ಹೆಲಿಕಾಪ್ಟರ್, ಮಿನಿ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಬಾಡಿಗೆ ದರವನ್ನು ಹಾಲಿ ದರಕ್ಕಿಂತ ಶೇ.10ರಷ್ಟು ಹೆಚ್ಚಳ ಮಾಡಿವೆ. ಅಂದರೆ, ಹೆಲಿಕಾಪ್ಟರ್ ಅಥವಾ ಮಿನಿ ವಿಮಾನ ಹಾರಾಡುವ ಪ್ರತಿ ಗಂಟೆಗೆ ದರ ವಿಧಿಸಲಾಗುತ್ತದೆ. ಇದೀಗ ಈ ದರವನ್ನೇ ಕಂಪನಿಗಳು ಏರಿಕೆ ಮಾಡಿವೆ. ಬಾಡಿಗೆದಾರರೇ ಹೆಲಿಕಾಪ್ಟರ್ ಅಥವಾ ಮಿನಿ ವಿಮಾನ ಹಾರಾಟ ಮತ್ತು ನಿರ್ವಹಣಾ ವೆಚ್ಚ ಭರಿಸಬೇಕಿದೆ.
ಬೆಂಗಳೂರು(ಫೆ.22): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಹೆಲಿಕಾಪ್ಟರ್‌ಗಳಿಗೆ ಭಾರೀ ಬೇಡಿಕೆ ಶುರುವಾಗಿದೆ. ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು ಒಂದು ತಿಂಗಳ ಅವಧಿಗೆ ಬಾಡಿಗೆಗೆ ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡುತ್ತಿದ್ದಾರೆ.
ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂಬಂಧ ಶೀಘ್ರದಲ್ಲೇ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಸಾಧ್ಯತೆಯಿದೆ. ನೀತಿ ಸಂಹಿತೆ ಘೋಷಣೆಯಾದ ಬಳಿಕ ಮೂರೂ ಪಕ್ಷಗಳ ಪ್ರಮುಖ ನಾಯಕರು ರಾಜ್ಯದ ವಿವಿಧೆಡೆ ನಡೆಯುವ ಪಕ್ಷದ ಬಹಿರಂಗ ಸಮಾವೇಶಗಳು, ಪಕ್ಷದ ಕಾರ್ಯಕ್ರಮಗಳು, ಚುನಾವಣಾ ಪ್ರಚಾರಕ್ಕಾಗಿ ತೆರಳುತ್ತಾರೆ. ಹೀಗಾಗಿ ತಮ್ಮ ಪ್ರಯಾಣಕ್ಕಾಗಿ ಖಾಸಗಿ ಕಂಪನಿಗಳ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಮುಂಗಡ ಬುಕಿಂಗ್ ಮಾಡಲು ಮುಗಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್
ಹೆಲಿಕಾಪ್ಟರ್, ಮಿನಿ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಬಾಡಿಗೆ ದರವನ್ನು ಹಾಲಿ ದರಕ್ಕಿಂತ ಶೇ.10ರಷ್ಟು ಹೆಚ್ಚಳ ಮಾಡಿವೆ. ಅಂದರೆ, ಹೆಲಿಕಾಪ್ಟರ್ ಅಥವಾ ಮಿನಿ ವಿಮಾನ ಹಾರಾಡುವ ಪ್ರತಿ ಗಂಟೆಗೆ ದರ ವಿಧಿಸಲಾಗುತ್ತದೆ. ಇದೀಗ ಈ ದರವನ್ನೇ ಕಂಪನಿಗಳು ಏರಿಕೆ ಮಾಡಿವೆ. ಬಾಡಿಗೆದಾರರೇ ಹೆಲಿಕಾಪ್ಟರ್ ಅಥವಾ ಮಿನಿ ವಿಮಾನ ಹಾರಾಟ ಮತ್ತು ನಿರ್ವಹಣಾ ವೆಚ್ಚ ಭರಿಸಬೇಕಿದೆ.
ಲ್ಯಾಂಡಿಂಗ್ ಮತ್ತು ಟೇಕಾಫ್‌ಗಳು ಹೆಚ್ಚಾದರೂ ಬಾಡಿಗೆ ದರದಲ್ಲಿ ವ್ಯತ್ಯಾಸವಾಗಲಿದೆ. ಆದರೆ, ವಿಮಾನಯಾನ ಕಂಪನಿಗಳು ವೇಟಿಂಗ್ ಶುಲ್ಕಕ್ಕೆ ವಿನಾಯಿತಿ ನೀಡಿವೆ. ವೇಟಿಂಗ್ ಅವಧಿಯಲ್ಲಿ ಪೈಲಟ್‌ಗಳ ಊಟೋಪಚಾರದ ವೆಚ್ಚ ಹಾಗೂ ಹೆಲಿಕಾಪ್ಟರ್ ಅಥವಾ ವಿಮಾನಗಳ ಪಾರ್ಕಿಂಗ್ ಶುಲ್ಕವನ್ನು ಬಾಡಿಗೆದಾರರೇ ಪ್ರತ್ಯೇಕ ಪಾವತಿಸಬೇಕಿದೆ.
ಹೊರಗಿನಿಂದ ನಗರಕ್ಕೆ ಹೆಲಿಕಾಪ್ಟರ್:
ರಾಜ್ಯದಲ್ಲಿ ಸದ್ಯಕ್ಕೆ ಜಿಎಂಪಿ ಮತ್ತು ಡೆಕ್ಕನ್ ವಿಮಾನಯಾನ ಕಂಪನಿಗಳು ರಾಜಕೀಯ ನಾಯಕರಿಗೆ ಹೆಲಿಕಾಪ್ಟರ್ ಬಾಡಿಗೆಗೆ ನೀಡುತ್ತಿವೆ. ರಾಜ್ಯದಲ್ಲಿ ಮಿನಿ ವಿಮಾನಗಳ ಬದಲು ಹೆಲಿಕಾಪ್ಟರ್ ಬಳಕೆ ಹೆಚ್ಚಿದೆ.
ನಾಯಕರ ಬೇಡಿಕೆಗೆ ತಕ್ಕಂತೆ ವಿಮಾನವನ್ನೂ ಬಾಡಿಗೆಗೆ ನೀಡಲಾಗುತ್ತದೆ. ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿಮಾನಯಾನ ಕಂಪನಿಗಳು ದೆಹಲಿ, ಕೋಲ್ಕತಾ ಹಾಗೂ ಕೊಚ್ಚಿಯಿಂದ ಹೆಲಿಕಾಪ್ಟರ್‌ಗಳನ್ನು ಬೆಂಗಳೂರಿಗೆ ತರಿಸಿವೆ ಎಂದು ತಿಳಿದು ಬಂದಿದೆ.
ವಿವಿಐಪಿ ಬಳಕೆಗೆ ಬಾಡಿಗೆ ದುಬಾರಿ:
ವಿವಿಐಪಿ (ಅತಿಗಣ್ಯರು) ಪ್ರಯಾಣಿಸುವ ಹೆಲಿಕಾಪ್ಟರ್‌ಗಳಿಗೆ ದುಬಾರಿ ಬಾಡಿಗೆ ನಿಗದಿಗೊಳಿಸಿವೆ. ಏಕೆಂದರೆ, ಈ ಹೆಲಿಕಾಪ್ಟರ್‌ಗಳನ್ನು ಒಂದು ದಿನ ಮುಂಚಿತವಾಗಿ ಟ್ರಯಲ್ ಟೇಕಾಫ್ ಹಾಗೂ ಲ್ಯಾಂಡಿಂಗ್ ಮಾಡಬೇಕಿರುವುದರಿಂದ ಬಾಡಿಗೆ ಏರಿಸಲಾಗಿದೆ. ಹೆಲಿಕಾಪ್ಟರ್ ಜತೆಗೆ ಗಣ್ಯರ ಪ್ರಯಾಣಕ್ಕೆ ದುಬಾರಿ ಕಾರುಗಳನ್ನು ಕೂಡ ಬಾಡಿಗೆಗೆ ನೀಡಲಾಗುತ್ತಿದೆ. ಗಣ್ಯರು ಹೆಲಿಪ್ಯಾಡ್‌ನಿಂದ ನಿಗದಿತ ಸ್ಥಳಕ್ಕೆ ಪ್ರಯಾಣಿಸಲು ಐಷಾರಾಮಿ ಕಾರುಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೀಗಾಗಿ ವಿಮಾನಯಾನ ಕಂಪನಿಗಳು ಹೆಲಿಕಾಪ್ಟರ್ ಮತ್ತು ಕಾರು ಒಳಗೊಂಡ ಪ್ಯಾಕೇಜ್ ರೂಪಿಸಿವೆ.
ಕಾರವಾರದಲ್ಲಿ ರಾಜಕೀಯ ಬದಲಾವಣೆ, ಕಾಂಗ್ರೆಸ್ ಸೇರಲು ಆನಂದ್ ಆಸ್ನೋಟಿಕರ್ ಸಿದ್ಧತೆ
ಪಾರ್ಕಿಂಗ್ ಶುಲ್ಕ:
ರಾಜ್ಯದಲ್ಲಿ ವಿಮಾನ ನಿಲ್ದಾಣಗಳಲ್ಲಿ ಹೆಲಿಕಾಪ್ಟರ್ ಹಾಗೂ ವಿಮಾನಗಳ ಪಾರ್ಕಿಂಗ್‌ಗೆ ವಿಮಾನಯಾನ ಕಂಪನಿಗಳು ನಿಗದಿತ ಪಾರ್ಕಿಂಗ್ ಶುಲ್ಕ ಪಾವತಿಸಬೇಕಿದೆ. ಹುಬ್ಬಳ್ಳಿ, ಜಕ್ಕೂರು, ಎಚ್‌ಎಎಲ…, ಬೀದರ್ ಕಲಬುರಗಿ ವಿಮಾನ ನಿಲ್ದಾಣದಲ್ಲಿ 8 ಗಂಟೆಯ ಅವಧಿಗೆ 20 ಸಾವಿರ ರು. ಶುಲ್ಕ ನಿಗದಿಗೊಳಿಸಲಾಗಿದೆ. ಮಂಗಳೂರು ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8 ಗಂಟೆಯ ಅವಧಿಗೆ 50 ಸಾವಿರ ರು. ಶುಲ್ಕ ನಿಗದಿಗೊಳಿಸಲಾಗಿದೆ. ಮುಂಬೈ ಮತ್ತು ದೆಹಲಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಪಾರ್ಕಿಂಗ್ ಶುಲ್ಕ ಕಡಿಮೆಯಿದೆ.
ಯಾವುದಕ್ಕೆ ಎಷ್ಟು ಬಾಡಿಗೆ? (ಪ್ರತಿ ಗಂಟೆಗೆ)
2 ಆಸನದ ಹೆಲಿಕಾಪ್ಟರ್: 2.20 ಲಕ್ಷ ರು.
4 ಆಸನದ ಹೆಲಿಕಾಪ್ಟರ್: 2.40 ಲಕ್ಷ ರು.
6 ಆಸನದ ಮಿನಿ ವಿಮಾನ: 2.60 ಲಕ್ಷ ರು.
8 ಆಸನದ ಮಿನಿ ವಿಮಾನ: 3.50 ಲಕ್ಷ ರು.
13 ಆಸನದ ಮಿನಿವಿಮಾನ: 4 ಲಕ್ಷ ರು.
15 ಆಸನದ ವಿನಿ ವಿಮಾನ: 5 ಲಕ್ಷ ರು.
