ಭವಾನಿ ಮಾತ್ರ ಕ್ಷೇತ್ರದಲ್ಲಿ ಸದ್ದಿಲ್ಲದೆ ಪ್ರಚಾರದಲ್ಲಿ ತೊಡಗಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಈ ಬೆಳವಣಿಗೆಗಳು ದೇವೇಗೌಡರ ಕುಟುಂಬದಲ್ಲಿ ವಿಧಾನಸಭೆ ಚುನಾವಣೆ ಸ್ಪರ್ಧೆಯ ವಿಚಾರವಾಗಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಹ ಹುಟ್ಟುಹಾಕಿವೆ.

ಹಾಸನ(ಜ.28): ಹಾಸನ ವಿಧಾನಸಭಾ ಕ್ಷೇತ್ರದಿಂದ ತಮಗೆ ಟಿಕೆಟ್‌ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಸ್ವಯಂಘೋಷಣೆ ಮಾಡಿಕೊಂಡಿದ್ದ ಭವಾನಿ ರೇವಣ್ಣ, ಅದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಪಸ್ವರ ಎತ್ತಿದ ಬೆನ್ನಲ್ಲೇ ಮೌನಕ್ಕೆ ಶರಣಾಗಿದ್ದಾರೆ. ಅಲ್ಲದೆ, ಅವರ ಪುತ್ರ ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಕೂಡ ಈ ಕುರಿತು ಮೌನ ತಾಳಿದ್ದು, ಮುಂದೆ ಮಾತನಾಡುತ್ತೇವೆ ಎಂದಿದ್ದಾರೆ. ಆದರೆ, ಭವಾನಿ ಮಾತ್ರ ಕ್ಷೇತ್ರದಲ್ಲಿ ಸದ್ದಿಲ್ಲದೆ ಪ್ರಚಾರದಲ್ಲಿ ತೊಡಗಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಈ ಬೆಳವಣಿಗೆಗಳು ದೇವೇಗೌಡರ ಕುಟುಂಬದಲ್ಲಿ ವಿಧಾನಸಭೆ ಚುನಾವಣೆ ಸ್ಪರ್ಧೆಯ ವಿಚಾರವಾಗಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಹ ಹುಟ್ಟುಹಾಕಿವೆ.

ಜ.24ರಂದು ತಾಲೂಕಿನ ಸಾಲಗಾಮೆ ಹೋಬಳಿಯ ಕಕ್ಕೀಹಳ್ಳಿಯಲ್ಲಿ ನಡೆದ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ನಾನೇ, ಈ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ’ ಎಂದು ಹೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಹಾಸನ ವಿಧಾನಸಭಾ ಕ್ಷೇತ್ರದಿಂದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವ ಶಕ್ತಿ ಜೆಡಿಎಸ್‌ಗೆ ಇದೆ ಎನ್ನುವ ಮೂಲಕ ಭವಾನಿ ಅವರ ಸ್ಪರ್ಧೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರೇವಣ್ಣ ಕುಟುಂಬ ಈ ವಿಚಾರದಲ್ಲಿ ಈಗ ಮೌನಕ್ಕೆ ಶರಣಾದಂತಿದೆ.

JDS Ticket: ಭವಾನಿ ರೇವಣ್ಣ ಶಾಸಕಿಯಾಗುವ ಆಸೆಗೆ ತಣ್ಣೀರು: ಟಿಕೆಟ್‌ ಕೊಡುವುದಿಲ್ಲವೆಂದ ಕುಮಾರಸ್ವಾಮಿ

ಇಷ್ಟಾಗಿಯೂ, ಭವಾನಿ ರೇವಣ್ಣ ಅವರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮುಂದುವರಿಸಿದ್ದಾರೆ. ಶುಕ್ರವಾರ ಹಾಸನ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಮತದಾರರನ್ನು ಭೇಟಿ ಮಾಡಿದರು. ಬಳಿಕ, ನಗರದ ಹೊರವಲಯದ ಬುಸ್ತೇನಹಳ್ಳಿಯಲ್ಲಿ ಮಾಸ್ತಿಯಮ್ಮ ದೇಗುಲದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಾವ ದೇವೇಗೌಡ, ಅತ್ತೆ ಚೆನ್ನಮ್ಮ, ಪತಿ ರೇವಣ್ಣ, ಪುತ್ರರಾದ ಡಾ.ಸೂರಜ್‌, ಪ್ರಜ್ವಲ್‌, ಮೈದುನ ಎಚ್‌.ಡಿ.ಕುಮಾರಸ್ವಾಮಿ ಹಾಗೂ ತಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ಅರ್ಚನೆ ವೇಳೆ ಕುಮಾರಸ್ವಾಮಿ ಅವರ ಹೆಸರು ಹೇಳಿ ಸಾಕು ಎಂದರು. ತಾಯಿಗೆ ಪುತ್ರ, ಸಂಸದ ಪ್ರಜ್ವಲ್‌ ರೇವಣ್ಣ ಸಾಥ್‌ ನೀಡಿದರು.

ಈ ವೇಳೆ, ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಲು ಭವಾನಿ ಹಾಗೂ ಪ್ರಜ್ವಲ್‌ ಇಬ್ಬರೂ ನಿರಾಕರಿಸಿ, ಈ ಬಗ್ಗೆ ಸದ್ಯಕ್ಕೆ ಮಾತನಾಡುವುದಿಲ್ಲ ಎಂದರು. ಇದೇ ವೇಳೆ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಕೂಡ ಭವಾನಿ ಸ್ಪರ್ಧೆ ಕುರಿತು ಸದ್ಯಕ್ಕೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.