ನಾನಾ ಆಯಾಮ ಪಡೆದುಕೊಳ್ಳುತ್ತಿರುವ ಹಿಜಾಬ್ ವಿವಾದ, ಹಿಂದೂ ಸಂಘಟನೆಗಳಿಂದ ಮಹತ್ವದ ಕರೆ
* ನಾನಾ ಆಯಾಮ ಪಡೆದುಕೊಳ್ಳುತ್ತಿರುವ ಹಿಜಾಬ್ ವಿವಾದ
* ಹಿಂದೂ ಸಂಘಟನೆಗಳಿಂದ ಮಹತ್ವದ ಕರೆ
* ಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ
ಕರಾವಳಿ ಜಿಲ್ಲೆ ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ (Hijab Row) ನಾನಾ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ತೀರ್ಪಿನ ಬಗ್ಗೆ ಅಸಮಾಧಾನ ಸೂಚಿಸಿ ಮುಸ್ಲೀಂ (Muslim) ವ್ಯಾಪಾರಿಗಳು ವಹಿವಾಟು ಸ್ಥಗಿತಗೊಳಿಸಿದ ಬೆನ್ನಲ್ಲೇ, ಹಿಂದೂ ದೇವಾಲಯಗಳ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳು (Hindu Organisations )ಕರೆ ನೀಡಿವೆ, ಇಂತಹ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಕರಾವಳಿ ಪ್ರವಾಸದ ವೇಳೆ ಒತ್ತಾಯಿಸಿದ್ದಾರೆ.
ಶಾಲೆಯ ಆವರಣ ಗೋಡೆಯ ಒಳಗೆ ಸೀಮಿತವಾಗಿದ್ದ ಹಿಜಾಬ್ ವಿವಾದ, ಇದೀಗ ಹೈಕೋರ್ಟ್ ಅಂಗಳ ದಾಟಿ ಸುಪ್ರೀಂ ಮೆಟ್ಟಿಲೇರಿದೆ. ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಅಸಮಾಧಾನ ಹೊರ ಹಾಕಲು ಮುಸಲ್ಮಾನ ವ್ಯಾಪಾರಿಗಳು ಮುರ್ಚ್ 17 ರಂದು ಒಂದು ದಿನದ ಬಂದ್ ಕೂಡಾ ನಡೆಸಿದ್ದಾರೆ. ಬಂದ್ ನಡೆದ ಪರಿಣಾಮ ಈಗ ವಿವಾದ ಮತ್ತೊಂದು ಆಯಾಮ ಪಡೆದಿದೆ.
Karnataka bandh: ಉಡುಪಿಯಲ್ಲಿ ಅಂಗಡಿ-ಮುಂಗಟ್ಟು ಮುಚ್ಚಿದ ಮುಸ್ಲಿಂ ವ್ಯಾಪಾರಿಗಳು
ಹೇಳಿಕೇಳಿ ಉಡುಪಿ ಜಿಲ್ಲೆಯನ್ನು ದೇವಾಲಯಗಳ ನಗರಿ ಎಂದು ಕರೆಯುತ್ತಾರೆ. ಮಾರ್ಚ್, ಏಪ್ರಿಲ್ ತಿಂಗಳು ಬಂದರೆ ಪ್ರತಿದಿನ ಇಲ್ಲಿ ಯಾವುದಾದರೊಂದು ದೇವಸ್ಥಾನಗಳಲ್ಲಿ ಉತ್ಸವ, ಜಾತ್ರೆ ನಡೆಯುವುದು ಮಾಮೂಲು. ಹಿಂದೂ ದೇವಾಲಯಗಳ ಉತ್ಸವದಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಅವಕಾಶ ನೀಡಕೂಡದು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಮುಂದಿನವಾರ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಲಕ್ಷಾಂತರ ಜನರು ಸೇರುವ ಮಾರಿಪೂಜೆ ನಡೆಯುತ್ತೆ. ಮಾರಿ ಪೂಜೆ ವೇಳೆ ಸಾವಿರಾರು ವ್ಯಾಪಾರಿಗಳು ಭಾಗವಹಿಸುತ್ತಾರೆ. ಈ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ. ಆದರೆ ಈ ಬಾರಿ ಹೈಕೋರ್ಟ್ ತೀರ್ಪನ್ನು ವಿರೋಧಿಸಿದ ಕಾರಣಕ್ಕೆ ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಯಲ್ಲಿ ಅವಕಾಶ ನೀಡಕೂಡದು ಎಂದು ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ. ಈ ಕುರಿತು ಆಡಳಿತ ಮಂಡಳಿಗೆ ಮನವಿಯನ್ನು ಕೂಡ ನೀಡಲಾಗಿದೆ.
ಉತ್ಸವದ ಸಲುವಾಗಿ ನಡೆಯುವ ಮಳಿಗೆಗಳ ಹರಾಜು ಪ್ರಕ್ರಿಯೆಯಿಂದ ಮುಸಲ್ಮಾನ ವ್ಯಾಪಾರಿಗಳನ್ನು ಹೊರಗಿಡುವಂತೆ ಒತ್ತಾಯಿಸಲಾಗಿತ್ತು. ಹೂವು, ಹಣ್ಣು ಕೋಳಿ,ಕುರಿ ವ್ಯಾಪಾರಕ್ಕೆ ಹಿಂದೂಯೇತರಿಗೆ ಅವಕಾಶ ನೀಡದಿರಲು ಆಡಳಿತ ಮಂಡಳಿ ನಿರ್ಧರಿಸಿದೆ.ಬಂದ್ ನಡೆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಅಭಿಯಾನ ನಡೆದಿತ್ತು. ಒಂದು ದಿನ ಬಂದ್ ಆದ ಅಂಗಡಿಗಳು ಶಾಶ್ವತವಾಗಿ ಮುಚ್ಚುವಂತೆ ನೋಡಿಕೊಳ್ಳಬೇಕು ಎಂದು ಹಿಂದೂ ಕಾರ್ಯಕರ್ತರು ಕರೆ ನೀಡಿದ್ದರು.
ಮುಸ್ಲಿಂ ವ್ಯಾಪಾರಿಗಳನ್ಬು ಬಹಿಷ್ಕರಿಸುವ ನಡೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕಟುವಾಗಿ ಖಂಡಿಸಿದ್ದಾರೆ. ಉಡುಪಿ ಪ್ರವಾಸದಲ್ಲಿದ್ದ ಮಾಜಿ ಸಿಎಂ ಮಾತನಾಡಿ, ಸ್ವತಂತ್ರ ದೇಶದಲ್ಲಿ ಯಾವುದೇ ವ್ಯಕ್ತಿಗೆ ವ್ಯಾಪಾರ ನಡೆಸುವುದನ್ನು ತಡೆಯಲು ಸಾಧ್ಯವಿಲ್ಲ. ವ್ಯಾಪಾರ ನಡೆಸುವುದು ಯಾರದ್ದೋ ಮನೆ ವ್ಯವಹಾರವಲ್ಲ, ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತರಗತಿಯ ನಾಲ್ಕು ಗೋಡೆಗಳೊಳಗೆ ಮುಗಿಯಬೇಕಿದ್ದ ವಿವಾದವೊಂದು, ಕರಾವಳಿ ಜಿಲ್ಲೆಗಳಲ್ಲಿ ಧರ್ಮ ಸಂಘರ್ಷವನ್ನೇ ಹುಟ್ಟುಹಾಕಿದೆ. ಇನ್ನು ಮುಂದೆ ಪ್ರತಿದಿನ ಒಂದಿಲ್ಲೊಂದು ಕಡೆ ಜಾತ್ರೆ ನಡೆಯಲಿದ್ದು, ಇದೇ ರೀತಿ ವ್ಯಾಪಾರಿಗಳ ಮೇಲೆ ಬಹಿಷ್ಕಾರ ಮುಂದುವರಿದರೆ, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಸಂಘರ್ಷ ತಪ್ಪಿದ್ದಲ್ಲ.
ಕೆಲ ಮುಸಲ್ಮಾನರ ಅಂಗಡಿಗಳು ತೆರೆದಿದ್ದವು. ಭಾರತೀಯ ಜನತಾ ಪಕ್ಷದ ಜೊತೆಗೆ ಗುರುತಿಸಿಕೊಂಡಿರುವ ಕೆಲವು ಮುಸ್ಲಿಂ ನಾಯಕರು ಎಂದಿನಂತೆ ವ್ಯಾಪಾರ-ವಹಿವಾಟು ನಡೆಸಿದರು. ಖಾಸಗಿ ಬಸ್ ನಡೆಸುವ ಮುಸ್ಲಿಂ ಮಾಲಕರಿಗೆ ಕೂಡ ಬಂದ್ ಗೆ ಬೆಂಬಲ ವ್ಯಕ್ತಪಡಿಸುವಂತೆ ಕರೆ ನೀಡಲಾಗಿತ್ತು. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಮುಸ್ಲಿಂ ಮಾಲಕತ್ವದ ಖಾಸಗಿ ಬಸ್ಸುಗಳು ಕರಾವಳಿ ಜಿಲ್ಲೆಗಳಲ್ಲಿ ಎಗ್ಗಿಲ್ಲದೆ ಓಡಾಡಿದವು. ಈ ಮೂಲಕ ಬಂದ್ ಗಿಂತಲೂ ಸಾರ್ವಜನಿಕರ ಹಿತದೃಷ್ಟಿ ಮುಖ್ಯ ಎಂದು ಸಾರಿದವು.