ಉತ್ತರ ಕನ್ನಡ: ಕಾಂಗ್ರೆಸ್‌ನಿಂದ ಹಿಂದೂ ವಿರೋಧಿ ಧೋರಣೆಯ ಪರಮಾವಧಿ, ಬಿಜೆಪಿ
ದೇಶದಲ್ಲಿ ಈಗ ರಾಮಭಕ್ತರೆಲ್ಲರೂ ಸಂತೋಷಪಡುವ ದಿನ ಸಮೀಪಿಸುತ್ತಿದೆ. ಹಿಂದೂಗಳ ಬಹುವರ್ಷಗಳ ಸಂಕಲ್ಪವಾಗಿದ್ದ ಭವ್ಯ ರಾಮಮಂದಿರ ಉದ್ಘಾಟನೆಗೆ ಮುಹೂರ್ತ ನಿಶ್ಚಯವಾಗಿದೆ. ನರೇಂದ್ರ ಮೋದಿ ಸರ್ಕಾರ ಕೊಟ್ಟ ಮಾತಿನಂತೆ ಮುತುವರ್ಜಿವಹಿಸಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ರಾಮಭಕ್ತರೆಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಅಲ್ಪಸಂಖ್ಯಾತರ ಓಲೈಕೆಯಲ್ಲಿಯೇ ಮುಳುಗಿರುವ ಕಾಂಗ್ರೆಸ್ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ: ಶಾಸಕ ದಿನಕರ ಶೆಟ್ಟಿ
ಕುಮಟಾ(ಜ.06): ರಾಮಭಕ್ತ ಕರಸೇವಕರನ್ನು ಬಂಧಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ದಿನಕರ ಕೆ. ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ಪೊಲೀಸ್ ಠಾಣೆ ಎದುರಿಗೆ ಶುಕ್ರವಾರ ಪ್ರತಿಭಟಿಸಲಾಯಿತು. ನಾನೊಬ್ಬ ಕರಸೇವಕ, ನನ್ನನ್ನು ಬಂಧಿಸಿ ಮುಂತಾದ ಫಲಕ ಹಿಡಿದು ಘೋಷಣೆ ಕೂಗಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ದೇಶದಲ್ಲಿ ಈಗ ರಾಮಭಕ್ತರೆಲ್ಲರೂ ಸಂತೋಷಪಡುವ ದಿನ ಸಮೀಪಿಸುತ್ತಿದೆ. ಹಿಂದೂಗಳ ಬಹುವರ್ಷಗಳ ಸಂಕಲ್ಪವಾಗಿದ್ದ ಭವ್ಯ ರಾಮಮಂದಿರ ಉದ್ಘಾಟನೆಗೆ ಮುಹೂರ್ತ ನಿಶ್ಚಯವಾಗಿದೆ. ನರೇಂದ್ರ ಮೋದಿ ಸರ್ಕಾರ ಕೊಟ್ಟ ಮಾತಿನಂತೆ ಮುತುವರ್ಜಿವಹಿಸಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ರಾಮಭಕ್ತರೆಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಅಲ್ಪಸಂಖ್ಯಾತರ ಓಲೈಕೆಯಲ್ಲಿಯೇ ಮುಳುಗಿರುವ ಕಾಂಗ್ರೆಸ್ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ೩೧ ವರ್ಷದಷ್ಟು ಹಳೆಯ ಪ್ರಕರಣವನ್ನು ಈಗ ಕೈಗೆತ್ತಿಕೊಂಡು ಕರಸೇವಕರನ್ನು ಬಂಧಿಸುವ ಮೂಲಕ ಹಿಂದೂ ವಿರೋಧಿ ಧೋರಣೆಯ ಪರಮಾವಧಿ ಪ್ರದರ್ಶಿಸುತ್ತಿದೆ. ಇದನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದರು.
ಶ್ರೀಕಾಂತ್ ಪೂಜಾರಿ ಜೊತೆ ಪ್ರತಿಯೊಬ್ಬ ರಾಮಭಕ್ತನೂ ಇದ್ದಾನೆ; ಬಿಡುಗಡೆ ಮಾಡೋವರೆಗೆ ಹೋರಾಟ: ಕೋಟ ಶ್ರೀನಿವಾಸ ಪೂಜಾರಿ
ರಾಮಭಕ್ತರು ಸ್ವಭಾವತಃ ಶಾಂತಿಪ್ರಿಯರು. ಹಾಗೆಂದು ಸುಖಾಸುಮ್ಮನೆ ನಮ್ಮ ತಾಳ್ಮೆ ಪರೀಕ್ಷಿಸುವ ದುಸ್ಸಾಹಸಕ್ಕೆ ಸಿದ್ದರಾಮಯ್ಯ ಸರ್ಕಾರ ಕೈಹಾಕಿದರೆ ಅದರ ಗಂಭೀರ ಪರಿಣಾಮ ಎದುರಿಸಲು ಸಿದ್ಧವಾಗಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಇತಿಹಾಸದುದ್ದಕ್ಕೂ ಬಹುಸಂಖ್ಯಾತ ಹಿಂದೂಗಳ ಭಾವನೆಗಳ ಜತೆಗೆ ಆಟವಾಡುತ್ತಾ ಬಂದಿರುವ ಕಾಂಗ್ರೆಸ್ ನಿರಂತರ ಸೋಲಿನ ಬಳಿಕವೂ ಬುದ್ಧಿ ಕಲಿತಂತಿಲ್ಲ. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ, ಬಿ.ಕೆ. ಹರಿಪ್ರಸಾದ, ಉದಯನಿಧಿ ಸ್ಟಾಲಿನ ಇನ್ನಿತರರು ನೀಡುತ್ತಿರುವ ಹೇಳಿಕೆಗಳು ನಮ್ಮ ಸನಾತನ ಧರ್ಮದ ಬಗ್ಗೆ ಅವರಿಗಿರುವ ಅಜ್ಞಾನವನ್ನು ತೋರಿಸುತ್ತದೆ. ಹಿಂದೂಗಳ ಬಗ್ಗೆ ಏನು ಹೇಳಿದರೂ ನಡೆಯುತ್ತದೆ ಎನ್ನುವ ಭಾವನೆ ಅವರಲ್ಲಿದೆ. ರಾಮಭಕ್ತರನ್ನು ಕೆಣಕಿದ ತಪ್ಪಿಗೆ ರಾವಣನಂತಹ ಮಹಾ ಪರಾಕ್ರಮಿಗೆ ಉಂಟಾದ ಗತಿಯನ್ನು ಸ್ಮರಣೆಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಮಭಕ್ತರ ತಂಟೆಗೆ ಬರಲಿ ಎಂದರು.
ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಜಿಲ್ಲಾ ಯುವಮೋರ್ಚಾ ಪ್ರಭಾರಿ ಎಂ.ಜಿ. ಭಟ್, ಜಿಲ್ಲಾ ಪದಾಧಿಕಾರಿಗಳಾದ ಪ್ರಶಾಂತ ನಾಯ್ಕ, ಗಜಾನನ ಗುನಗಾ, ಡಾ. ಜಿ.ಜಿ. ಹೆಗಡೆ, ಬಿಜೆಪಿ ಬೆಂಬಲಿತ ಪುರಸಭೆ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.