ರಾಯಚೂರು, (ನ.01): ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪದೇ ಪದೇ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಗುಡುಗುತ್ತಿದ್ದಾರೆ. ಸಿಎಂ ಬದಲಾವಣೆ ಮಾತುಗಳನ್ನಾಡುತ್ತಿದ್ದಾರೆ.

ಇನ್ನು ಈ ಬಗ್ಗೆ ಉಪಮುಖ್ಯಮಂತ್ರಿ  ಲಕ್ಷ್ಮಣ ಸವದಿ ಅವರು ಪ್ರತಿಕ್ರಿಯಿಸಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.  ಭಾನುವಾರ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಬಗ್ಗೆ ಯಾರೇ ಮಾತನಾಡಿದರೂ ಅಂಥವರ ವಿರುದ್ಧ ಪಕ್ಷದ ವರಿಷ್ಠರು ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಎಚ್ಚರಿಸಿದರು.

ಮಾಜಿ ಶಾಸಕ ಶೀಘ್ರವೇ ಬಿಜೆಪಿಗೆ ಸೇರ್ಪಡೆ: ಹೊಸ ಬಾಂಬ್ ಸಿಡಿಸಿದ ಸಚಿವ ಜಾರಕಿಹೊಳಿ

ಬಸನಗೌಡ ಪಾಟೀಲ್ ಯತ್ನಾಳ ಆಗಲಿ, ಸವದಿಯಾಗಲಿ ವರಿಷ್ಠರ ಬಗ್ಗೆ ಮಾತನಾಡಿದರೆ ಶಿಸ್ತು ಕ್ರಮ ಎದುರಿಸಲೇಬೇಕು. ಅದನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ನೋಡಿಕೊಳ್ಳುತ್ತಾರೆ ಎಂದು ಖಡಕ್ ಆಗಿ ಹೇಳಿದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್‌ ಯತ್ನಾಳ್  ಬಹಿರಂಗವಾಗಿಯೇ ಬಂಡಾಯ ಸಾರುತ್ತಿದ್ದಾರೆ. ಆದ್ರೆ, ಬಿಜೆಪಿ ಹೈಕಮಾಂಡ್ ಗುಪ್ ಚುಪ್ ಆಗಿದೆ. ಇನ್ನು ಬಿಎಸ್‌ವೈ ಬೆಂಬಲಿತ ಶಾಸಕರು, ಸಚಿವರು ಮಾತ್ರ ಯತ್ನಾಳ್ ವಿರುದ್ಧ  ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.