ಈ ಬಿಕ್ಕಟ್ಟಿನಿಂದ ಬಿಜೆಪಿಗರು, ಸಂಘ ಪರಿವಾರಕ್ಕೆ ಇಕ್ಕಟ್ಟು, ಪುತ್ತೂರಿನಲ್ಲಿ ಪುತ್ತಿಲ ಬಂಡಾಯದಿಂದ ಹೊತ್ತಿಕೊಂಡ ಕಿಡಿ, ಈಗ ಈ ಬಿಕ್ಕಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಧಗಧಗ, ಇದನ್ನು ಈಗಲೇ ಶಮನ ಮಾಡದಿದ್ದರೆ ಪಕ್ಷಕ್ಕೆ ಕುತ್ತು: ಆತಂಕ

ಮಂಗಳೂರು(ಮೇ.16):  ವಿಧಾನಸಭಾ ಚುನಾವಣೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವ ವರ್ಸಸ್‌ ಬಿಜೆಪಿ ಎಂಬ ವಾತಾವರಣ ನಿರ್ಮಾಣವಾಗುತ್ತಿರುವುದು ಪಕ್ಷದ ನಾಯಕರು ಹಾಗೂ ಸಂಘ ಪರಿವಾರ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸತೊಡಗಿದೆ.

ಪುತ್ತೂರಿನಿಂದ ಆರಂಭವಾದ ಈ ಬಿಕ್ಕಟ್ಟು ಸಾಮಾಜಿಕ ಜಾಲತಾಣದ ಮೂಲಕ ತೀವ್ರಗೊಂಡಿದ್ದು, ಈಗಲೇ ಶಮನಗೊಳ್ಳದಿದ್ದರೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಿಸಬಹುದು ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದೆ.
ದ.ಕ. ಜಿಲ್ಲೆಯ ಪುತ್ತೂರಲ್ಲಿ ಬಿಜೆಪಿ ನಾಯಕತ್ವದ ವಿರುದ್ಧವೇ ತೊಡೆತಟ್ಟಿ ಪಕ್ಷೇತರನಾಗಿ ಸ್ಪರ್ಧಿಸಿದ ಅರುಣ್‌ ಕುಮಾರ್‌ ಪುತ್ತಿಲ ಅವರು ದಾಖಲೆ ಮತಗಳನ್ನು ಪಡೆದಿರುವುದು ಬಿಜೆಪಿ ಹಾಗೂ ಸಂಘ ಪರಿವಾರವನ್ನು ಕಂಗೆಡುವಂತೆ ಮಾಡಿದೆ. ಬಿಜೆಪಿ ಹಾಗೂ ಸಂಘ ಪರಿವಾರ ಪುತ್ತೂರಲ್ಲಿ ಇಡೀ ಶಕ್ತಿ ಹಾಕಿ ಪ್ರಚಾರ ಕಾರ್ಯ ನಡೆಸಿದರೂ ಪುತ್ತಿಲ ಅವರನ್ನು ಮತ ಸೆಳೆಯದಂತೆ ಕಟ್ಟಿ ಹಾಕಲು ಸಾಧ್ಯವಾಗಿಲ್ಲ. ಇದನ್ನು ಹೀಗೆಯೇ ಮುಂದುವರಿಯಲು ಬಿಟ್ಟರೆ ಭವಿಷ್ಯದಲ್ಲಿ ಸಂಘಟನೆ ಹಾಗೂ ಪಕ್ಷದ ಅಸ್ತಿತ್ವಕ್ಕೆ ಬಲವಾದ ಏಟು ಬೀಳಬಹುದು. ಮಂಬರುವ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ಲೋಕಸಭಾ ಚುನಾವಣೆಗೆ ಇದುವೇ ಬಿಜೆಪಿ ಗೆಲವಿಗೆ ತೊಡಕಾಗಬಹುದು ಎಂಬ ಚಿಂತೆ ಪಕ್ಷದ ನಾಯಕರನ್ನು ಆವರಿಸಿಕೊಂಡಿದೆ.

ಪುತ್ತೂರಿನಲ್ಲಿ ನಳಿನ್-ಡಿವಿಎಸ್‌ಗೆ ಶ್ರದ್ಧಾಂಜಲಿ ಬ್ಯಾನರ್: ಚಪ್ಪಲಿ ಹಾರ ಹಾಕಿ ಆಕ್ರೋಶ!

ಪುತ್ತೂರಲ್ಲಿ ಕಟೀಲ್‌, ಡಿವಿಎಸ್‌ ವಿರುದ್ಧ ಬ್ಯಾನರ್‌:

ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರೇ ಬಿಜೆಪಿ ಸೋಲಿಗೆ ಕಾರಣ ಎಂಬ ಒಕ್ಕಣೆ ಇರುವ ಬ್ಯಾನರ್‌ ಪುತ್ತೂರು ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣದ ಬಳಿ ಸೋಮವಾರ ಬೆಳಗ್ಗೆ ಪ್ರತ್ಯಕ್ಷವಾಗಿದ್ದು, ಅದಕ್ಕೆ ಚಪ್ಪಲಿ ಹಾರ ಹಾಕಲಾಗಿತ್ತು. ಭಾನುವಾರ ತಡರಾತ್ರಿ ಯಾರೋ ಈ ಬ್ಯಾನರ್‌ ಅಳವಡಿಸಿದ್ದು, ಮುಂಜಾನೆ ಪೊಲೀಸರು ನಗರಸಭೆ ಸಿಬ್ಬಂದಿ ಮೂಲಕ ಅದನ್ನು ತೆರವುಗೊಳಿಸಿದರು.

ಬ್ಯಾನರ್‌ನಲ್ಲಿ ‘ಬಿಜೆಪಿ ಹೀನಾಯವಾಗಿ ಸೋಲಲು ನೀವೇ ಕಾರಣ. ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆಯಲಾಗಿದೆ. ಬ್ಯಾನರಿನ ಎಡ ಮತ್ತು ಬಲ ಬದಿಗಳಲ್ಲಿ ಡಿ.ವಿ. ಸದಾನಂದ ಗೌಡ ಮತ್ತು ನಳಿನ್‌ ಕುಮಾರ್‌ ಕಟೀಲ್‌ ಅವರ ಫೋಟೋಗಳನ್ನು ಹಾಕಲಾಗಿದೆ. ಕೆಳಗಡೆ ‘ನೊಂದ ಹಿಂದೂ ಕಾರ್ಯಕರ್ತರು’ ಎಂದು ಬರೆಯಲಾಗಿದೆ. ಜೊತೆಗೆ ಚಪ್ಪಲಿ ಹಾರ ಹಾಕಲಾಗಿತ್ತು.

ಮರುಕಳಿಸಿದ ನೆಟ್ಟಾರು ಘಟನೆಯ ಆಕ್ರೋಶ?

ಮಂಗಳೂರು: ಪ್ರವೀಣ್‌ ನೆಟ್ಟಾರು ಹತ್ಯೆ ಬಳಿಕ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಬೆಳ್ಳಾರೆಯಲ್ಲಿ ಕಂಡುಬಂದ ಬಿಜೆಪಿ ನಾಯಕರ ವಿರುದ್ಧದ ಕಾರ್ಯಕರ್ತರ ಆಕ್ರೋಶ ಇನ್ನೂ ತಣಿದಿಲ್ಲವೇ? ಪುತ್ತೂರಿನಲ್ಲಿ ಪಕ್ಷೇತರ ಸ್ಪರ್ಧಿಗೆ ವ್ಯಕ್ತವಾದ ಅವ್ಯಕ್ತ ಬೆಂಬಲ, ಬಿಜೆಪಿ ಅಭ್ಯರ್ಥಿಗೆ ಚುನಾವಣೆಯಲ್ಲಿ ನೀಡಿದ ಒಳಏಟು ಇಂಥದ್ದೊಂದು ಸಾಧ್ಯತೆಯ ಬಗ್ಗೆ ಚರ್ಚಿಸುವಂತೆ ಮಾಡಿದೆ. ಪುತ್ತಿಲರನ್ನು ಹಿಂದೂ ಸಂಘಟನೆಯ ನಾಯಕ ಎಂದು ಕಾರ್ಯಕರ್ತರೇ ಬಿಂಬಿಸಿರುವುದು, ಸಂಘಪರಿವಾರ ಮಾತ್ರವಲ್ಲ ಬಿಜೆಪಿಯಿಂದಲೂ ಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿರುವುದು ಈ ಅನುಮಾನಕ್ಕೆ ಪುಷ್ಟಿನೀಡಿದೆ. ತತ್ವ, ಸಿದ್ಧಾಂತಕ್ಕೆ ಬದ್ಧವಾಗಿರುವ ಬಿಜೆಪಿಯಲ್ಲೇ ಕಾರ್ಯಕರ್ತರು ಪಕ್ಷೇತರಗೆ ನೀಡಿದ ಗುಪ್ತ ಬೆಂಬಲದ ಈ ನಡವಳಿಕೆ ಸ್ವತಃ ಬಿಜೆಪಿ ನಾಯಕರು ಆತ್ಮವಿಮರ್ಶೆಗೆ ಒಳಗಾಗುವಂತೆ ಮಾಡಿದೆ.