Karnataka Assembly Election 2023: ಬಾಗಲಕೋಟೆಯಲ್ಲಿ ಹಾಲಿ, ಮಾಜಿ ಘಟಾನುಘಟಿಗಳ ನಡುವೆ ಸಮರ..!
ಸಿದ್ದು ಸ್ಪರ್ಧೆ ಅನುಮಾನ: ಕಾಂಗ್ರೆಸ್ಸಲ್ಲಿ ಹೆಚ್ಚಿದ ಆಕಾಂಕ್ಷಿಗಳು, ಕಾರಜೋಳ, ನಿರಾಣಿಗೆ ಹಳೆ ಎದುರಾಳಿಗಳ ಪೈಪೋಟಿ, ಬಿಜೆಪಿ- ಕಾಂಗ್ರೆಸ್ ಜಿದ್ದಾಜಿದ್ದಿ ಅಖಾಡ: ಎರಡೂ ಪಕ್ಷಗಳ ಟಿಕೆಟ್‌ಗೆ ಬೇಡಿಕೆ
ಈಶ್ವರ ಶೆಟ್ಟರ
ಬಾಗಲಕೋಟೆ(ನ.24): ಆರಂಭದಿಂದ ಐದು ದಶಕಗಳ ಕಾಲ ಕಾಂಗ್ರೆಸ್‌ನ ಬಿಗಿ ಹಿಡಿತದಲ್ಲಿದ್ದ ಬಾಗಲಕೋಟೆ ಜಿಲ್ಲೆಯಲ್ಲಿ ನಂತರದ ಎರಡು ದಶಕಗಳಲ್ಲಿ ಜನತಾದಳ ಹಾಗೂ ಬಿಜೆಪಿ ಪರ್ಯಾಯ ಶಕ್ತಿಯಾಗಿ ಬೆಳೆದಿವೆ. ಆದರೆ, ಇದೀಗ ಜನತಾ ದಳದ ಶಕ್ತಿ ಕ್ಷೀಣಸಿ ಮತ್ತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿಲ್ಲೆಯಲ್ಲಿ ಸಮಬಲದ ರಾಜಕಾರಣ ಮುಂದುವರಿದಿದೆ. 90ರ ದಶಕದ ನಂತರ ಜಿಲ್ಲೆಯಲ್ಲಿ ಜನತಾ ಪರಿವಾರ ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯಾಗಿ ಬೆಳೆದಿತ್ತು. ಆದರೆ ನಂತರ ಜನತಾ ಪರಿವಾರದ ಬಹುತೇಕ ನಾಯಕರು ಬಿಜೆಪಿ ಜೊತೆ ಗುರುಸಿಕೊಂಡಿದ್ದರಿಂದ ಸಹಜವಾಗಿ ಆ ಪಕ್ಷದ ಬಲ ಜಿಲ್ಲೆಯಲ್ಲಿ ಕುಗ್ಗುತ್ತಾ ಬಂತು. ಬಿಜೆಪಿ ತನ್ನ ಶಕ್ತಿ ವೃದ್ಧಿಸಿಕೊಂಡು ಸಾಗಿತು.
ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪರ್ಧೆಯಿಂದ ಗಮನ ಸೆಳೆದಿದ್ದ ಜಿಲ್ಲೆಯ ರಾಜಕಾರಣದಲ್ಲಿ ಲಿಂಗಾಯತರ ಮತಗಳೇ ನಿರ್ಣಾಯಕವಾಗಿದ್ದು, ಈ ಸಮುದಾಯದ ಮತಗಳೇ ಜಿಲ್ಲೆಯ ರಾಜಕಾರಣದ ದಿಕ್ಕು ನಿರ್ಣಯಿಸುತ್ತಾ ಬಂದಿವೆ. ಹಿಂದುಳಿದ ವರ್ಗ, ದಲಿತ, ಅಲ್ಪಸಂಖ್ಯಾತರ ಮತಗಳೂ ಕೆಲ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿವೆ. ಅಭಿವೃದ್ಧಿ ಕಾರ್ಯಗಳು ಹಾಗೂ ಪಂಚಮಸಾಲಿ ಮೀಸಲಾತಿ ಹೋರಾಟ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಚರ್ಚೆಯ ವಿಚಾರಗಳಾಗಿವೆ.
ಬಾದಾಮಿ: ಸಿದ್ದು ಸ್ವಕ್ಷೇತ್ರದ ನಾಡಿ ಮಿಡಿತ ಅರಿಯಲು ಬಾದಾಮಿಗೆ ಬಂದ್ರಾ ಜಮೀರ ಅಹ್ಮದ್..?
1.ಬಾಗಲಕೋಟೆ: ಚರಂತಿಮಠ ಎದುರಾಳಿ ಯಾರು?
ಈ ಕ್ಷೇತ್ರದಲ್ಲಿ 1983ರವರೆಗೆ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದು ಬರುತ್ತಿದ್ದರು. ಆ ಬಳಿಕ ಪಕ್ಷದ ಬಲ ಕ್ಷೀಣಿಸಿ ವೈಯಕ್ತಿಕ ವರ್ಚಸ್ಸಿನ ಮೇಲೆ ಅಭ್ಯರ್ಥಿಗಳು ಗೆಲ್ಲುತ್ತಾ ಬಂದರು. ತರುವಾಯ ಕ್ಷೇತ್ರದಲ್ಲಿ ಜನತಾದಳ ಬಲಿಷ್ಠವಾಗಿ 1989ರಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬೆಳೆಯಿತು. ಆದರೆ, 1997ರ ನಂತರ ಕ್ಷೇತ್ರದಲ್ಲಿ ಬಿಜೆಪಿ ತನ್ನ ಬೇರು ಗಟ್ಟಿಮಾಡಿಕೊಂಡಿತ್ತು. 2013ರಲ್ಲಿ ಮತ್ತೆ ಕಾಂಗ್ರೆಸ್ ಈ ಕ್ಷೇತ್ರವನ್ನು ಕೈವಶ ಮಾಡಿಕೊಂಡಿತಾದರೂ ಈ ಬಳಿಕ ಚರಂತಿಮಠ ಅವರ ಮೂಲಕ ವಾಪಸ್ ಬಾಗಲಕೋಟೆ ಕಮಲದ ತೆಕ್ಕೆಗೆ ಹೊರಳಿದೆ. ಇದು ಲಿಂಗಾಯತರ ಪ್ರಾಬಲ್ಯದ ಕ್ಷೇತ್ರವಾಗಿದ್ದು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಮತದಾರರೂ ಸಾಕಷ್ಟುಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಮಾಜಿ ಸಚಿವರಾದ ಎಚ್.ವೈ.ಮೇಟಿ, ಅಜಯಕುಮಾರ ಸರನಾಯಕ ಪ್ರಬಲ ಆಕಾಂಕ್ಷಿಗಳು. ಇವರ ಜೊತೆ ಮಹಿಳಾ ಕಾಂಗ್ರೆಸ್ ಮುಖಂಡರಾದ ರಕ್ಷಿತಾ ಈಟಿ, ಡಾ.ದೇವರಾಜ ಪಾಟೀಲ, ಐಯಪ್ಪ ಮಳಗಾವಿ ಸಹ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಹಾಲಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರೇ ಮತ್ತೆ ಆಕಾಂಕ್ಷಿಯಾಗಿದ್ದು, ಜೆಡಿಎಸ್‌ನಲ್ಲಿ ಇನ್ನೂ ಅಭ್ಯರ್ಥಿ ಕುರಿತು ಸ್ಪಷ್ಟತೆ ಇಲ್ಲ. ಪಕ್ಷ ಮತ್ತು ಜಾತಿ ಎರಡೂ ಪ್ರತಿ ಚುನಾವಣೆಯಲ್ಲಿ ಇಲ್ಲಿ ಮಹತ್ವದ ವಿಚಾರಗಳಾಗಿವೆ.
2.ಬಾದಾಮಿ: ಸಿದ್ದು ಸ್ಥಾನಕ್ಕೆ ಹಲವು ಆಕಾಂಕ್ಷಿಗಳು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪರ್ಧೆಯಿಂದಾಗಿ ಕಳೆದ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದ್ದ ಕ್ಷೇತ್ರ ಬಾದಾಮಿ. ಕಾಂಗ್ರೆಸ್‌ನಿಂದ ಈ ಕ್ಷೇತ್ರದಲ್ಲಿ ಬಿ.ಬಿ.ಚಿಮ್ಮನಕಟ್ಟಿಐದು ಬಾರಿ ಗೆದ್ದಿದ್ದರೆ, ಬಿಜೆಪಿಯ ಎಂ.ಕೆ.ಪಟ್ಟಣಶೆಟ್ಟರ ಎರಡು ಬಾರಿ ಗೆಲುವಿನ ನಗೆ ಬೀರಿದ್ದಾರೆ. ಆದರೆ, 2018ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಕಾರಣ ಇಲ್ಲಿನ ರಾಜಕೀಯ ಚಿತ್ರಣವೇ ಇದೀಗ ಬದಲಾಗಿದೆ. ಆಗ ಸಿದ್ದರಾಮಯ್ಯಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಹಾಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಕಣಕ್ಕಿಳಿದು ಅಲ್ಪಮತಗಳ ಅಂತರದಿಂದ ಸೋತಿದ್ದರು. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತಿದ್ದರೂ ಇಲ್ಲಿನ ಜನ ಸಿದ್ದರಾಮಯ್ಯ ಕೈಹಿಡಿದಿದ್ದರು. ಕ್ಷೇತ್ರದಲ್ಲಿ ಹಿಂದುಳಿದ ವರ್ಗ ಹಾಗೂ ದಲಿತ, ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕ. ಲಿಂಗಾಯತ ಹಾಗೂ ಕುರುಬ ಸಮುದಾಯದ ಮತಗಳು ಇಲ್ಲಿ ಸಾಕಷ್ಟುಪ್ರಮಾಣದಲ್ಲಿವೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ದರಾಮಯ್ಯ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿಹಾಗೂ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ, ಮಹೇಶ ಹೊಸಗೌಡರ, ಅನಿಲ ದಡ್ಡಿ, ಮಹೇಶ ಹೊಸಗೌಡರ ಸೇರಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟರ ಹಾಗೂ ಮಹಾಂತೇಶ ಮಮದಾಪುರ ಆಕಾಂಕ್ಷಿಗಳು. ಮುಂದಿನ ಬಾರಿಯೂ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಪೈಪೋಟಿ ಇರಲಿದೆ.
3.ಹುನಗುಂದ: ಮತ್ತೆ ದೊಡ್ಡನಗೌಡ ವರ್ಸಸ್ ಕಾಶಪ್ಪನವರ್
ಇತಿಹಾಸ ತೆಗೆದು ನೋಡಿದರೆ ಹುನಗುಂದ ಕಾಂಗ್ರೆಸ್‌ನ ಭದ್ರಕೋಟೆ. ಆದರೆ ಬದಲಾದ ಕಾಲಘಟ್ಟದಲ್ಲಿ ಇದೀಗ ಬಿಜೆಪಿ ಅಲೆ ಕೂಡ ಇಲ್ಲಿ ಜೋರಾಗಿ ಬೀಸುತ್ತಿದೆ. ಕಳೆದ ಚುನಾವಣೆಯಲ್ಲಿ ಇದೇ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಇಲ್ಲಿ ಗೆದ್ದು ಬಂದಿದ್ದಾರೆ. 2013ರಲ್ಲಿ ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ ಆಯ್ಕೆಯಾದರಾದರೂ 2018ರ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ ಮತ್ತೆ ಗೆದ್ದು ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತರೇ ಬಹುಸಂಖ್ಯಾತರಿದ್ದು, ವಿಶೇಷವಾಗಿ ಲಿಂಗಾಯತ ಉಪ ಪಂಗಡಗಳ ಮತಗಳು ಯಾರತ್ತ ವಾಲುತ್ತವೆ ಎಂಬುದರ ಮೇಲೆ ಚುನಾವಣೆ ಭವಿಷ್ಯ ನಿರ್ಣಯವಾಗುತ್ತದೆ. ಲಿಂಗಾಯತರ ನಂತರ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತ ಮತಗಳು ಹೆಚ್ಚಿನ ಪ್ರಮಾಣದಲ್ಲಿವೆ. ಸದ್ಯ ಕಾಂಗ್ರೆಸ್‌ನಿಂದ ವಿಜಯಾನಂದ ಕಾಶಪ್ಪನವರ್ ಪ್ರಬಲ ಆಕಾಂಕ್ಷಿಯಾಗಿದ್ದು, ರವೀಂದ್ರ ಕಲಬುರ್ಗಿ, ಎಂ.ಎಲ್.ಶಾಂತಗಿರಿ ಕೂಡ ಟಿಕೆಟ್ ಕೇಳಿದ್ದಾರೆ. ಬಿಜೆಪಿಯಿಂದ ಮತ್ತೆ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಅವರೇ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಸ್.ಆರ್.ನವಲಿ ಹಿರೇಮಠ ಮತ್ತೆ ಸ್ಪರ್ಧಿಸುವ ನಿರೀಕ್ಷೆ ಇದೆ.
4.ಬೀಳಗಿ: ನಿರಾಣಿಗೆ ವಿರುದ್ಧ ಸ್ಪರ್ಧೆಗೆ ಹಲವರು
ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ ಒಂಬತ್ತು ಬಾರಿ ಕಾಂಗ್ರೆಸ್, ಮೂರು ಬಾರಿ ಬಿಜೆಪಿ ಹಾಗೂ ಒಂದು ಬಾರಿ ಜನತಾದಳ ಗೆದ್ದಿದೆ. ಜೆ.ಟಿ.ಪಾಟೀಲ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೂರು ಬಾರಿ ಆಯ್ಕೆಯಾಗಿದ್ದರೆ, ಕೈಗಾರಿಕಾ ಸಚಿವ, ಕ್ಷೇತ್ರದ ಹಾಲಿ ಶಾಸಕ ಮುರುಗೇಶ್ ನಿರಾಣಿ ಕೂಡ ಮೂರು ಬಾರಿ ಗೆದ್ದಿದ್ದಾರೆ. ಸಕ್ಕರೆ ಉದ್ಯಮಿಯೂ ಆಗಿರುವ ನಿರಾಣಿ ಬೀಳಗಿ ಕ್ಷೇತ್ರದ ಮೇಲೆ ತಮ್ಮದೇ ಆದ ಹಿಡಿತ ಬೆಳೆಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಈ ಕ್ಷೇತ್ರ ರಡ್ಡಿ ಸಮುದಾಯದ ಹಿಡಿತದಲ್ಲಿತ್ತು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಲಿಂಗಾಯತ ಮತಗಳ ಪ್ರಮಾಣ ಹೆಚ್ಚಳ ಹಾಗೂ ಈ ಸಮುದಾಯದ ಪ್ರಮುಖ ಮುಖಂಡ ಮುರುಗೇಶ ನಿರಾಣಿ ಸ್ಪರ್ಧೆ ನಂತರ ಇಲ್ಲಿನ ರಾಜಕೀಯ ಚಿತ್ರಣ ಬದಲಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಜೆ.ಟಿ.ಪಾಟೀಲ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಇವರ ಜೊತೆ ಮಾಜಿ ಸಚಿವ ಎಸ್.ಆರ್.ಪಾಟೀಲ, ಮುಖಂಡರಾದ ಬಸಪ್ರಭು ಸರನಾಡಗೌಡರ, ಹನಮಂತ ಕಾಕಂಡಕಿ, ಶಿವಾನಂದ ನಿಂಗನೂರ, ಬಸವರಾಜ ಖೋತ ಮತ್ತು ಎನ್.ಎಂ.ಪಾಟೀಲರೂ ಪೈಪೋಟಿಯಲ್ಲಿದ್ದಾರೆ. ಬಿಜೆಪಿಯಿಂದ ಮತ್ತೆ ಸಚಿವ ಮುರಗೇಶ ನಿರಾಣಿ ಸ್ಪರ್ಧೆ ಖಚಿತವಾಗಿದೆ. ಇಲ್ಲೇನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ ಪೈಪೋಟಿ.
5.ಮುಧೋಳ: ಕಾರಜೋಳರ ಗೆಲುವು ತಡೆಯೋರಾರಯರು?
ಮುಧೋಳ ಮೀಸಲು ವಿಧಾನಸಭಾ ಕ್ಷೇತ್ರ ಜಿಲ್ಲೆಯಲ್ಲೇ ಅತ್ಯಂತ ಜಿದ್ದಾಜಿದ್ದಿನ ಮತ್ತು ಪ್ರತಿಷ್ಠೆಯ ಕ್ಷೇತ್ರ. ಮೀಸಲು ವಿಧಾನಸಭಾ ಕ್ಷೇತ್ರವಾಗುವ ಮುನ್ನ ಇದು ಮೇಲ್ವರ್ಗದ ಹಿಡಿತದಲ್ಲಿತ್ತು. ನಂತರ 80ರ ದಶಕದಲ್ಲಿ ಮೀಸಲು ಕ್ಷೇತ್ರವಾದ ನಂತರವೂ ಕ್ಷೇತ್ರದ ಮೇಲೆ ಈ ವರ್ಗದ ಹಿಡಿತ ಕಡಿಮೆಯಾಗಿಲ್ಲ. ಹಾಲಿ ನೀರಾವರಿ ಸಚಿವ ಸಚಿವ ಗೋವಿಂದ ಕಾರಜೋಳ ಅವರು ಸತತ ನಾಲ್ಕು ಬಾರಿ ಸೇರಿ 5 ಬಾರಿ ಕ್ಷೇತ್ರದಿಂದ ಗೆದ್ದಿದ್ದಾರೆ. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಾದಿಗ ಮತಗಳೇ ನಿರ್ಣಾಯಕವಾಗಿರುವ ಮುಧೋಳವು ಮೀಸಲು ಕ್ಷೇತ್ರವಾದ ಬಳಿಕ ಮಾದಿಗರೇ ಹೆಚ್ಚಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಲಿಂಗಾಯತ ಹಾಗೂ ರಡ್ಡಿ ಮತಗಳೂ ಸಾಕಷ್ಟುಸಂಖ್ಯೆಯಲ್ಲಿದ್ದು, ಇವರು ಯಾರನ್ನು ಬೆಂಬಲಿಸುತ್ತಾರೆ ಎಂಬುದರ ಮೇಲೆ ಅಭ್ಯರ್ಥಿಯ ಗೆಲುವು ನಿರ್ಧಾರವಾಗುತ್ತದೆ. ಸದ್ಯ ಕಾಂಗ್ರೆಸ್‌ನಿಂದ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಸತೀಶ ಬಂಡಿವಡ್ಡರ ಟಿಕೆಟ್ ಆಕಾಂಕ್ಷಿ ಆಗಿದ್ದರೆ, ಬಿಜೆಪಿಯಿಂದ ಗೋವಿಂದ ಕಾರಜೋಳ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಜೆಡಿಎಸ್ ದುರ್ಬಲವಾಗಿದೆ.
ಬಾದಾಮಿಯಲ್ಲಿಯೇ ಸಿದ್ದರಾಮಯ್ಯ ಸ್ಪರ್ಧಿಸುವಂತೆ ಸ್ಥಳೀಯರ ಒತ್ತಡ: ಜಮೀರ್ ಅಹಮದ್
6.ಜಮಖಂಡಿ: ಆನಂದ ನ್ಯಾಮಗೌಡಗೆ ಮತ್ತೆ ಸತ್ವ ಪರೀಕ್ಷೆ
ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ 1989ರಿಂದ 2004ರವರೆಗೆ ಕಾಂಗ್ರೆಸ್‌ನ ದಿ.ಆರ್.ಎಂ.ಕಲೂತಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಬಿಜೆಪಿಯ ಸಿದ್ದು ಸವದಿ ಹಾಗೂ ಶ್ರೀಕಾಂತ ಕುಲಕರ್ಣಿ ತಲಾ ಒಮ್ಮೆ ಆಯ್ಕೆಯಾಗಿದ್ದು, 2013 ಮತ್ತು 2018ರಲ್ಲಿ ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡ ಗೆದ್ದಿದ್ದರು. ಆ ನಂತರ ನಡೆದ ರಸ್ತೆ ಅಪಘಾತದಲ್ಲಿ ಸಿದ್ದು ನ್ಯಾಮಗೌಡ ಅವರು ನಿಧನರಾದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಪುತ್ರ ಆನಂದ ನ್ಯಾಮಗೌಡ ಆಯ್ಕೆಯಾಗಿದ್ದಾರೆ. ಜಮಖಂಡಿಯಲ್ಲಿ ಲಿಂಗಾಯತರು ಮತ್ತು ಅಲ್ಪಸಂಖ್ಯಾತರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇದನ್ನು ಹೊರತುಪಡಿಸಿ ದಲಿತ, ಮರಾಠ, ಬ್ರಾಹ್ಮಣ ಹಾಗೂ ಹಿಂದುಳಿದ ವರ್ಗದ ಮತಗಳೂ ಸಾಕಷ್ಟಿವೆ. ಸದ್ಯ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಆನಂದ ನ್ಯಾಮಗೌಡ ಮತ್ತೊಮ್ಮೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಿಜೆಪಿಯಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಸಕ್ಕರೆ ಉದ್ಯಮಿ ಜಗದೀಶ ಗುಡಗುಂಟಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
7.ತೇರದಾಳ: ಸಿದ್ದು ಸವದಿ-ಉಮಾಶ್ರೀ ಮತ್ತೆ ಸ್ಪರ್ಧೆಗಿಳಿಯುತ್ತಾರಾ?
ಬಾಗಲಕೋಟೆಯಲ್ಲಿ 2008ರಲ್ಲಿ ಹೊಸ ವಿಧಾನಸಭಾ ಕ್ಷೇತ್ರವಾಗಿ ಹುಟ್ಟಿಕೊಂಡಿರುವ ತೇರದಾಳದಲ್ಲಿ ಕಾಂಗ್ರೆಸ್‌ನಿಂದ ಒಮ್ಮೆ ಉಮಾಶ್ರೀ, ಬಿಜೆಪಿಯಿಂದ ಎರಡು ಬಾರಿ ಸಿದ್ದು ಸವದಿ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲೇ ಅತ್ಯಂತ ಚಿಕ್ಕದಾದ ಈ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ನೇಕಾರರದ್ದೇ ಪ್ರಾಬಲ್ಯ. ಮುಸ್ಲಿಮರೂ ಇಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಸದ್ಯ ಬಿಜೆಪಿಯಿಂದ ಸಿದ್ದು ಸವದಿ ಮತ್ತೊಮ್ಮೆ ಸ್ಪರ್ಧಿಸಲು ಒಲವು ತೋರಿದ್ದು, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ನಡುವೆ ಸಾಕಷ್ಟುಪೈಪೋಟಿ ಇದೆ. ಮಾಜಿ ಸಚಿವೆ ಉಮಾಶ್ರೀ ಪ್ರಬಲ ಆಕಾಂಕ್ಷಿಯಾಗಿದ್ದರೆ, ಇವರ ಜೊತೆಗೆ ಡಾ.ಎ.ಆರ್.ಬೆಳಗಲಿ, ಡಾ.ಪದ್ಮಜಿತ ನಾಡಗೌಡರ, ಪ್ರವೀಣ ನಾಡಗೌಡರ, ಎಂ.ಎಸ್.ದಡ್ಡೆನ್ನವರ, ಮುರಗೇಶ ಕಡ್ಲಿಮಟ್ಟಿ, ರಾಹುಲ ಕಲೂತಿ, ಶ್ರೀಶೈಲ ದಳವಾಯಿ ಸೇರಿ ಹಲವರು ಈಗಾಗಲೇ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಸದ್ಯಕ್ಕೆ ಪ್ರಬಲ ಆಕಾಂಕ್ಷಿಗಳಿಲ್ಲ.
ಬಾಗಲಕೋಟೆ ಜಿಲ್ಲೆ
ಒಟ್ಟು 7
ಬಿಜೆಪಿ 5
ಕಾಂಗ್ರೆಸ್ 2
ಜೆಡಿಎಸ್ 0