ಬೆಂಗಳೂರು, (ಏ.17): ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಶನಿವಾರ ಶಾಂತಿಯುತ ಮತದಾನ ನಡೆದಿದೆ. 

ಮೂರೂ ಕ್ಷೇತ್ರಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಸಂಜೆ 7 ಗಂಟೆಗೆ ಮತದಾನ ಮುಕ್ತಾಯಗೊಂಡಿದೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸೋಂಕು ಹರಡದಂತೆ ಎಚ್ಚರ ವಹಿಸಲು ಮತಗಟ್ಟೆಗಳಲ್ಲಿ ಅಂತರ ಕಾಯ್ದುಕೊಂಡು ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇನ್ನು ಯಾವ ಕ್ಷೇತ್ರದಲ್ಲಿ ಎಷ್ಟು ಪರ್ಸೆಂಟ್‌ ಮತದಾನ ಆಗಿದೆ ಎನ್ನುವುದು ಈ ಕೆಳಗಿನಂತಿದೆ.

ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು, ಶೇ 54.73 ಮತದಾನವಾಗಿದೆ.

ಇನ್ನು ಪ್ರತಾಪ್ ಗೌಡ ಪಾಟೀಲ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ  ಮಸ್ಕಿ ವಿಧಾನಸಭೆಗೆ ಉಪಚುನಾವಣೆ ನಡೆಸಿದ್ದು,  ಶೇ 70.48ರಷ್ಟು ಮತದಾನವಾಗಿದೆ. ಕಾಂಗ್ರೆಸ್‌ನ ಬಸನಗೌಡ ತುರ್ವಿಹಾಳ್ ಹಾಗೂ ಬಿಜೆಪಿಯಿಂದ ಕಣಕ್ಕಿಳಿದಿರುವ ಪ್ರತಾಪ್‌ಗೌಡ ಪಾಟೀಲ್ ನಡುವೆ ಜಿದ್ದಾಜಿದ್ದಿ ಇದ್ದು, ಮೇ 2 ರಂದು ಯಾರು ಗೆಲ್ಲುತ್ತಾರೆ ಎನ್ನುವುದು ತಿಳಿಯಲಿದೆ.

ಕಾಂಗ್ರೆಸ್ ಶಾಸಕರಾಗಿದ್ದ ಬಿ. ನಾರಾಯಣರಾವ್ ಅವರ ನಿಧನದಿಂದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿದ್ದು, ಶೇ. 59.57ರಷ್ಟು ವೋಟಿಂಗ್ ಆಗಿದೆ. ಇಲ್ಲಿ ಬಿಜೆಪಿಯಿಂದ ಶರಣು ಸಲಗಾರ್, ಕಾಂಗ್ರೆಸ್‌ನಿಂದ ಮಾಲಾ ನಾರಾಯಣರಾವ್ ಸ್ಪರ್ಧಿಸಿದ್ದಾರೆ. 

ಈ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಮೇ 02 ರಂದು ಪ್ರಕಟವಾಗಲಿದೆ.