ಬೆಂಗಳೂರು[ಜ.25]: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಇಸ್ಪೀಟ್‌ ಎಲೆಯಲ್ಲಿರುವ ಜೋಕರ್‌ನಂತೆ. ಹೀಗಾಗಿ ಜೋಕರ್‌ ಅನ್ನು ಯಾರಾದರೂ ಮಂತ್ರಿ ಮಾಡುತ್ತಾರಾ? ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಪ್ರಶ್ನೆ ಮಾಡಿದ್ದಾರೆ. ಗೋರಿಪಾಳ್ಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯ ಬಿಜೆಪಿಗೂ ಪ್ರಾಮಾಣಿಕವಾಗಿ ನಡೆದುಕೊಂಡವರಲ್ಲ. ಬಿಜೆಪಿ ಸರ್ಕಾರ ಇದ್ದಾಗ ಗೋವಾದಲ್ಲಿ ಹೋಗಿ ಕುಳಿತುಕೊಂಡವರು. ಅವರೊಬ್ಬ ದೊಡ್ಡ ಜೋಕರ್‌ ಆಗಿರುವುದರಿಂದಲೇ ಅವರಿಗೆ ಮಂತ್ರಿ ಸ್ಥಾನ ನೀಡಿಲ್ಲ ಎಂದು ಹೇಳಿದರು.

ನಾನು ಖೋಟಾ ನೋಟು ಪ್ರಿಂಟ್‌ ಮಾಡುತ್ತಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಗೋವಾದಲ್ಲಿ ಇದ್ದಾಗ ಅದೇ ಖೋಟಾ ನೋಟು ನಿಮಗೆ ನಾನು ಕೊಟ್ಟಿರಬಹುದು. ಈಗ ಯಡಿಯೂರಪ್ಪ ಚುನಾವಣೆ ಮಾಡಿದಾಗ ನಿಮಗೆ 30-40 ಕೋಟಿ ರು. ಎಲ್ಲಿಂದ ಬಂತು? ನೀವು ಖೋಟಾ ನೋಟು ಪ್ರಿಂಟ್‌ ಮಾಡಿದ್ರಾ? ಹಿಂದೂ-ಮುಸ್ಲಿಮರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದೇವೆ. ಅನಗತ್ಯವಾಗಿ ಎರಡು ಧರ್ಮಗಳ ನಡುವೆ ರೇಣುಕಾಚಾರ್ಯ ವಿಷ ಬಿತ್ತಬಾರದು ಎಂದು ತರಾಟೆಗೆ ತೆಗೆದುಕೊಂಡರು.

ನರ್ಸ್‌ ಜಯಲಕ್ಷ್ಮಿಗೆ ರೇಣು ಬಗ್ಗೆ ಗೊತ್ತು:

ರೇಣುಕಾಚಾರ್ಯ ಎಂಥವನು ಎಂದು ನರ್ಸ್‌ ಜಯಲಕ್ಷ್ಮೇಗೆ ಬಹಳ ಚೆನ್ನಾಗಿ ಗೊತ್ತಿದೆ. ಏಕೆಂದರೆ, ಚುಮ್ಮಾ ಚುಮ್ಮಾ ಎಂದು ಬಹಳ ಹತ್ತಿರದಿಂದ ನೋಡಿದ್ದಾರೆ. ಇದನ್ನೆಲ್ಲಾ ರೇಣುಕಾಚಾರ್ಯ ಇಲ್ಲಿಗೇ ಬಿಟ್ಟು ಬಿಡಬೇಕು. ಅವರು ಮುಂದುವರೆಸಿದರೆ ನನಗೂ ಮಾತನಾಡುವುದು ಗೊತ್ತಿದೆ ಎಂದು ಎಚ್ಚರಿಸಿದರು.