ಹಿಮಾಚಲ ಪ್ರದೇಶದ ಸೆರಾಜ್ ಕ್ಷೇತ್ರದಲ್ಲಿ ಗೆಲುವು ಕಂಡ ಕರ್ನಾಟಕದ ಅಳಿಯ ಜೈರಾಮ್ ಠಾಕೂರ್!
ಹಿಮಾಚಲ ಪ್ರದೇಶದಲ್ಲಿ ಗೆಲುವಿಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ನಡೆಯುತ್ತಿದೆ. ಈ ನಡುವೆ ಕರ್ನಾಟಕದ ಅಳಿಯ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅಂದಾಜು 20 ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಶಿಮ್ಲಾ (ಡಿ.8): ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿವೆ. ಮುನ್ನಡೆಯಲ್ಲಿ ಹಾವು-ಏಣಿ ಆಟ ನಡೆಯುತ್ತಿದ್ದು, ಗೆಲುವು ಯಾರದಾಗಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಪ್ರಸ್ತುತ ಹಿಮಾಚಲದಲ್ಲಿ ಕಾಂಗ್ರೆಸ್ 30 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 35 ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದೆ. ಇತರರು ಮೂರು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಈ ನಡುವೆ ಕರ್ನಾಟಕದ ಅಳಿಯ ಹಾಗೂ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿ ಜೈರಾಮ್ ಠಾಕೂರ್ ಬರೋಬ್ಬರಿ 20 ಸಾವಿರ ಮತಗಳ ಅಂತರದಿಂದ ಸೆರಾಜ್ ಕ್ಷೇತ್ರದಿಂದ ಗೆಲುವು ಕಂಡಿದ್ದಾರೆ. ಹಿಮಾಚಲ ಪ್ರದೇಶ ಹಾಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ಪಾಲಿಗೆ ಇದು ಭಾರಿ ಗೆಲುವುವಾಗಿದೆ. ಇತ್ತೀಚಿನ ವರದಿಯ ಪ್ರಕಾರ, ಠಾಕೂರ್ ಅವರು ಸೆರಾಜ್ ಕ್ಷೇತ್ರದಲ್ಲಿ 20,000 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ, ಗೆಲುವಿನ ವಿಶ್ವಾಸದಲ್ಲಿಯೇ ಗುರುವಾರ ಪತ್ನಿ ಸಾಧನಾ ಠಾಕೂರ್ ಹಾಗೂ ಮಕ್ಕಳೊಂದಿಗೆ ಅವರು ದೇವಸ್ಥಾನ ಭೇಟಿ ಮಾಡಿ ಪೂಜೆ ಸಲ್ಲಿಸಿದ್ದರು.
ಜೈರಾಮ್ ಠಾಕೂರ್ ಪತ್ನಿ (Himachal Pradesh Chief Minister Jairam Thakur Wife sadhana Thakur) ಸಾಧನಾ ಶಿವಮೊಗ್ಗ ಮೂಲದವರು: 57 ವರ್ಷದ ಜೈರಾಮ್ ಠಾಕೂರ್ ಅವರ ಪತ್ನಿ ಸಾಧನಾ ಠಾಕೂರ್ ಶಿವಮೊಗ್ಗ ಮೂಲದವರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಚಂದ್ರಿಕಾ ಠಾಕೂರ್ ಹಾಗೂ ಪ್ರಿಯಾಂಕಾ ಠಾಕೂರ್. ವೃತ್ತಿಯಲ್ಲಿ ವೈದ್ಯೆಯಾಗಿರುವ ಸಾಧನಾ ಠಾಕೂರ್ ಅವರ ಮೂಲ ಹೆಸರು ಸಾಧನಾ ರಾವ್. ಕೆಲ ಕಾಲ ಬೆಂಗಳೂರಿನಲ್ಲಿಯೂ ಅವರು ವಾಸವಿದ್ದರು. ಸ್ಪಷ್ಟವಾಗಿ ಕನ್ನಡದಲ್ಲಿಯೂ ಮಾತನಾಡುವ ಸಾಧನಾ ಠಾಕೂರ್, ಬಾಲ್ಯದಲ್ಲಿಯೇ ಜೈಪುರಕ್ಕೆ ಶಿಫ್ಟ್ ಆಗಿದ್ದರು. ತಂದೆ ಶ್ರೀನಾಥ್ ರಾವ್ ಆರೆಸ್ಸೆಸ್ ಮೂಲದವರು. ಜೈಪುರದ ಜೋತ್ವಾರಾದಲ್ಲಿ ಮದುವೆಯಾಗುವವರೆಗಿನ ದಿನಗಳನ್ನು ಕಳೆದಿದ್ದ ಸಾಧಾನಾ ಠಾಕೂರ್, ಸವಾಯ್ ಮಾನ್ ಸಿಂಗ್ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ ಪದವಿಯನ್ನು ಪೂರೈಸಿದ್ದರು.
ವೈದ್ಯಕೀಯ ವಿದ್ಯಾರ್ಥಿಯಾಗಿದ್ದರೂ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ಸಕ್ರಿಯ ಸದಸ್ಯರಾಗಿದ್ದ ಸಾಧನಾ ರಾವ್ ಮದುವೆಯಾದ ಬಳಿಕ ಸಾಧನಾ ಠಾಕೂರ್ ಆಗಿ ಬದಲಾದರು. ಜಮ್ಮು ಕಾಶ್ಮೀರದಲ್ಲಿ ಪೂರ್ಣ ಪ್ರಮಾಣದ ಎಬಿವಿಪಿ ಕಾರ್ಯರ್ತೆಯಾಗಿದ್ದಾಗ ಜೈರಾಮ್ ಠಾಕೂರ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಅಲ್ಲಿಂದ ಆರಂಭವಾದ ಇವರ ಸ್ನೇಹ ಬಳಿಕ ಪ್ರೇಮಕ್ಕೆ ತಿರುಗಿ ವಿವಾಹವಾಗಿದ್ದರು.
ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವುದು ಮಾತ್ರವಲ್ಲದೆ, ವೈದ್ಯಕೀಯ ಸೇವೆಗಳು ಹಾಗೂ ರಕ್ತದಾನ ಶಿಬಿರಗಳನ್ನು ಸಾಧನಾ ಠಾಕೂರ್ ಹಿಮಾಚಲ ಪ್ರದೇಶದಲ್ಲಿ ಆಯೋಜನೆ ಮಾಡುತ್ತಿರುತ್ತಾರೆ. ಅದರೊಂದಿಗೆ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಅವರು ಆಯೋಜನೆ ಮಾಡಿದ್ದಾರೆ.
Gujarat, HP Election Results 2022 Live: HP ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಜಯರಾಮ್ ಠಾಕೂರ್‌ಗೆ ಜಯ
ಇನ್ನು ಜೈರಾಮ್ ಠಾಕೂರ್ ಅವರ ಇಬ್ಬರು ಪುತ್ರಿಯರು ಕೂಡ ಹಿಮಾಚಲ ಪ್ರದೇಶದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರ. ಹಿರಿಯ ಪುತ್ರಿ ತಾಂಡಾದ ಡಾ.ರಾಜೇಂದ್ರ ಪ್ರಸಾದ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದರೆ, ಕಿರಿಯ ಮಗಳು 2018ರಲ್ಲಿ ನೇರ್ ಚೌಕ್‌ನಲ್ಲಿರುವ ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಆಯ್ಕೆಯಾಗಿದ್ದರು.
Gujarat Election Result 2022: ತನ್ನ ಅತ್ಯಂತ ಕಳಪೆ ನಿರ್ವಹಣೆಯತ್ತ ಕಾಂಗ್ರೆಸ್?
ಈಗಲೂ ನನ್ನ ಸಂಬಂಧಿಕರು ಶಿವಮೊಗ್ಗದಲ್ಲಿಯೇ ಇದ್ದಾರೆ. ಇನ್ನೂ ಕೆಲವು ಸಂಬಂಧಿಕರು ಬೆಂಗಳೂರಿನಲ್ಲಿ ಇದ್ದಾರೆ. ಎಬಿವಿಪಿಯಿಂದಾಗಿ ನಾವು ಮೊದಲ ಬಾರಿಗೆ ಪರಿಚಿತರಾಗಿದ್ದೆವು. ನಾವಿಬ್ಬರು ಸ್ನೇಹಿತರಾಗಿದ್ದೆವು. ಬಳಿಕ ಕುಟುಂಬದವರ ಅನುಮತಿ ಪಡೆದು ವಿವಾಹವಾಗಿದ್ದೆವು. ಬೆಂಗಳೂರಿಗಾಗಲಿ, ಶಿವಮೊಗ್ಗಕ್ಕಾಗಿ ಮೊದಲಿನಷ್ಟು ಬರೋದಿಲ್ಲ. ತೀರಾ ಅಪರೂಪವಾಗಿದೆ ಎಂದು ಜೈರಾಮ್ ಠಾಕೂರ್ ಮೊದಲ ಬಾರಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅವರು ಪ್ರತಿಕ್ರಿಯೆ ನೀಡಿದ್ದರು.