ಬೆಂಗಳೂರು, (ಜುಲೈ.06): ಹೊಸಕೋಟೆ ಬೈ ಎಲೆಕ್ಷನ್‌ನಲ್ಲಿ  ಶ್ರೀಮಂತ ರಾಜಕಾರಣಿ  ಎಂಟಿಬಿ ನಾಗರಾಜ್ ಅವರನ್ನೇ ಸೋಲಿಸಿರುವ ಶರತ್ ಬಚ್ಚೇಗೌಡ ಅವರು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.

ಎದುರಾಳಿ ಎಂಟಿಬಿ ನಾಗರಾಜ್ ಅವರಿಗೆ ಬಿಜೆಪಿ, ಎಂಎಲ್‌ಸಿ ಮಾಡುತ್ತಿದ್ದಂತೆಯೇ ಶರತ್ ಬಚ್ಚೇಗೌಡ ಅಲರ್ಟ್ ಆಗಿದ್ದಾರೆ. ತಮ್ಮ ಮುಂದಿನ ರಾಜಕೀಯ ಜೀವನಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಎಂಟಿಬಿ ನಾಗರಾಜ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಎದುರಾದ ಉಪಚುನಾವಣೆಯಲ್ಲಿ ಗೆದ್ದಿರುವ  ಶರತ್ ಅವರನ್ನ ಸೆಳೆಯಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ.

ಶರತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇಕೆ? : ಸಂಸದ ಬಚ್ಚೇಗೌಡ ಸ್ಪಷ್ಟನೆ

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಎಂಟಿಬಿ ನಾಗರಾಜ್‌ ಅವರ ವಿರುದ್ಧ ಮುಂದಿನ ಚುನಾವಣೆಗೆ ಬಿಜೆಪಿ ಸಂಸದ ಬಿನ್ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಅವರೇ ಸೂಕ್ತ ಎನ್ನುವುದನ್ನ ಕಾಂಗ್ರೆಸ್ ಅರಿತಿದೆ. ಇದರಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶರತ್‌ಗೆ ಗಾಳ ಹಾಕುತ್ತಿದ್ದಾರೆ. ಇದರ ಮಧ್ಯೆ ಶರತ್ ಬಚ್ಚೇಗೌಡ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಜೆಡಿಎಸ್‌ ಸೇರ್ತಾರ ಶರತ್..?

ಹೌದು... ಎದುರಾಳಿ ಎಂಟಿಬಿ ನಾಗರಾಜ್ ಅವರನ್ನ ಬಿಜೆಪಿ MLC ಮಾಡಿದ್ದೆ ತಡ ಶರತ್ ಬಚ್ಚೇಗೌಡ ಅವರು ರಹಸ್ಯವಾಗಿ ಎಚ್‌ಡಿ ದೇವೇಗೌಡ ಅವರ ನಿವಾಸಕ್ಕೆ ತೆರಳಿ ಚರ್ಚೆ ಮಾಡಿರುವುದು ಇಂತಹದೊಂದು ಪ್ರಶ್ನೆ ಉದ್ಭವಿಸಿದೆ.

ಈ ಮೊದಲು ಬಿಜೆಪಿಯಿಂದ ಉಚ್ಚಾಟನೆಯಾದ ಬಳಿಕ ಕಾಂಗ್ರೆಸ್ ಸೇರ್ತಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿತ್ತು. ಆದ್ರೆ, ಇದೀಗ ಏಕಾಏಕಿ ಶರತ್, ದೊಡ್ಡಗೌಡ್ರನ್ನ ಭೇಟಿ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಜೆಡಿಎಸ್ ಮನೆ ಸೇರ್ತಾರೆ ಎನ್ನುವ ಗುಸು-ಗುಸು ಶುರುವಾಗಿದೆ.

ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಲು ಹೋಗಿದ್ದೆ ಎಂದು ಶರತ್ ಬಚ್ಚೇಗೌಡ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಆದರೆ... ಇದೊಂದು ನೆಪ ಮಾತ್ರವಾಗಿದ್ದು, ಮುಂದಿನ ರಾಜಕೀಯ ಲೆಕ್ಕಚಾರದ ಬಗ್ಗೆ ಚರ್ಚೆಗಳು ನಡೆದಿವೆ ಎನ್ನುವುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಹೊಸಕೋಟೆಯಲ್ಲಿ ಎಂಟಿಬಿ ಬಗ್ಗುಬಡಿಯಲು ಡಿಕೆಶಿ ತಂತ್ರ

 ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಅವರ ರಾಜಕೀಯ ಜೀವನನ್ನ ಅಂತ್ಯ ಹಾಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಂತ್ರ ಎಣೆಯುತ್ತಿದ್ದಾರೆ. ಯಾಕಂದ್ರೆ ಎಂಟಿಬಿ ಮತ್ತು ಡಿಕೆಶಿ ರಾಜಕೀಯ ಬದ್ಧವೈರಿಗಳಾಗಿದ್ದಾರೆ. ಬೈ ಎಲೆಕ್ಷನ್ ಸಮಯದಲ್ಲಿ ಧಮ್ ಇದ್ರೆ ಬಾ ಎಂದು ಡಿಕೆಶಿಗೆ ಎಂಟಿಬಿ ನಾಗರಾಜ್ ಸವಾಲು ಹಾಕಿದ್ದರು. ಆ ಸವಾಲನ್ನು ಡಿಕೆ ಶಿವಕುಮಾರ್ ಮನಸ್ಸಲ್ಲಿಯೇ ಇಟ್ಟುಕೊಂಡು ಸದ್ದಿಲ್ಲದೇ ಶರತ್ ಬಚ್ಚೇಗೌಡ್ರ ಮೂಲಕ ನಾಗರಾಜ್‌ಗೆ ಖೆಡ್ಡಾ ತೋಡುತ್ತಿದ್ದಾರೆ.

ಒಟ್ಟಿನಲ್ಲಿ ಶರತ್ ಬಚ್ಚೇಗೌಡ್ರಿಗೆ ಬಿಜೆಪಿ ಬಾಗಿಲು ಮುಚ್ಚಿದ್ದು, ಅವರಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಮನೆ ಬಾಗಿಲುಗಳು ಓಪನ್ ಆಗಿವೆ. ಆದ್ರೆ, ಅವರು ಯಾರ ಮನೆಗೆ ಹೋಗ್ತಾರೆ ಎನ್ನುವುದೇ ಭಾರೀ ಕುತೂಹಲ ಮೂಡಿಸಿದೆ.