ಸಿದ್ದರಾಮಯ್ಯ ಅವರಷ್ಟು ನಾನು ಬುದ್ಧಿವಂತನಲ್ಲ: ಸಚಿವ ಸುಧಾಕರ್
ಭ್ರಷ್ಟಾಚಾರಕ್ಕೂ ಮತ್ತು ಜಾತಿಗೂ ಸಂಬಂಧವಿಲ್ಲ ಎಂಬುದು ಸತ್ಯ. ಆದರೆ, ಪ್ರಬಲ ಸಮುದಾಯದ ಮುಖ್ಯಮಂತ್ರಿ ಇದ್ದಾಗ ಅವರನ್ನು ವಿಶೇಷವಾಗಿ ಟಾರ್ಗೆಟ್ ಮಾಡುವುದು ಕಾಂಗ್ರೆಸ್‌ನ ಸಂಪ್ರದಾಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತೀಕ್ಷ್ಣವಾಗಿ ಹೇಳಿದ್ದಾರೆ.
ಬೆಂಗಳೂರು (ಸೆ.27): ಭ್ರಷ್ಟಾಚಾರಕ್ಕೂ ಮತ್ತು ಜಾತಿಗೂ ಸಂಬಂಧವಿಲ್ಲ ಎಂಬುದು ಸತ್ಯ. ಆದರೆ, ಪ್ರಬಲ ಸಮುದಾಯದ ಮುಖ್ಯಮಂತ್ರಿ ಇದ್ದಾಗ ಅವರನ್ನು ವಿಶೇಷವಾಗಿ ಟಾರ್ಗೆಟ್ ಮಾಡುವುದು ಕಾಂಗ್ರೆಸ್‌ನ ಸಂಪ್ರದಾಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತೀಕ್ಷ್ಣವಾಗಿ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರಬಲ ಸಮುದಾಯದ ವಿರುದ್ಧ ನಿಂತಿದೆ ಎಂಬುದು ಇತಿಹಾಸದಿಂದಲೇ ತಿಳಿದು ಬರುತ್ತದೆ.
ಕಾಂಗ್ರೆಸ್ ಅಧಿಕಾರದಿಂದ ಕೆಳಕ್ಕಿಳಿಸಿದ ನಾಯಕರ ಪಟ್ಟಿಯನ್ನೇ ನಾನು ನೀಡಿದ್ದೇನೆ. ಇದರ ಬಗ್ಗೆ ಕಾಂಗ್ರೆಸ್ ಮೊದಲು ಉತ್ತರ ನೀಡಲಿ ಎಂದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಷ್ಟು ನಾನು ಬುದ್ಧಿವಂತನಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜಮ್ಮು-ಕಾಶ್ಮೀರದಲ್ಲಿ ಶಾಂತಿಯುತವಾಗಿ ಚುನಾವಣೆ ಮಾಡಿಸಿದ್ದರು. ಈಶಾನ್ಯ ರಾಜ್ಯಗಳಿಗೆ ಅಂದಿನ ಕಾಲದಲ್ಲೇ ಒಂದೇ ಬಾರಿಗೆ ಆರು ಸಾವಿರ ಕೋಟಿ ರು. ಅನುದಾನ ನೀಡಿದ್ದರು. ಅಂತಹವರನ್ನೇ ಪ್ರಧಾನಿ ಸ್ಥಾನದಿಂದ ಕಾಂಗ್ರೆಸ್‌ನವರು ಕೆಳಕ್ಕಿಳಿಸಿದರು.
ಅಕ್ಟೋಬರ್ ಅಂತ್ಯಕ್ಕೆ ರಾಜ್ಯದಲ್ಲಿ 438 ‘ನಮ್ಮ ಕ್ಲಿನಿಕ್’ ಪ್ರಾರಂಭ: ಸಚಿವ ಸುಧಾಕರ್
ಪಿ.ವಿ.ನರಸಿಂಹರಾವ್, ರಾಜಶೇಖರಮೂರ್ತಿ, ಎಸ್.ನಿಜಲಿಂಗಪ್ಪ, ಎಸ್.ಎಂ.ಕೃಷ್ಣ ಮೊದಲಾದ ನಾಯಕರಿಗೆ ಕಾಂಗ್ರೆಸ್ ಏನು ಮಾಡಿದೆ ಎಂಬ ಪಟ್ಟಿಯೇ ಇದೆ ಎಂದು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಪ್ಪಿದ್ದಾರೆ ಎಂಬುದನ್ನು ಕಾಂಗ್ರೆಸ್ ಹೇಳಬೇಕು. ಬೊಮ್ಮಾಯಿ ಅವರು ಸಮರ್ಥ ಆಡಳಿತ ನೀಡುತ್ತಿರುವುದರಿಂದಲೇ ತಮಗೆ ಉಳಿಗಾಲ ಇಲ್ಲ ಎಂಬುದು ಕಾಂಗ್ರೆಸ್‌ಗೆ ಅರ್ಥವಾಗಿದೆ ಎಂದು ಲೇವಡಿ ಮಾಡಿದರು.
ಮುನಿಯಪ್ಪ ಬಿಜೆಪಿ ಸೇರ್ಪಡೆ ಸನ್ನಿಹಿತ?: ‘ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರು ನಮ್ಮ ಪಕ್ಷ ಸೇರುತ್ತಾರೆ ಎಂಬ ಆಶಾಭಾವನೆಯಲ್ಲಿ ನಾವೂ ಇದ್ದೇವೆ. ಮುನಿಯಪ್ಪನವರಷ್ಟೇ ಅಲ್ಲ ಕಾಂಗ್ರೆಸ್‌ನ ಬೇರೆ ಬೇರೆ ನಾಯಕರ ಜತೆ ನಾನು ಸಂಪರ್ಕದಲ್ಲಿದ್ದೇನೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ನಗರದಲ್ಲಿ ತಮ್ಮನ್ನು ಭೇಟಿಯಾಗಿ ಮಾತುಕತೆ ನಡೆಸಿದ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರೊಂದಿಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್ ಈ ಹೇಳಿಕೆ ನೀಡುವ ಮೂಲಕ ಮುನಿಯಪ್ಪ ಬಿಜೆಪಿ ಸೇರ್ಪಡೆ ಬಹುತೇಕ ಖಚಿತ ಎಂಬ ಸುಳಿವು ನೀಡಿದರು.
ತಮ್ಮ ಅನುಮತಿಯಿಲ್ಲದೆ ಮಾಜಿ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡ ಬಗ್ಗೆ ಅಸಮಾಧಾನಗೊಂಡಿರುವ ಮುನಿಯಪ್ಪ ಅವರು, ಕಳೆದ ಮೂರ್ನಾಲ್ಕು ತಿಂಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಬಳಿಕ ಸತತವಾಗಿ ಬಿಜೆಪಿ ಡಾ.ಕೆ.ಸುಧಾಕರ್ ಜತೆ ಸಂಪರ್ಕ ಹೊಂದಿರುವ ಅವರು ಶನಿವಾರವೂ ಸುಧಾಕರ್ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿದರು.
ವಿಶ್ವಕರ್ಮ ಜನಾಂಗ ಉನ್ನತ ಶಿಕ್ಷಣಕ್ಕೆ ಒತ್ತು ನೀಡಲಿ: ಸಚಿವ ಸುಧಾಕರ್
ಈ ಬಗ್ಗೆ ಮಾತನಾಡಿದ ಸುಧಾಕರ್, ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರೊಂದಿಗೆ ನನಗೆ ಉತ್ತಮ ವೈಯಕ್ತಿಕ ಸಂಬಂಧವಿದೆ. ಹೀಗಾಗಿ ಅವರನ್ನು ಭೇಟಿ ಮಾಡಲಾಗಿದೆಯೇ ಹೊರತು ಅದರಲ್ಲಿ ರಾಜಕೀಯ ಇಲ್ಲ. ಅವರು ಎಲ್ಲಿದ್ದರೂ ರಾಜಕೀಯ ಶಕ್ತಿಯಾಗಿಯೇ ಇದ್ದಾರೆ. ಆದರೆ, ಮುನಿಯಪ್ಪ ಅವರು ನಮ್ಮ ಪಕ್ಷ ಸೇರುತ್ತಾರೆ ಎಂಬ ಆಶಾಭಾವನೆ ಹೊಂದಿದ್ದೇನೆ. ಯಾವುದೇ ಒಳ್ಳೆಯ ನಾಯಕರು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ. ಮುನಿಯಪ್ಪ ಅವರು ಮಾತ್ರವಲ್ಲ ಕಾಂಗ್ರೆಸ್‌ನ ಅನೇಕ ನಾಯಕರ ಜತೆ ನಾನು ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.