2 ರಾಷ್ಟ್ರೀಯ ಪಕ್ಷಗಳಿಗೆ ಎಚ್‌ಡಿಕೆ ಬಹಿರಂಗ ಪತ್ರ: ಉತ್ತರ ಕೊಡ್ತಾವಾ ಕಾಂಗ್ರೆಸ್, ಬಿಜೆಪಿ?
ಡಿ.ಜೆ. ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಇದರ ಮಧ್ಯೆ ಎಚ್. ಡಿ. ಕುಮಾರಸ್ವಾಮಿ, ಬಿಜೆಪಿಗೆ ಐದು ಪ್ರಶ್ನೆಗಳನ್ನ ಕೇಳಿದ್ದಾರೆ.
ಬೆಂಗಳೂರು, (ಆ.21): ನಗರದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗ ಪತ್ರ ಬರೆದಿದ್ದು, ಘಟನೆ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್‌ಗೆ 5 ಪ್ರಶ್ನೆಗಳನ್ನ ಕೇಳಿದ್ದಾರೆ.
ಡಿ.ಜೆ ಹಳ್ಳಿ ಗಲಭೆಯು ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ. ಈ ಘಟನೆಯನ್ನು ಪರಾಮರ್ಶಿಸಿ, ದುಷ್ಟರನ್ನು ಶಿಕ್ಷಿಸುವ ಕಾರ್ಯವಾಗಬೇಕಾಗಿತ್ತು. ಈ ಘಟನೆಯ ಅಧ್ಯಯನದ ಮೂಲಕ ಮುಂದಿನ ದಿನಗಳಲ್ಲಿ ಗಲಭೆಗಳು ಸಂಭವಿಸದಂತೆ ಎಚ್ಚರಿಕೆ, ಜವಾಬ್ದಾರಿಯುತ ನಡವಳಿಕೆಯನ್ನು ಸರ್ಕಾರ ಮತ್ತು ಅದರ ಚುಕ್ಕಾಣಿ ಹಿಡಿದಿರುವ ಪಕ್ಷ, ವಿಪಕ್ಷ ಪ್ರದರ್ಶಿಸಬೇಕಾಗಿತ್ತು.
ಯಡಿಯೂರಪ್ಪಗೆ ಪತ್ರ ಬರೆದ ಸಿದ್ದರಾಮಯ್ಯ, 13 ಅಂಶಗಳು ಉಲ್ಲೇಖ
ಆದರೆ, ಈ ಘಟನೆಯನ್ನೇ ನೆಪ ಮಾಡಿಕೊಂಡು ರಾಷ್ಟ್ರೀಯ ಪಕ್ಷಗಳೆರಡು ಕೆಸರೆರಚಾಟದಲ್ಲಿ ತೊಡಗಿವೆ. ಈ ಮೂಲಕ ಜನರ ಮನಸ್ಸಿನಲ್ಲಿರಬಹುದಾದ ತಮ್ಮ ವಿಶ್ವಾಸಾರ್ಹತೆ, ಉತ್ತರದಾಯಿತ್ವವನ್ನು ಬಿಜೆಪಿ, ಕಾಂಗ್ರೆಸ್ ಪಕ್ಷಗಳೆರಡೂ ಕಳೆದುಕೊಂಡು ನಿರ್ವಾಣಗೊಂಡಿವೆ. ಪ್ರತಿ ಘಟನೆಯಲ್ಲೂ ರಾಜಕೀಯ ಧ್ರುವೀಕರಣಕ್ಕೆ ಬೇಕಾಗುವ ಅಂಶ ಹುಡುಕುವ ಈ ಎರಡೂ ಪಕ್ಷಗಳು ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಬಲ್ಲವೇ? ಎಂದು ಕುಮಾರಸ್ವಾಮಿ ಕೇಳಿದ್ದಾರೆ.
1. ಡಿಜೆ ಹಳ್ಳಿ ಗಲಭೆ ಪ್ರಕರಣ ಮತ್ತು ಪಾದರಾಯನಪುರ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ರಕ್ಷಕನಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ. ಅನ್ಯ ಕೋಮಿನ ಜನರ ಅಪರಾಧ ಪ್ರಕರಣಗಳ ಸಂದರ್ಭದಲ್ಲಿ ಎದ್ದು ನಿಲ್ಲುವ ಕಾಂಗ್ರೆಸ್, ಪೌರತ್ವ ತಿದ್ದುಪಡಿ ಕಾಯ್ದೆಯಂಥ ದುರಿತ ಕಾಲದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಏಕೆ ನಿಲ್ಲಲಿಲ್ಲ? ಮಂಗಳೂರಿನಲ್ಲಿ ಗೋಲಿಬಾರ್ ಆಗಿ ಅಲ್ಪಸಂಖ್ಯಾತ ಯುವಕರು ಮೃತಪಟ್ಟಾಗ ಎಲ್ಲಿ ಹೋಗಿತ್ತು ಈ ಕಾಳಜಿ? ಕ್ರೈಂ ಸಂಭವಿಸಿದಾಗ ಮಾತ್ರವೇ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ರಕ್ಷಣೆ ಕಾಣಿಸುತ್ತದೆಯೇ?
2. ಗಲಭೆಯಲ್ಲಿ ನಷ್ಟವನ್ನು ಗಲಭೆಕೋರರಿಂದ ಸಂಗ್ರಹಿಸಲು ಹೊರಟ ಸರ್ಕಾರಕ್ಕೆ ಕಾಂಗ್ರೆಸ್ ಸಲಹೆಯೊಂದನ್ನು ನೀಡಿದೆ. ‘ಇನ್ನೊಂದು ಕಡೆ'ಯವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹೇಳಿದೆ. ಹಾಗಾದರೆ, ಆ ‘ಇನ್ನೊಂದು ಕಡೆಯವರು' ಯಾರು ಎಂದು ಕಾಂಗ್ರೆಸ್ ಧೈರ್ಯದಿಂದ ಹೇಳಬಹುದೇ?
3. ಎಸ್‌ಡಿಪಿಐ ಅನ್ನು ನಿಷೇಧಿಸುವ ವಿಚಾರ ಬಂದಾಗ ಕಾಂಗ್ರೆಸ್ ಸಿಡಿದೆದ್ದು ನಿಲ್ಲುತ್ತದೆ. ತಾಕತ್ತಿದ್ದರೆ ಅದನ್ನು ನಿಷೇಧಿಸಿ ಎಂದು ಆಡಳಿತದಲ್ಲಿರುವವರಿಗೆ ಸವಾಲೆಸೆಯುತ್ತದೆ. ಅದರ ನಿಷೇಧವಾಗುವುದು, ಆಗದೇ ಇರುವುದರಲ್ಲಿ ಕಾಂಗ್ರೆಸ್‌ಗೆ ಏನು ಲಾಭವಿದೆ? ಇದರ ವಿವರಣೆ ನೀಡಬಹುದೇ?
4. ಗಲಭೆಯಲ್ಲಿ ಏನೋ ರಾಜಕೀಯ ಷಡ್ಯಂತ್ರವಿದೆ ಎಂಬುದು ಕಾಂಗ್ರೆಸ್ ಆರೋಪ. ಆ ಷಡ್ಯಂತ್ರ ಕಾಂಗ್ರೆಸ್ ಒಳಗಿನದ್ದೋ, ಹೊರಗಿನದ್ದೋ? ಟಿಕೆಟ್ ಆಕಾಂಕ್ಷಿಗಳದ್ದೋ? ಗುಟ್ಟಾಗಿರುವ ಈ ವಿಷಯ ಬಹಿರಂಗಗೊಳಿಸಲು ಕಾಂಗ್ರೆಸ್‌ಗೆ ತಾಕತ್ತು ಇದೆಯೇ? ಬೇರೆ ಪಕ್ಷಗಳಿಂದ ಕರೆದುಕೊಂಡು ಹೋದ ಮುಖಂಡರು ಕಾಂಗ್ರೆಸ್‌ಗೆ ಕೆಲ ಬಾರಿ ಅಪಥ್ಯವಾಗುತ್ತಾರೆಯೇ?
5. ಆಂತರಿಕ ಸಮಸ್ಯೆಯನ್ನು ಗಲಭೆಯಾಗಿ ಪರಿವರ್ತಿಸಿ, ಎರಡು ಕೋಮುಗಳ ನಡುವೆ ಮನಸ್ತಾಪ ತಂದಿಟ್ಟು, ಸಾಮಾಜಿಕ ಸಾಮರಸ್ಯ ಹಾಳು ಮಾಡಿದ ಬಗ್ಗೆ ಕಾಂಗ್ರೆಸ್‌ಗೆ ಸ್ವಲ್ಪವಾದರೂ ಅಳುಕಿದೆಯೇ? ಎಂದು ಕಾಂಗ್ರೆಸ್‌ಗೆ ಪ್ರಶ್ನೆಗಳನ್ನು ಹಾಕಿದ್ದಾರೆ.