ಪಕ್ಷೇತರ ಅಭ್ಯರ್ಥಿ ಶರತ್ 100 ಕೋಟಿ ಒಡೆಯ!
ಪಕ್ಷೇತರ ಅಭ್ಯರ್ಥಿ ಶರತ್ 100 ಕೋಟಿ ಒಡೆಯ!| ರಾಜ್ಯದ ಅತಿ ಶ್ರೀಮಂತ ಅಭ್ಯರ್ಥಿ ಎಂಟಿಬಿ ವಿರುದ್ಧ ಇನ್ನೊಬ್ಬ ಶ್ರೀಮಂತನ ಸ್ಪರ್ಧೆ| ಹೊಸಕೋಟೆ ಕ್ಷೇತ್ರದಲ್ಲಿ ದುಡ್ಡಿನ ಕುಳಗಳ ಹಣಾಹಣಿ
ಬೆಂಗಳೂರು[ನ.16]: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಶರತ್‌ಕುಮಾರ್ ಬಚ್ಚೇಗೌಡ ಹಾಗೂ ಅವರ ಪತ್ನಿ ಬರೋಬ್ಬರಿ 100 ಕೋಟಿ ರು. ಆಸ್ತಿಯ ಒಡೆಯರಾಗಿದ್ದಾರೆ.
ಗುರುವಾರ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿರುವ ಅಫಿಡವಿಟ್‌ನಲ್ಲಿ ಆಸ್ತಿ ಘೋಷಿಸಿಕೊಂಡಿರುವ ಶರತ್ ಅವರು ಒಟ್ಟು 97.50 ಕೋಟಿ ರು. ಮೌಲ್ಯ ಆಸ್ತಿ ಹೊಂದಿದ್ದಾರೆ. ಈ ಪೈಕಿ 34.50 ಕೋಟಿ ರು. ಮೌಲ್ಯದ ಸ್ವಯಾರ್ಜಿತ ಆಸ್ತಿ ಹಾಗೂ 63 ಕೋಟಿ ರು. ಮೌಲ್ಯದ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. ಇನ್ನು ಅವರ ಪತ್ನಿ ಪ್ರತಿಭಾ ಅವರು 2.50 ಲಕ್ಷ ಮೌಲ್ಯದ ಸ್ವಯಾರ್ಜಿತ ಆಸ್ತಿ ಹೊಂದಿದ್ದಾರೆ. ಇನ್ನು ಶರತ್ ಅವರು 23.88 ಕೋಟಿ ಮೌಲ್ಯದ ಚರಾಸ್ತಿ ಹಾಗೂ ಪತ್ನಿ 14.27 ಕೋಟಿ ರು.ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಹಾಗೆಯೇ ಶರತ್‌ಗೆ 1.93 ಕೋಟಿ ರು. ಹಾಗೂ ಪತ್ನಿಗೆ 21.60 ಲಕ್ಷ ರು. ಸಾಲವಿದೆ ಎಂದು ಉಲ್ಲೇಖಿಸಿದ್ದಾರೆ.
ಪ್ರಸ್ತುತ ಶರತ್ ಬಳಿ ಆರು ಲಕ್ಷ ರು. ನಗದು, ಪತ್ನಿ ಬಳಿ ಐದು ಲಕ್ಷ ರು. ನಗದಿದೆ. ಶರತ್ ಅವರು ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ 61 ಲಕ್ಷ ರು. ಹೊಂದಿದ್ದರೆ, ಅವರ ಪತ್ನಿಯ ಖಾತೆಯಲ್ಲಿ 82 ಸಾವಿರ ರು. ಇದೆ. ಶರತ್ ಅವರು ವಿವಿಧ ವ್ಯಕ್ತಿಗಳು, ಸಂಸ್ಥೆಗಳಿಗೆ 17.58 ಕೋಟಿ ರು. ಸಾಲ ನೀಡಿದ್ದರೆ, ಅವರ ಪತ್ನಿ 9.64 ಕೋಟಿ ರು. ಸಾಲ ನೀಡಿದ್ದಾರೆ.
ಶರತ್ ಅವರು 30.24 ಲಕ್ಷ ರು. ಮೌಲ್ಯದ ಫಾರ್ಚೂನರ್ ಕಾರು, 22 ಲಕ್ಷ ಮೌಲ್ಯದ ಇನೋವಾ ಕ್ರಿಸ್ಟಾಕಾರಿನ ಒಡೆಯರಾಗಿದ್ದಾರೆ. ಅವರ ಪತ್ನಿ 52 ಲಕ್ಷ ರು. ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರಿನ ಒಡತಿಯಾಗಿದ್ದಾರೆ. ಶರತ್ ಬಳಿ 40 ಲಕ್ಷ ಮೌಲ್ಯದ 550 ಗ್ರಾಂ ಬಂಗಾರ, 5 ಕೆ.ಜಿ. ಬೆಳ್ಳಿ ಇದ್ದರೆ, ಅವರ ಪತ್ನಿ ಬಳಿ 90 ಲಕ್ಷ ಮೌಲ್ಯದ 950 ಗ್ರಾಂ ಬಂಗಾರ, 5 ಕೆ.ಜಿ. ಬೆಳ್ಳಿ ಹಾಗೂ ವಜ್ರದ ಆಭರಣಗಳಿವೆ.
ಶರತ್ ಅವರು ಬೈಯಪ್ಪನಹಳ್ಳಿ, ತೆನೆಯೂರು, ತಿಮ್ಮಪ್ಪನಹಳ್ಳಿ ಗ್ರಾಮಗಳಲ್ಲಿ 23 ಕೋಟಿ ರು .ಮೌಲ್ಯದ ಒಟ್ಟು 16.36 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಅವರ ಪತ್ನಿ ಮಾಗಡಿ ತಾಲೂಕಿನ ನಾರಸಂದ್ರ ಗ್ರಾಮದಲ್ಲಿ 2.50 ಕೋಟಿ ರು. ಮೌಲ್ಯದ 3.08 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಅಂತೆಯೆ ಶರತ್ ಅವರು ಹಲಸೂರಿನ ಆರ್ಟಿಲರಿ ರಸ್ತೆ ಹಾಗೂ ಲಾಲ್‌ಬಾಗ್ ರಸ್ತೆಯಲ್ಲಿ 43 ಕೋಟಿ ರು. ಮೌಲ್ಯದ ಮೂರು ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. ಹೆಬ್ಬಾಳದಲ್ಲಿ 7 ಕೋಟಿ ರು. ಮೌಲ್ಯದ ಎಂಬೆಸಿ ಲೇಕ್ ಟೆರೇಸಸ್ ಫ್ಲಾಟ್ ಹಾಗೂ ಮಂಡೂರು ಗ್ರಾಮದಲ್ಲಿ 17 ಕೋಟಿ ರು. ಮೌಲ್ಯದ ಆರು ವಿಲ್ಲಾಗಳ ಮಾಲಿಕರಾಗಿದ್ದಾರೆ. ಪತ್ನಿಯ ಹೆಸರಿನಲ್ಲಿ ಯಾವುದೇ ವಾಣಿಜ್ಯ ಅಥವಾ ವಸತಿ ಕಟ್ಟಡಗಳಿಲ್ಲ ಎಂದು ಅಫಿಡೆವಿಟ್‌ನಲ್ಲಿ ಘೋಷಿಸಿದ್ದಾರೆ.