ದುರದೃಷ್ಟಕರ ಘಟನೆ ನಡೆಯಬಾರದಿತ್ತು. ಈ ಅಮಾನುಷ ಕೃತ್ಯವನ್ನು ಒಂದು‌ ಊರಿನ ಕೆಲ‌ ಜನ‌ ಮಾಡಿದ್ದಾರೆ. ಈ ಬಗ್ಗೆ ವಿಪಕ್ಷದವರು ಸರ್ಕಾರವನ್ನು ದೂಷಿಸುವುದು ಸರಿಯಲ್ಲ. ಘಟನೆ ತಡರಾತ್ರಿ ನಡೆದಿದ್ದು, ಊರಿನ‌ ಜನ ತಕ್ಷಣ 112 ಸಹಾಯವಾಣಿಗೆ ಕರೆ‌ಮಾಡಿ ಮಾಹಿತಿ‌ ನೀಡಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಹೋಗಿ ಮಹಿಳೆಯನ್ನು ರಕ್ಷಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ‌. ಸರ್ಕಾರ ಗಂಭೀರವಾಗಿ ಪರಿಗಣಿಸಿ ಎಲ್ಲಾ ಕ್ರಮ ಕೈಗೊಂಡಿದೆ ಎಂದು ಹೇಳಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ 

ಬೆಂಗಳೂರು(ಡಿ.20):  ಬೆಳಗಾವಿಯಲ್ಲಿ ಮಹಿಳೆ ಮೇಲೆ ನಡೆದಿರುವ ಅಮಾನವೀಯ ಘಟನೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸಿದೆ. ಬಿಜೆಪಿಯವರಿಗೆ ಎಂತಹ ವಿಚಾರಗಳ ಬಗ್ಗೆ ಪ್ರತಿಭಟನೆ ಮಾಡಬೇಕು ಎಂಬುದೂ ಅರಿವಿಲ್ಲ. ಇದರಲ್ಲಿ ಸರ್ಕಾರದ ಪಾತ್ರ ಏನಿದೆ ಎಂದು ಉತ್ತರಿಸಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರದೃಷ್ಟಕರ ಘಟನೆ ನಡೆಯಬಾರದಿತ್ತು. ಈ ಅಮಾನುಷ ಕೃತ್ಯವನ್ನು ಒಂದು‌ ಊರಿನ ಕೆಲ‌ ಜನ‌ ಮಾಡಿದ್ದಾರೆ. ಈ ಬಗ್ಗೆ ವಿಪಕ್ಷದವರು ಸರ್ಕಾರವನ್ನು ದೂಷಿಸುವುದು ಸರಿಯಲ್ಲ. ಘಟನೆ ತಡರಾತ್ರಿ ನಡೆದಿದ್ದು, ಊರಿನ‌ ಜನ ತಕ್ಷಣ 112 ಸಹಾಯವಾಣಿಗೆ ಕರೆ‌ಮಾಡಿ ಮಾಹಿತಿ‌ ನೀಡಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಹೋಗಿ ಮಹಿಳೆಯನ್ನು ರಕ್ಷಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ‌. ಸರ್ಕಾರ ಗಂಭೀರವಾಗಿ ಪರಿಗಣಿಸಿ ಎಲ್ಲಾ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ನಿಗಮ-ಮಂಡಳಿ ನೇಮಕ ಪಟ್ಟಿ ಅಂತಿಮ ಮಾಡಿಸಿಕೊಂಡು ಬರುತ್ತೇವೆ: ಡಿಸಿಎಂ ಡಿಕೆ ಶಿವಕುಮಾರ

ಸಂತ್ರಸ್ತೆಗೆ 2 ಎಕರೆ ಜಮೀನು ಪರಿಹಾರ:

ಊರು ಬಿಟ್ಟು ಹೋಗಿದ್ದ ಯುವಕ-ಯುವತಿ ಬೆಳಗಾವಿ ಪೊಲೀಸ್ ಆಯುಕ್ತರ ಮುಂದೆ ಹಾಜರಾಗಿ ರಕ್ಷಣೆ ಕೋರಿದ್ದು, ರಕ್ಷಣೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯುವಕ-ಯುವತಿಗೆ ಏನೆಲ್ಲ ರಕ್ಷಣೆ ಒದಗಿಸಬೇಕು ಎಂಬುದರ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಸಂತ್ರಸ್ತೆಗೆ ಪರಿಹಾರವಾಗಿ 2 ಎಕರೆ ಜಮೀನು ಮಂಜೂರು ಮಾಡಲು ಕ್ರಮ ವಹಿಸಲಾಗಿದೆ. ಇಷ್ಟೆಲ್ಲ ಕೆಲಸ ಮಾಡಿದ್ದರೂ ಪ್ರಕರಣವನ್ನು ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ ಎನ್ನುವುದು ಸರಿಯಲ್ಲ ಎಂದರು.