Asianet Suvarna News Asianet Suvarna News

ಎಚ್‌ಡಿಕೆ ಇಂದು ದಿಲ್ಲಿಗೆ: ಜೆಡಿಎಸ್‌-ಬಿಜೆಪಿ ಮೈತ್ರಿ ಅಂತಿಮ ಸಾಧ್ಯತೆ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕುವ ಉದ್ದೇಶದಿಂದ ರಾಜ್ಯದಲ್ಲಿನ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಕೇಳಿಬರುತ್ತಿದ್ದ ಮೈತ್ರಿ ಪ್ರಕ್ರಿಯೆ ಇದೀಗ ತಾರ್ಕಿಕ ಹಂತಕ್ಕೆ ತಲುಪಿದೆ. 

HD Kumaraswamy to Delhi today JDS BJP alliance final possibility gvd
Author
First Published Sep 21, 2023, 6:43 AM IST

ಬೆಂಗಳೂರು (ಸೆ.21): ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕುವ ಉದ್ದೇಶದಿಂದ ರಾಜ್ಯದಲ್ಲಿನ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಕೇಳಿಬರುತ್ತಿದ್ದ ಮೈತ್ರಿ ಪ್ರಕ್ರಿಯೆ ಇದೀಗ ತಾರ್ಕಿಕ ಹಂತಕ್ಕೆ ತಲುಪಿದೆ. ಮೈತ್ರಿ ಮಾಡಿಕೊಳ್ಳುವ ಕುರಿತು ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಂಬಂಧ ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ದೆಹಲಿಗೆ ತೆರಳಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ.

ಈಗಾಗಲೇ ಹಲವು ದಿನಗಳ ಹಿಂದೆಯೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ವೇಳೆ ಉಭಯ ಪಕ್ಷಗಳ ನಡುವೆ ಮೈತ್ರಿ ಕುರಿತಂತೆ ತಾತ್ವಿಕವಾಗಿ ಮಾತುಕತೆ ನಡೆಸಿದ್ದರು. ಇದೀಗ ಅದರ ಮುಂದಿನ ಹಂತದ ಮಾತುಕತೆಯನ್ನು ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಂದಿಗೆ ನಡೆಸಲಿದ್ದಾರೆ. ಈಗಾಗಲೇ ಸಂಸತ್ ಅಧಿವೇಶನ ಹಿನ್ನೆಲೆ ದೇವೇಗೌಡರು ದೆಹಲಿಯಲ್ಲಿದ್ದಾರೆ. ಸಹೋದರ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರೂ ಪುತ್ರನ ಸಂಸತ್‌ ಸದಸ್ಯತ್ವ ಕುರಿತಾದ ಕಾನೂನು ಸಮರದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ತಂಗಿದ್ದಾರೆ. ಹೀಗಾಗಿ, ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿ ಮೈತ್ರಿ ಪ್ರಕ್ರಿಯೆ ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಕಾವೇರಿ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ಇಲ್ಲದಿರುವುದು ಸಮಸ್ಯೆ ಹೆಚ್ಚಲು ಕಾರಣ: ಸಿದ್ದರಾಮಯ್ಯ

ಇಂದು ಅಂತಿಮ ಇಲ್ಲ?: ಆದರೆ, ಈ ಭೇಟಿಯ ವೇಳೆಯೇ ಮೈತ್ರಿ ಮಾತುಕತೆ ಅಂತಿಮಗೊಳ್ಳುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕುಮಾರಸ್ವಾಮಿ ಅವರೊಂದಿಗಿನ ಮಾತುಕತೆ ಬಳಿಕ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯದ ಹಿರಿಯ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳಬಹುದು. ಅದನ್ನು ದೂರವಾಣಿ ಮೂಲಕವೇ ಸಂಪರ್ಕಿಸಿ ಮಾಡುವ ಸಾಧ್ಯತೆ ಕಡಮೆ. ತಕ್ಷಣವೇ ರಾಜ್ಯದ ಹಿರಿಯ ನಾಯಕರನ್ನು ದೆಹಲಿಗೆ ಕರೆಸಿಕೊಳ್ಳಬಹುದು ಅಥವಾ ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಮೈತ್ರಿ ಪ್ರಕ್ರಿಯೆಗೆ ಅಂತಿಮ ಮುದ್ರೆ ಬೀಳಬಹುದು ಎನ್ನಲಾಗಿದೆ.

ಈವರೆಗೆ ಬಿಜೆಪಿ ರಾಷ್ಟ್ರೀಯ ನಾಯಕರು ಜೆಡಿಎಸ್‌ ಜತೆಗಿನ ಮೈತ್ರಿ ಕುರಿತಂತೆ ರಾಜ್ಯ ನಾಯಕರೊಂದಿಗೆ ಪ್ರಸ್ತಾಪವನ್ನೇ ಮಾಡಿಲ್ಲ. ಇದನ್ನು ಬಿಜೆಪಿ ರಾಜ್ಯ ನಾಯಕರು ಅಧಿಕೃತವಾಗಿಯೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಈಗ ರಾಜ್ಯ ನಾಯಕರನ್ನು ಹೊರಗಿಟ್ಟು ಮಾತುಕತೆ ಪ್ರಕ್ರಿಯೆ ಅಂತಿಮಗೊಳಿಸಿದಲ್ಲಿ ಅದು ಕೆಟ್ಟ ಪರಿಣಾಮ ಉಂಟು ಮಾಡಬಹುದು ಎಂಬ ಆತಂಕ ರಾಷ್ಟ್ರೀಯ ನಾಯಕರಿಗೆ ಇದ್ದೇ ಇದೆ.

4-5 ಸ್ಥಾನಕ್ಕೆ ಜೆಡಿಎಸ್‌ ಪಟ್ಟು ಸಂಭವ: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕರಿಂದ ಐದು ಸ್ಥಾನಗಳನ್ನು ತಮಗೆ ಬಿಟ್ಟು ಕೊಡಬೇಕು ಎಂಬ ಬೇಡಿಕೆಯನ್ನು ಜೆಡಿಎಸ್ ನಾಯಕರು ಮುಂದಿಡುವ ಸಾಧ್ಯತೆಯಿದೆ. ಅದರಲ್ಲಿ ಎರಡು ಅಥವಾ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಹಾಲಿ ಸಂಸದರೇ ಇರುವ ಕ್ಷೇತ್ರಗಳೂ ಇರುವ ಸಂಭವವಿದೆ. ಹೀಗಾಗಿ, ಬಿಜೆಪಿ ರಾಷ್ಟ್ರೀಯ ನಾಯಕರು ಈ ಬಗ್ಗೆ ಒಂದು ಲೆಕ್ಕಾಚಾರ ಹಾಕಿಕೊಂಡು ಕುಳಿತಿರಬಹುದು. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸುವ ವೇಳೆ ಅಮಿತ್ ಶಾ ಮತ್ತು ನಡ್ಡಾ ಅವರು ತಮ್ಮ ಪಕ್ಷದ ನಿಲುವನ್ನು ತಿಳಿಸಬಹುದು. ಅದಕ್ಕೆ ಕುಮಾರಸ್ವಾಮಿ ಒಪ್ಪಿದಲ್ಲಿ ಪ್ರಕ್ರಿಯೆ ಸುಲಭವಾಗಿ ಆಗಬಹುದು. ಇಲ್ಲದಿದ್ದರೆ ಇನ್ನೂ ಕೆಲದಿನಗಳ ಕಾಲ ಮುಂದುವರೆಯಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

ಎಲ್ಲಕ್ಕಿಂತ ಹೆಚ್ಚಾಗಿ ಕೇವಲ ಲೋಕಸಭಾ ಚುನಾವಣೆ ಮುಂದಿಟ್ಟುಕೊಂಡು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ನಡೆಯುವ ಸಾಧ್ಯತೆ ತೀರಾ ಕಡಮೆ. ಈಗ ನಡೆಯುವ ಮೈತ್ರಿ ಮುಂದಿನ ವಿವಿಧ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುಂದುವರೆಸುವ ಉದ್ದೇಶ ಉಭಯ ಪಕ್ಷಗಳ ನಾಯಕರಲ್ಲಿ ಇದ್ದಂತಿದೆ. ಹಾಗಿರುವಾಗ ಮೈತ್ರಿ ಮಾತುಕತೆ ಅಂತಿಮಗೊಳ್ಳುವುದು ಇನ್ನಷ್ಟು ಕಾಲ ಬೇಕಾಗಬಹುದು ಎಂದು ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದರು.

ಚರ್ಚೆಗೆ ಬರಬಹುದಾದ ವಿಷಯಗಳು
* ಲೋಕಸಭಾ ಚುನಾವಣೆಯಲ್ಲಿನ ಸ್ಥಾನಗಳ ಹೊಂದಾಣಿಕೆ. ಅಂದರೆ, ಬಿಜೆಪಿ ಮತ್ತು ಜೆಡಿಎಸ್‌ ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದು ಇತ್ಯರ್ಥವಾಗಬೇಕು.

* ಹಾಲಿ ಬಿಜೆಪಿ ಸಂಸದರಿರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ತಮ್ಮ ಸಂಸದರನ್ನು ಮನವೊಲಿಸುವುದು ಹೇಗೆ ಎನ್ನುವುದು ನಿರ್ಧಾರವಾಗಬೇಕು.

* ಈ ಮೈತ್ರಿ ಕೇವಲ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿ ಇರಬೇಕೆ ಅಥವಾ ಮುಂದಿನ ಹಂತಕ್ಕೂ ಕೊಂಡೊಯ್ಯಬೇಕೆ ಎಂಬುದು ಸ್ಪಷ್ಟವಾಗಬೇಕು.

* ಉಭಯ ಪಕ್ಷಗಳ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಸಮಸ್ಯೆ ಉದ್ಭವಿಸದಂತೆ ಹೇಗೆ ನಿಭಾಯಿಸಬೇಕು ಎನ್ನುವ ರೂಪುರೇಷೆ ಸಿದ್ಧವಾಗಬೇಕು.

ಎಸ್ಸಿ,ಎಸ್ಟಿ, ಅಲ್ಪಸಂಖ್ಯಾತ, ವೀರಶೈವರಿಗೂ ಡಿಸಿಎಂ ಹುದ್ದೆ ಸಿಗಲಿ: ಸಚಿವ ರಾಜಣ್ಣ

ಬಿಜೆಪಿ- ಜೆಡಿಎಸ್‌ ಮೈತ್ರಿ ಕುರಿತ ಚರ್ಚೆ ಸಂಬಂಧ ನಾನು ಗುರುವಾರ ದೆಹಲಿಗೆ ಹೋಗುತ್ತಿದ್ದೇನೆ. ಬಿಜೆಪಿ ಹೈಕಮಾಂಡ್‌ನ ಕೆಲ ಉನ್ನತ ನಾಯಕರನ್ನು ಭೇಟಿ ಮಾಡುತ್ತೇನೆ. ಬಿಜೆಪಿ ವರಿಷ್ಠರ ಜತೆಗಿನ ಭೇಟಿ ವೇಳೆ ಏನೇನು ಚರ್ಚೆ ಆಗುತ್ತದೋ ನೋಡೋಣ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ನಾಯಕ

Follow Us:
Download App:
  • android
  • ios