ಬೆಂಗಳೂರು[ಜ.25]: ‘ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಬೇಕೆನ್ನುವ ದಿನೇಶ್‌ ಗುಂಡೂರಾವ್‌ ಅವರೇ, ನಿಮ್ಮ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಎಷ್ಟುಸಂಸದರು, ಶಾಸಕರನ್ನು ಗೆಲ್ಲಿಸಿದ್ದೀರಿ? ಹೀನಾಯ ಸೋಲಿನ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿನಗೆ ನನ್ನ ಬಗ್ಗೆಯಾಗಲಿ, ಬಿಜೆಪಿ ಬಗ್ಗೆಯಾಗಲಿ ಮಾತನಾಡುವ ನೈತಿಕ ಹಕ್ಕಿಲ್ಲ’ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಉಪಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀರಿ. ಹಾಗೆಯೇ ವಿರೋಧ ಪಕ್ಷದ ನಾಯಕ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಉಳಿದಿವೆ. ಕಾಂಗ್ರೆಸ್‌ನಲ್ಲೇ ಹತ್ತಾರು ಗುಂಪುಗಳಾಗಿವೆ. ಮೊದಲು ಅವನ್ನು ಸರಿಪಡಿಸಿಕೊಳ್ಳಿ. ಬಿಜೆಪಿಯಿಂದ ನನ್ನನ್ನು ಉಚ್ಚಾಟನೆ ಮಾಡಬೇಕೆಂದು ಹೇಳಿದ್ದೀರಿ. ವಿವಿಧ ದಂಧೆಗಳಲ್ಲಿ ತೊಡಗಿದ ಆರೋಪ ಇರುವ ಶಾಸಕ ಜಮೀರ್‌ ಅಹಮ್ಮದ್‌ ಖಾನ್‌ ಹಾಗೂ ವಿವಾದಾತ್ಮಕ ಹೇಳಿಕೆ ಆರೋಪಕ್ಕೆ ಒಳಗಾಗಿರುವ ಶಾಸಕ ಯು.ಟಿ.ಖಾದರ್‌ ಅವರನ್ನು ಮೊದಲು ಕಾಂಗ್ರೆಸ್‌ನಿಂದ ಉಚ್ಚಾಟಿಸಿ ಎಂದರು.

‘ಜಮೀರ್‌ ಚಿಲ್ಲರೆ ಗಿರಾಕಿ’

ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಒಬ್ಬ ಚಿಲ್ಲರೆ ಗಿರಾಕಿ. ಪುಟ್ಬಾತ್‌ನಲ್ಲಿ ಇದ್ದವನು. ಚಾಮರಾಜಪೇಟೆ ದಂಧೆಗಳಲ್ಲಿ ತೊಡಗಿದ್ದವನು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಏಕವಚನದಲ್ಲಿ ಹರಿಹಾಯ್ದಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ಜಮೀರ್‌ ಕರೆತಂದು ಮಂತ್ರಿ ಮಾಡಿದರು. ಆದರೆ, ದೇವೇಗೌಡರ ಕುಟುಂಬಕ್ಕೂ ನಿಷ್ಠರಾಗಿಲ್ಲ. ಜಮೀರ್‌ ಏನೆಂದು ದೇವೇಗೌಡರಿಗೆ ಗೊತ್ತಿದೆ. ಅಣ್ಣ, ಕುಮಾರಣ್ಣ ಅಂದುಕೊಂಡು ಏನೇನು ಮಾಡಿದ್ದಾನೆ ಎಂಬುದು ಗೊತ್ತಿದೆ. ಅಂತಹ ವ್ಯಕ್ತಿ ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದರೆ ನಾನೂ ಅದೇ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು