ಮತ್ತೆ ರಾಜ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗುವ ಬಗ್ಗೆ ಭವಿಷ್ಯ ನುಡಿಯಲಾಗಿದೆ.  ಏಕಾಂಗಿಯಾಗಿ ಅಧಿಕಾರಕ್ಕೇರಲಿದೆ ಎಂದು ಹೇಳಲಾಗಿದೆ. 

ಬೆಂಗಳೂರು (ಮಾ.16): ರಾಜ್ಯದಲ್ಲಿ 2023ಕ್ಕೆ ಮತ್ತೊಮ್ಮೆ ಎಚ್‌.ಡಿ.ಕುಮಾರಸ್ವಾಮಿ ನೇತೃತದ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತದೆಯೋ, ಮೈತ್ರಿ ಸರ್ಕಾರ ಬರುತ್ತದೆಯೋ ಹೇಳುವುದಿಲ್ಲ. ಆದರೆ, ಅಧಿಕಾರಕ್ಕೆ ಬರುವುದು ಪಕ್ಕಾ. ಕುಮಾರಸ್ವಾಮಿ ಹತ್ತಿರ ಕೆಲವು ಗ್ರಹಗಳು ಇದ್ದವು. ಅವು ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹತ್ತಿರ ಸೇರಿವೆ. ಕುಮಾರಸ್ವಾಮಿ ಕೆಲ ದಿನಗಳ ಕಾಲ ನೋವು ಅನುಭವಿಸಿದರು. ಆ ಗ್ರಹದ ಪರಿಣಾಮ ಶಿವಕುಮಾರ್‌ ಅನುಭವಿಸುವುದು ಬೇಡ ಎಂಬುದು ನಮ್ಮ ಕಳಕಳಿ ಎಂದರು.

ನನಗೆ ಸಿಎಂ ಸೀಟು ಬಿಟ್ಟುಕೊಡಿ : ದಿನ ದೂರ ಇಲ್ಲ ಎಂದ ಸಿದ್ದರಾಮಯ್ಯ

ಇನ್ನೂ ಕೆಲವು ಗ್ರಹಗಳಿದ್ದು, ಅವು ಹೋದರೆ ಎಲ್ಲವೂ ಸ್ವಚ್ಛ ಆಗುತ್ತದೆ. ಕಾಂಗ್ರೆಸ್‌ನಲ್ಲಿ ಗ್ರಹಗಳು ಕಡಿಮೆ ಇವೆ. ಈ ಗ್ರಹಗಳೆಲ್ಲಾ ಹೋದರೆ ಪಕ್ಷದವರಿಗೆ ಒಳ್ಳೆಯದಂತೂ ಆಗಲ್ಲ. ಭಗವಂತ ಶಿವಕುಮಾರ್‌ ಅವರಿಗೆ ಒಳ್ಳೆಯದು ಮಾಡಲಿ. ಒಂಭತ್ತು ಗ್ರಹಗಳು ಸುತ್ತುತ್ತವೆ. ಗ್ರಹಗಳು ಪಥ ಬದಲಿಸುತ್ತಿವೆ. ಕೆಪಿಸಿಸಿ ಅಧ್ಯಕ್ಷರು ಅದನ್ನು ಬರಮಾಡಿಕೊಳ್ಳುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.