಕ್ಷದಿಂದ ಟಿಕೆಟ್ ಪಡೆಯುವ ಧಾವಂತದಲ್ಲಿ ಇದ್ದಾರೆ. ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿ, ತಾವೂ ಪಕ್ಷದ ಟಿಕೆಟ್‌ಗೆ ಅರ್ಹರಿದ್ದೇವೆ ಎಂಬುದನ್ನು ಸಾಬೀತುಪಡಿಸಲು ಶತಾಯಗತಾಯ ಯತ್ನಿಸುತ್ತಿದ್ದಾರೆ. ಇದರಿಂದ ಜಿಲ್ಲಾ ಕಾಂಗ್ರೆಸ್ ಮುಖಂಡರು ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಇದು ಗೊಂದಲ ಮೂಡಿಸಿದೆ.
ದಾಖಲೆ ಅರ್ಜಿ ಸಲ್ಲಿಕೆ:
ಬಾಗಲಕೋಟೆ ಕಾಂಗ್ರೆಸ್ ವಲಯದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ನಡುವೆಯೂ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ತೇರದಾಳ ವಿಧಾನಸಭಾ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಆಕಾಂಕ್ಷಿಗಳ ಸಂಖ್ಯೆ 12ಕ್ಕೂ ಅಧಿಕವಾಗಿದೆ. ಮುಧೋಳ ಮೀಸಲು ಕ್ಷೇತ್ರಕ್ಕೆ ಕೇವಲ ಇಬ್ಬರು ಆಕಾಂಕ್ಷಿಗಳು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಉಳಿದಂತೆ ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ ಕ್ಷೇತ್ರಗಳಲ್ಲಿ 4ಕ್ಕಿಂತ ಹೆಚ್ಚು ಅರ್ಜಿಗಳು ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಸಲ್ಲಿಕೆಯಾಗಿವೆ. ಒಟ್ಟಾರೆ ಜಿಲ್ಲೆಯಲ್ಲಿರುವ 7 ವಿಧಾನಸಭಾ ಕ್ಷೇತ್ರಗಳಲ್ಲಿ 36 ಜನ ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಕುತೂಹಲದ ಅಂಶವೆಂದರೆ ಇಲ್ಲಿಯವರೆಗೆ ಪಕ್ಷದ ಸಂಘಟನೆ ಹಾಗೂ ಪಕ್ಷದ ಚಟುವಟಿಕೆಗಳಿಂದ ದೂರ ಇದ್ದ ಕೇವಲ ಮುಖಂಡರು ಕೂಡ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಿದ್ದು ಎದುರು ಬೀಳಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಕ್ತಿ ಪ್ರದರ್ಶನ
ನಾಯಕರ ನಡುವಿನ ಮುಸುಕಿನ ಗುದ್ದಾಟ:
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಜೊತೆಗೂಡಿ ಅವರ ಪರವಾಗಿ ಭರ್ಜರಿ ಚುನಾವಣೆ ಪ್ರಚಾರ ನಡೆಸಿದ್ದ ಬೆಂಬಲಿಗ ಮುಖಂಡರೇ ಈ ಬಾರಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಕಳೆದ ಬಾರಿಯ ಅಭ್ಯರ್ಥಿಗಳು ತಮ್ಮ ಜೊತೆಗಾರ ಮುಖಂಡರೇ ತಮಗೆ ಸ್ಪರ್ಧೆಯೊಡ್ಡುತ್ತಿದ್ದಾರೆ ಎಂದು ತಮ್ಮ ಆಪ್ತ ವಲಯದಲ್ಲಿ ಅಸಮಾಧಾನ ತೋಡಿಕೊಳ್ಳುವಂತಾಗಿದೆ.
ಹುನಗುಂದ ಕ್ಷೇತ್ರದಲ್ಲಿ ವಿಜಯಾನಂದ ಕಾಶಪ್ಪನವರ ಪ್ರಬಲ ಆಕಾಂಕ್ಷಿಯಾಗಿರುವುದು ಕಾಂಗ್ರೆಸ್ ಪಕ್ಷದಲ್ಲಿ ಸ್ಪಷ್ಟವಾಗಿದೆ. ಆದರೂ ಅವರ ಜೊತೆ ಪಕ್ಷದ ಟಿಕೆಟ್‌ಗಾಗಿ ನೇಕಾರ ಮುಖಂಡ ರವೀಂದ್ರ ಕಲಬುರ್ಗಿ, ಕುರುಬ ಸಮಾಜದ ಎಂ.ಎಲ್.ಶಾಂತಗಿರಿ ಸಹ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇವರ ಅರ್ಜಿ ಸಲ್ಲಿಕೆ ಹಿಂದೆ ಪಕ್ಷ ಮತ್ತು ನಾಯಕರ ನಡುವಿನ ಆಂತರಿಕ ಬಿಕ್ಕಟ್ಟು ಮತ್ತು ಅಸಮಾಧಾನಗಳು ಪ್ರಮುಖ ಪಾತ್ರವಹಿಸಿವೆ.
ಬೀಳಗಿ ಕ್ಷೇತ್ರದಲ್ಲಿ ಮಾಜಿ ಶಾಸಕ ಜೆ.ಟಿ.ಪಾಟೀಲ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಶಾಸಕರಾಗಿ ಮೂರು ಬಾರಿ ಪ್ರತಿನಿಧಿಸಿದ್ದಾರೆ. ಆ ಮೂರೂ ಚುನಾವಣೆಗಳಲ್ಲಿ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್ ಪ್ರಮುಖರಾದ ಶಿವಾನಂದ ನಿಂಗನೂರ, ಬಸವರಾಜ ಖೋತ, ಎಂ.ಎನ್.ಪಾಟೀಲ, ಹನಮಂತ ಕಾಖಂಡಕಿ ಅವರು ಕೂಡ ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದೂ ಸಾಲದೆಂಬಂತೆ ಮಾಜಿ ಸಚಿವ ಎಸ್.ಆರ್.ಪಾಟೀಲ ಸಹ ಕಾಂಗ್ರೆಸ್ ಟಿಕೆಟ್‌ಗಾಗಿ ಬೀಳಗಿ ಕ್ಷೇತ್ರದಿಂದ ಅರ್ಜಿ ಸಲ್ಲಿಸಿದ್ದು, ಇದರ ಹಿಂದೆ ನಾನಾ ರೀತಿಯ ರಾಜಕೀಯ ಲೆಕ್ಕಾಚಾರಗಳು ಕೂಡ ನಡೆದಿವೆ.
ಬಾಗಲಕೋಟೆ ಹಾಗೂ ತೇರದಾಳ ಕ್ಷೇತ್ರದಲ್ಲಿಯೂ ಸಹ ಇದೇ ಪರಿಸ್ಥಿತಿ ಇದೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ, ಇವರ ಜೊತೆ ಮಾಜಿ ಸಚಿವ ಅಜಯಕುಮಾರ ಸರನಾಯಕ, ಡಾ.ದೇವರಾಜ ಪಾಟೀಲ, ಅಯ್ಯಪ್ಪ ಮಳಗಾವಿ, ರಕ್ಷಿತಾ ಈಟಿ ಕೂಡ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲರೂ ಮೇಟಿ ಅವರ ಜೊತೆ ಗುರುತಿಸಿಕೊಂಡವರೇ ಆಗಿದ್ದು, ಮೇಟಿ ಅವರಿಗೆ ಟಿಕೆಟ್ ನೀಡುವ ಮುನ್ನ ನಮ್ಮ ಅರ್ಜಿಯನ್ನು ಪರಿಗಣಿಸಿ ಎಂಬ ಧೋರಣೆ ಅನುಸರಿಸಿದ್ದಾರೆ.
Karnataka Assembly Election 2023: ಬಾಗಲಕೋಟೆಯಲ್ಲಿ ಹಾಲಿ, ಮಾಜಿ ಘಟಾನುಘಟಿಗಳ ನಡುವೆ ಸಮರ..!
ತೇರದಾಳದಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಕಳೆದ ಬಾರಿ ಚುನಾವಣೆ ಗೆಲ್ಲಲು ಸಹಕರಿಸಿದ ಕಾಂಗ್ರೆಸ್ ಮುಖಂಡರೇ ಟಿಕೆಟ್ ಆಕಾಂಕ್ಷಿಗಳಾಗಿ ಸ್ಪರ್ಧೆ ಒಡ್ಡಿದ್ದಾರೆ. ಅವರಲ್ಲಿ ಪ್ರಮುಖವಾಗಿ ಡಾ.ಎ.ಆರ್.ಬೆಳಗಲಿ, ಪದ್ಮಜೀತ ನಾಡಗೌಡ ಮುಂತಾದವರು ಸೇರಿದ್ದಾರೆ. ಬಾದಾಮಿಯಲ್ಲಿ ಸಿದ್ದರಾಮಯ್ಯನವರ ಸ್ಪರ್ಧೆ ಇನ್ನೂ ಖಚಿತವಾಗದ ಹಿನ್ನೆಲೆಯಲ್ಲಿ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಚಿಮ್ಮನಕಟ್ಟಿಕುಟುಂಬ ಸಹ ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವುದನ್ನು ಗಮನಿಸಿದರೆ ಜಿಲ್ಲಾ ಕಾಂಗ್ರೆಸ್ ಮೇಲ್ನೋಟಕ್ಕೆ ಸಂಘಟಿತವಾಗಿ ಕಾಣುತ್ತಿದ್ದರೂ ಆಂತರಿಕವಾಗಿ ಎಲ್ಲವೂ ಸರಿ ಇಲ್ಲ ಎಂಬುದು ವಿಧಿತವಾದಂತಾಗಿದೆ.
ವಿಧಾನಸಭಾ ಕ್ಷೇತ್ರವಾರು ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆ
ಅ.ಸಂ ವಿ.ಸ ಕ್ಷೇತ್ರ ಸಂಖ್ಯೆ
1. ತೇರದಾಳ 12
2. ಮುಧೋಳ 02
3. ಜಮಖಂಡಿ 03
4. ಬೀಳಗಿ 06
5. ಬಾಗಲಕೋಟೆ 05
6. ಹುನಗುಂದ 03
7. ಬಾದಾಮಿ 05